ಅನಿವಾಸಿ ಕನ್ನಡಿಗರಿಗೊಂದು ಸಚಿವಾಲಯ; ಸೂಟು-ಬೂಟು ಕಾಕಾಗಳ ಆರತಿ ಮಂತ್ರ.!

ರಾಜ್ಯ

ಸಾಮಾನ್ಯ ಕನ್ನಡಿಗರ ಸಂಕಷ್ಟಕ್ಕೆ ಮಿಡಿಯುವ ಸಚಿವಾಲಯ ರಚನೆಯಾಗಲಿ

ಕಾರ್ಮಿಕರ ಬೆವರಿನ ಮೂಲಕವೇ ಕೋಟ್ಯಾಧಿಪತಿಗಳಾದ ಕೆಲವು ಅನಿವಾಸಿ ಉದ್ಯಮಿಗಳು ಸೂಟು ಬೂಟು ಧರಿಸಿ ಅನಿವಾಸಿ ಕನ್ನಡಿಗರಿಗೆ ಹೊಸ ಸಚಿವಾಲದ ಬೇಡಿಕೆಗಳನ್ನು ಇಟ್ಟಿದ್ದು, ಸಚಿವಾಲಯಕ್ಕೆ ಆರತಿ ಮಾಡಿ, ಗೂಟದ ಕಾರು ಕೊಡಿಸಲು ಪ್ರಯತ್ನ ಪಡುತ್ತಿದ್ದಾರೆ. ಅನಿವಾಸಿ ಕನ್ನಡಿಗರಿಗೆ ಸಚಿವಾಲಯ ಖಂಡಿತ ಬೇಕು. ಅದಕ್ಕೆ ಆರತಿ ಬೇಕೇ.? ಎಂಬುದೇ ಈಗಿನ ಪ್ರಶ್ನೆ.

ದೀರ್ಘ ಕಾಲ ಅನಿವಾಸಿ ಕನ್ನಡಿಗರ ಉಸ್ತುವಾರಿಯಾಗಿ ಬಡ ಹಾಗೂ ಮಧ್ಯಮ ವರ್ಗದ ಅನಿವಾಸಿಗಳ ಉದ್ಧಾರಕ್ಕಾಗಿ ಏನು ಕೆಲಸ ಮಾಡಿದ್ದಾರೆ. ಸೂಟು ಬೂಟು ಧರಿಸಿದ ಕಾಕಾಗಳಿಗೆ ಗಿರ್ಗಿಟ್ ಹೊಡೆದದ್ದೆ ವಿನಃ, ಸಾಮಾನ್ಯ ಪ್ರವಾಸಿಗರ ಅಭ್ಯುದಯಕ್ಕಾಗಿ ಕೆಲಸ ಮಾಡಿಲ್ಲ. ಕರ್ನಾಟಕದವರಿಗೆ ದುಬೈ ಹೊರತುಪಡಿಸಿ ಉಳಿದ ಎಮಿರೇಟ್ಸ್ ಗಳಲ್ಲಿ ವೀಸಾ ಸಿಗುತ್ತಿಲ್ಲ. ಮನೆಯ ಕಷ್ಟ ಹೋಗಲಾಡಿಸಲು ಪ್ಲೈಟ್ ಹತ್ತಿದ ಪ್ರವಾಸಿಗರ ಕನಸು ನಾಲ್ಕು ಗೋಡೆಗಳ ಮಧ್ಯೆ ಕಮರಿ ಹೋಗುತ್ತಿದೆ. ಗಲ್ಫ್ ಉದ್ಯೋಗದಲ್ಲಿರುವ ಬಹುಪಾಲು ಜನರ ಬದುಕು ಅಭದ್ರತೆಯಲ್ಲಿ ಕೂಡಿದೆ. ಮನೆ, ಕುಟುಂಬದ ಬೆಳಕಾಗಲು ಗಲ್ಫ್ ರಾಷ್ಟ್ರಗಳಿಗೆ ತೆರಳಿದ ಕನ್ನಡಿಗರ ಸ್ಥಿತಿಯಂತೂ ಶೋಚನೀಯ. ಕೆಲವರು ಉದ್ಯೋಗ ತೊರೆದು ಮತ್ತೆ ಹುಟ್ಟೂರಿಗೆ ಬಂದಿದ್ದಾರೆ. ಗಲ್ಫ್ ಜೀವನ ಇಷ್ಟೊಂದು ತ್ರಾಸದಾಯಕವಾಗಿರುವಾಗ ಉಸ್ತುವಾರಿಯಾಗಿದ್ದವರೊಬ್ಬರು ಸರಕಾರದ ಗಮನ ಸೆಳೆಯಲು ಎಷ್ಟೊಂದು ಯಶಸ್ವಿಯಾಗಿದ್ದಾರೆ ಅನ್ನುವುದೇ ಈಗಿನ ಯಕ್ಷ ಪ್ರಶ್ನೆ.

