ಹೋಂಸ್ಟೇಗಳ ನಿರ್ವಹಣೆ, ಮೇಲ್ವಿಚಾರಣೆಗೆ ಸಮಗ್ರವಾದ ಕಾನೂನು ರೂಪಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಮಹತ್ವದ ನಿರ್ದೇಶನ

ರಾಜ್ಯ

ಹೋಂಸ್ಟೇಗಳ ನಿರ್ವಹಣೆ ಮತ್ತು ಮೇಲ್ವಿಚಾರಣೆ ನಡೆಸಲು ಯಾವುದೇ ನಿರ್ದಿಷ್ಟ ಅಥವಾ ಸಮಗ್ರ ಕಾನೂನು ಚೌಕಟ್ಟು ಇಲ್ಲದಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್, ಈ ಸಂಬಂಧ ಸಮಗ್ರ ನೀತಿಯನ್ನು ರೂಪಿಸುವಂತೆ ರಾಜ್ಯ ಸರ್ಕಾರಕ್ಕೆ ಮಹತ್ವದ ನಿರ್ದೇಶನ ನೀಡಿದೆ. ಪೊನ್ನಂಪೇಟೆಯ ಕುಟ್ಟಾ ಗ್ರಾಮದ ಹೋಂಸ್ಟೇ ಒಂದರ ಮಾಲೀಕ ಪಿ.ಎ. ಪೊನ್ನಪ್ಪ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠವು, ಹೋಂಸ್ಟೇಗಳ ಕಾರ್ಯಾಚರಣೆಯ ವೈವಿಧ್ಯತೆ ಮತ್ತು ಅಲ್ಲಿ ಉದ್ಭವಿಸುತ್ತಿರುವ ಕಾನೂನು ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ಹೊಸ ನಿಯಮಾವಳಿಗಳನ್ನು ರಚಿಸಲು ಸರ್ಕಾರಕ್ಕೆ ಕಾಲಾವಕಾಶ ನೀಡಿದೆ.

ಕೊಡಗಿನ ಪೊನ್ನಂಪೇಟೆಯ ಹೋಂಸ್ಟೇ ಒಂದರಲ್ಲಿ ಅಮೆರಿಕದ ಪ್ರಜೆಯೊಬ್ಬರ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಘಟನೆಯು ರಾಜ್ಯಾದ್ಯಂತ ಭಾರಿ ಸಂಚಲನ ಮೂಡಿಸಿತ್ತು. ಈ ಗಂಭೀರ ಪ್ರಕರಣದ ಬೆನ್ನಲ್ಲೇ, ಜಿಲ್ಲಾಡಳಿತವು ಯಾವುದೇ ಪೂರ್ವ ನೋಟಿಸ್ ನೀಡದೆಯೇ ಸದರಿ ಹೋಂಸ್ಟೇಯ ನೋಂದಣಿಯನ್ನು ರದ್ದುಗೊಳಿಸಿತ್ತು. ಈ ಕ್ರಮವನ್ನು ಪ್ರಶ್ನಿಸಿ ಮಾಲೀಕರು ಹೈಕೋರ್ಟ್ ಮೆಟ್ಟಿಲೇರಿದ್ದರು. ಕಾಯ್ದೆಯ ನಿಬಂಧನೆಗಳಾದ ನೈಸರ್ಗಿಕ ನ್ಯಾಯದ ತತ್ವವನ್ನು ಪಾಲಿಸದೆ, ಕೇವಲ ಏಕಪಕ್ಷೀಯವಾಗಿ ಪರವಾನಿಗೆ ರದ್ದುಪಡಿಸಿರುವುದು ಕಾನೂನುಬಾಹಿರ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ನ್ಯಾಯಾಲಯವು ತನ್ನ ಆದೇಶದಲ್ಲಿ ಹೋಂಸ್ಟೇಗಳ ಸ್ವರೂಪದ ಬಗ್ಗೆ ಬಹಳ ಮುಖ್ಯವಾದ ನಿಲುವು ತಳೆದಿದೆ. ಹೋಂಸ್ಟೇಗಳು ಕೇವಲ ಲಾಭಗಳಿಸುವ ವಾಣಿಜ್ಯ ಸಂಸ್ಥೆಗಳಲ್ಲ, ಅವು ಸಾರ್ವಜನಿಕರು ಉಪಯೋಗಿಸುವ ವಸತಿ ತಾಣಗಳಾಗಿವೆ. ಇಲ್ಲಿ ಅತಿಥಿಗಳಿಗೆ ಆಹಾರ, ವಸತಿ ಮತ್ತು ಭದ್ರತೆಯನ್ನು ಒದಗಿಸಲಾಗುತ್ತದೆ. ಹೀಗಾಗಿ ಸಾರ್ವಜನಿಕ ಸುರಕ್ಷತೆ, ಆರೋಗ್ಯ, ನೈರ್ಮಲ್ಯ, ಅಗ್ನಿ ಸುರಕ್ಷತೆ ಮತ್ತು ಗ್ರಾಹಕ ರಕ್ಷಣೆ ಇಲ್ಲಿ ಅತ್ಯಂತ ಮುಖ್ಯವಾಗುತ್ತದೆ ಎಂದು ಪೀಠ ವಿವರಿಸಿದೆ.