ಧರ್ಮಸ್ಥಳ ಪ್ರಕರಣ: ಬೇಜಾವಾಬ್ದಾರಿಯುತ ಪೋಸ್ಟ್ ಹಾಕುವ ಪ್ರವೃತ್ತಿಯನ್ನು ತಕ್ಷಣವೇ ನಿಲ್ಲಿಸಬೇಕು. ಗಿರೀಶ್ ಮಟ್ಟಣ್ಣ ನವರಿಗೆ ಹೈಕೋರ್ಟ್ ಖಡಕ್‌ ತಾಕೀತು

ಕರಾವಳಿ

ವೀರೇಂದ್ರ ಹೆಗ್ಗಡೆಯವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕವಾಗಿ ತೇಜೋವಧೆ ಮಾಡುವಂತಹ ಕೆಲಸಗಳನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಗಿರೀಶ್ ಮಟ್ಟಣ್ಣ ನವರಿಗೆ ಹೈಕೋರ್ಟ್ ಖಡಕ್‌ ತಾಕೀತು ಮಾಡಿದೆ. ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ಮತ್ತು ಇದಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ಜೆಎಂಎಫ್‌ಸಿ ಕೋರ್ಟ್‌ನ ವಿಚಾರಣೆ ರದ್ದುಪಡಿಸಬೇಕು ಎಂದು ಕೋರಿ ಗಿರೀಶ್ ಮಟ್ಟಣವರ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ಹೈಕೋರ್ಟ್‌ ವಕೀಲ ಆರ್.ರಂಗನಾಥ ರೆಡ್ಡಿ, ಅರ್ಜಿದಾರರಿಂದ ಸಾರ್ವಜನಿಕ ಶಾಂತಿ ಭಂಗ ಉಂಟಾದ ಅಥವಾ ಗಲಭೆ ನಡೆದ ಯಾವುದೇ ನಿರ್ದಿಷ್ಟ ಘಟನೆಯ ಉಲ್ಲೇಖವಿಲ್ಲ. ಕೇವಲ ಸಾರ್ವಜನಿಕ ಅಶಾಂತಿ ಸೃಷ್ಟಿಯಾಗಬಹುದು ಎಂಬ ಊಹೆಯ ಮೇಲೆ ಮೂರನೇ ವ್ಯಕ್ತಿಯೊಬ್ಬರು ನೀಡಿದ ದೂರು ಆಧರಿಸಿ ಈ ಪ್ರಕರಣ ದಾಖಲಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿನ ಹಳೆಯ ಪೋಸ್ಟ್‌ಗಳನ್ನೆಲ್ಲ ಹುಡುಕಿ ಹೆಕ್ಕಿತಂದು ಈ ದೂರು ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ಯಾವುದೇ ಬಾಧಿತ ವ್ಯಕ್ತಿ ದೂರು ದಾಖಲಿಸಿಲ್ಲ ಎಂದು ನ್ಯಾಯಪೀಠದ ಮುಂದೆ ವಿವರಿಸಿದರು.

ಇದನ್ನು ಅಲ್ಲಗಳೆದ ರಾಜ್ಯ ಪ್ರಾಸಿಕ್ಯೂಟರ್‌ ಬಿ.ಎನ್.ಜಗದೀಶ್, ಕ್ರಿಮಿನಲ್ ಕಾನೂನಿನ ಅನುಸಾರ ಮುಂದುವರಿಯಲು ಕೇವಲ ಸಂತ್ರಸ್ತರೇ ಆಗಬೇಕೆಂದೇನಿಲ್ಲ. ಯಾರು ಬೇಕಾದರೂ ದೂರು ನೀಡಬಹುದು ಎಂದು ಪ್ರತಿಪಾದಿಸಿದರು. ಅಂತೆಯೇ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ವಿವಾದಾತ್ಮಕ ಚಿತ್ರಗಳನ್ನು ನ್ಯಾಯಪೀಠದ ಗಮನಕ್ಕೆ ತಂದರು. ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರಗೊಳ್ಳುವ ಇಂತಹ ಪೋಸ್ಟ್‌ಗಳು ಸಾಮಾನ್ಯ ಜನರನ್ನು ತಲುಪುತ್ತವೆ. ಇದು ಸಮಾಜದ ಮೇಲೆ ಗಾಢವಾದ ಪ್ರಭಾವ ಬೀರುತ್ತದೆ ಎಂದು ಆಕ್ಷೇಪಿಸಿದರು.

ಅರ್ಜಿದಾರರ ವಿರುದ್ಧದ ಕಡತವನ್ನು ಪರಿಶೀಲಿಸಿ, ಗಿರೀಶ್ ಮಟ್ಟಣ್ಣವರ್ ಪೋಸ್ಟ್ ಮಾಡಿದ್ದಾರೆ ಎನ್ನಲಾದ ಚಿತ್ರವನ್ನು ರಂಗನಾಥ ರೆಡ್ಡಿ ಅವರಿಗೆ ಪ್ರದರ್ಶಿಸಿದ ನ್ಯಾಯಪೀಠ, ‘ನಿಮಗೆ ಇದೆಲ್ಲ ಏಕೆ ಬೇಕು.? ಇದರ ಅಗತ್ಯವೇನಿದೆ.? ನೀವು ನಿಮ್ಮ ಅಭಿಪ್ರಾಯ ವ್ಯಕ್ತಪಡಿಸಿ, ವಿಮರ್ಶೆ ಮಾಡಿ. ಯಾವುದೇ ತೊಂದರೆಯಿಲ್ಲ. ಭಿನ್ನಾಭಿಪ್ರಾಯ ಪ್ರಜಾಪ್ರಭುತ್ವದ ಸಾರವಾಗಿರಬಹುದು. ಆದರೆ ಇಂತಹ ನಡೆ ತರವಲ್ಲ’ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಸಾಮಾಜಿಕ ಜಾಲತಾಣಗಳಲ್ಲಿ ಬೇಜಾವಾಬ್ದಾರಿಯುತ ಪೋಸ್ಟ್ ಹಾಕುವ ಪ್ರವೃತ್ತಿಯನ್ನು ತಕ್ಷಣವೇ ನಿಲ್ಲಿಸಬೇಕು.’ ಎಂದು ಮಟ್ಟಣ್ಣವರ ಅವರಿಗೆ ಆದೇಶಿಸಿದ ನ್ಯಾಯಪೀಠ, ಈ ಕುರಿತು ಮುಂದಿನ ವಿಚಾರಣೆಯೊಳಗೆ ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಬೇಕು ಎಂದು ನಿರ್ದೇಶಿಸಿ ವಿಚಾರಣೆಯನ್ನು ಇದೇ 22ಕ್ಕೆ ಮುಂದೂಡಿತು.