ಗಲ್ಫ್ ನ ಕೆಲವು ಕನ್ನಡಿಗರು ಸೂಟು ಬೂಟು ಧರಿಸಿ, ಪ್ಲೈಟ್ ಹತ್ತಿ ಇದೀಗ ವೈಟ್ ಕಾಲರ್.! ಉನ್ನತ ಅಧಿಕಾರಿಗಳ ಹೆಗಲಿಗೆ ಕೈ ಹಾಕಿ ಪೋಸು ಕೊಟ್ಟು, ಪೋಟೋ ಶೂಟ್ ಮಾಡಿರುವುದನ್ನು ಕಂಡು ಗಲ್ಫ್ ಕನ್ನಡಿಗರ ಜೀವನ ಹಸನಾಗಿದೆ, ಹೈ ಫೈ ಆಗಿದೆ ಎಂಬ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ. ಸೂಟು ಬೂಟು ಧರಿಸಿದ ಕೆಲವು ಅನಿವಾಸಿ ಕಾಕಾಗಳು ತಮ್ಮ ಉದ್ಯಮ ಸಂಸ್ಥೆಗಳಲ್ಲಿ ಇಲ್ಲಿನ ಕನ್ನಡಿಗರನ್ನು ಕತ್ತೆ ತರಹ ದುಡಿಸಿ, ಸರಿಯಾದ ಸಂಬಳವನ್ನು ನೀಡದೆ ಸತಾಯಿಸಿರುವ, ದುಡಿಸಿದ ಹಣದಿಂದ ಪರ್ಸಂಟೇಜ್ ಪಡೆಯುವ ಅನೇಕ ಉದಾಹರಣೆಗಳಿವೆ. ಅಂತಹವರು ಊರಿಗೆ ಬಂದು ದೊಡ್ಡ ಸಂಸ್ಥೆಗಳಲ್ಲಿ ಪದಾಧಿಕಾರಿಗಳಾಗಿ, ಸನ್ಮಾನ ಸ್ವೀಕರಿಸಿ ಉದ್ದುದ್ದ ಭಾಷಣ ಬಿಗಿಯುವುದು ಇದೆ. ಮ್ಯಾನ್ ಪವರ್ ನಂತಹ ಸಂಸ್ಥೆಗಳಲ್ಲಿ ದುಡಿಯುವ ಕನ್ನಡಿಗರ ಸ್ಥಿತಿಯಂತೂ ಆಯೋಮಯ. ಕಾರ್ಮಿಕರಿಗೆ ಸಂಬಳ ನೀಡದೆ ಕೆಲವು ದೊಡ್ಡ ಧಣಿಗಳು, ಸಮುದಾಯದ ಹಿತಚಿಂತಕರ ರೀತಿಯ ಪೋಸ್ ಕೊಡುತ್ತಿದ್ದಾರೆ.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗಲ್ಫ್ ಜೀವನ ಜೀವಾಳ. ಇಲ್ಲಿನ ಪ್ರತಿಯೊಂದು ಮನೆ ಮನೆಗಳಲ್ಲಿ ಗಲ್ಫ್ ಉದ್ಯೋಗಿಗಳು ಇದ್ದಾರೆ. ಅವರು ಬೆವರು ಹರಿಸಿ ದುಡಿದ ಪರಿಣಾಮ ಇಲ್ಲಿನ ಬಹುತೇಕ ಕುಟುಂಬಗಳು ದಡ ಸೇರುತ್ತಿದೆ. ಆದರೆ ಅಲ್ಲಿ ದುಡಿಯುವ ಕಾರ್ಮಿಕರ ಸಂಕಷ್ಟಕ್ಕೆ ಮಿಡಿಯಲು ಅನಿವಾಸಿ ಕನ್ನಡಿಗರಿಗೆ ಸಚಿವಾಲದ ಅವಶ್ಯಕತೆ ಖಂಡಿತ ಇದೆ. ವಿದೇಶದಲ್ಲಿ ದುಡಿಯುವ ಕನ್ನಡಿಗರಿಗಾಗಿ ಕಲ್ಯಾಣ ಯೋಜನೆಗಳನ್ನು ರೂಪಿಸಲು ನೆರವಾಗಬಹುದು.

ಆದರೆ ಕೆಲವು ಕಾಕಾಗಳ ಸುತ್ತ ಗಿರ್ಗೀಟ್ ಹೊಡೆಯುವ ಗಿರಾಕಿಗಳಿಗೆ ಅನಿವಾಸಿ ಸಚಿವಾಲಯದ ಮಂತ್ರಿ ಕೊಟ್ಟರೆ, ಕೇವಲ ಸೂಟು ಬೂಟು ಧರಿಸಿದ ಕೆಲವೊಂದು ಕಾಕಾಗಳು ಇನ್ನಷ್ಟು ದುಂಡಗಾಗುತ್ತಾರೆಯೇ ವಿನಃ ವಿದೇಶದಲ್ಲಿ ದುಡಿಯುವ ಸಾಮಾನ್ಯ ಕನ್ನಡಿಗರಿಗೆ ಇದರಿಂದ ಏನೂ ಪ್ರಯೋಜನವಿಲ್ಲ.

ಇನ್ನು ರಾಜ್ಯದಿಂದ ಗಲ್ಫ್ ಗೆ ತೆರಳುವ ಕೆಲವು ವೈಟ್ ಕಾಲರ್ ಕಾಕಾಗಳು ಅಲ್ಲಿನ ಸಾಮಾನ್ಯ ಕನ್ನಡಿಗರನ್ನು ಭೇಟಿ ಮಾಡಿ ಅವರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಅವರ ಕಷ್ಟವನ್ನು ಅರಿಯುವುದಿಲ್ಲ. ಆದರೆ ಕೆಲವು ಸೂಟು ಬೂಟುಗಳನ್ನು ಮಾತ್ರ ಭೇಟಿ ಮಾಡಿ, ಅವರ ಜೊತೆ ಬಿರಿಯಾನಿ ತಿಂದು ತೇಗಿ, ಪೋಟೋ ಸೂಟ್ ಮಾಡಿ ಸಮಾಜಿಕ ಜಾಲತಾಣದಲ್ಲಿ ಮಿಂಚುತ್ತಾರೆ. ಮಾತ್ರವಲ್ಲ ತಮ್ಮ ಹೂಡಿಕೆ ನಡೆಸಿ ದಷ್ಟ ಪುಷ್ಟರಾಗಿ ಬೆಳೆಯುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ‘ಅನಿವಾಸಿ ಕನ್ನಡಿಗರ ಸಮಸ್ಯೆಗೆ ಸ್ಪಂದಿಸಿದ ಭೇಟಿ’ ರೀತಿಯ ಪೋಸ್ಟ್ ಹಾಕುತ್ತಾರೆ. ಆದರೆ ಸೂಟು ಬೂಟು ಧರಿಸಿದವರನ್ನು ಬಿಟ್ಟು ಅಪ್ಪಿತಪ್ಪಿ ಸಾಮಾನ್ಯ ಶ್ರಮಿಕರನ್ನು ಭೇಟಿಯಾಗುವುದೇ ಇಲ್ಲ. ಇದೊಂದು ದೊಡ್ಡ ವಿಪರ್ಯಾಸ ಅಲ್ಲವೇ..?