ಮಲ್ಪೆ ಉದ್ಯಮಿ ಸಂದೀಪ್ ಸಾಲಿಯಾನ್ ಅವರ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಪ್ರಮುಖ ಆರೋಪಿ ಮಂಗಳೂರು ಮೂಲದ ಅಕ್ಷತಾ ಎಂ.ಕೆ. ಅಲಿಯಾಸ್ ರೂಪಶ್ರೀ ಎಂಬ ಮಹಿಳೆಯನ್ನು ಗೋವಾ ಪೊಲೀಸರು ಬೆಂಗಳೂರಿನಲ್ಲಿ ಶುಕ್ರವಾರ ರಾತ್ರಿ ಬಂಧಿಸಿದ್ದಾರೆ. ಜಲಕ್ರೀಡಾ ದೋಣಿಗಳ ಉದ್ಯಮಿಯಾಗಿದ್ದ ಸಂದೀಪ ಸಾಲಿಯಾನ್ ಮಲ್ಪೆ ನಿವಾಸಿಯಾಗಿದ್ದು, ಈ ಹಿಂದೆ ಮಾಜಿ ಸಚಿವರೊಬ್ಬರ ಕಾರು ಚಾಲಕರಾಗಿದ್ದರು. ನಂತರ ಚಾಲಕ ವೃತ್ತಿ ತೊರೆದು ಮಲ್ಪೆಯಲ್ಲಿ ಜಲಕ್ರೀಡಾ ದೋಣಿಯ ವ್ಯವಹಾರ ಆರಂಭಿಸಿದ್ದರು. ಜಲಕ್ರೀಡೆ ವ್ಯವಹಾರದಲ್ಲಿ ಉತ್ತಮ ಯಶಸ್ಸು ಸಾಧಿಸಿ ಪ್ರಮುಖ ಉದ್ಯಮಿಯಾಗಿ ಬೆಳೆದರು.
ಗೋವಾಕ್ಕೆ ತೆರಳಿದ್ದ ಸಂದೀಪ ಸಾಲಿಯಾನ್ ಅವರಿಗೆ ಇದೀಗ ಬಂಧಿತ ಆರೋಪಿ ಅಕ್ಷತಾ ಎಂಬ ಮಹಿಳೆ ಸಿಗರೇಟ್ ಸೇದಲು ಕೊಟ್ಟಿದ್ದಳು. ಅದನ್ನು ಸೇವಿಸುತ್ತಿದ್ದಂತೆ ಸಂದೀಪ್ ಪ್ರಜ್ಞಾಹೀನನಾಗಿ ಬಿದ್ದು ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಸಂದೀಪ್ ಕುತ್ತಿಗೆಯಲ್ಲಿದ್ದ ದಪ್ಪದಾದ ಚಿನ್ನದ ಸರವನ್ನು ದೋಚಿ ಆಕೆ ಪರಾರಿಯಾಗಿದ್ದಳು ಎಂದು ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ.
ಅಕ್ಷತಾ ಶ್ರೀಮಂತರ ಟಾರ್ಗೆಟ್ ಮಾಡಿ ವಂಚನೆಗೈಯ್ಯುತ್ತಿದ್ದಳು. ಶ್ರೀಮಂತರನ್ನು ಪಣಜಿಗೆ ಕರೆಸಿ ಕ್ಯಾಸಿನೋಗಳಿಗೆ ಬರುವಂತೆ ಆಮಿಷ ಒಡ್ಡಿ, ಅವರು ಬಂದ ಬಳಿಕ ಹೋಟೆಲ್ಗೆ ಕರೆದುಕೊಂಡು ಹೋಗಿ ಮತ್ತು ಭರಿಸುವ ಅಮಲು ಪದಾರ್ಥ ಅಥವಾ ಸಿಗರೇಟ್ ಸೇದಲು ಕೊಟ್ಟು ಪ್ರಜ್ಞೆ ತಪ್ಪಿಸುತ್ತಿದ್ದಳು. ಬಳಿಕ ಅವರ ಕುತ್ತಿಗೆಯಲ್ಲಿದ್ದ ಹಾಗೂ ಕೈಬೆರಳುಗಳಲ್ಲಿದ್ದ ಚಿನ್ನಾಭರಣ ದರೋಡೆ ಮಾಡುತ್ತಿದ್ದಳು ಎಂಬ ಆಘಾತಕಾರಿ ಸಂಗತಿಯೂ ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ. ಗುಜರಾತ್ನ ಉದ್ಯಮಿ ತೋಮೇಶ್ ಯಾದವ್ ಎಂಬ ಉದ್ಯಮಿಯನ್ನೂ ಸಹ ಹನಿಟ್ರ್ಯಾಪ್ಗೆ ಸಿಲುಕಿಸಿ, ಗೋವಾಕ್ಕೆ ಕರೆಸಿ ಪ್ರಜ್ಞೆ ತಪ್ಪಿಸಿ ಅವರಿಂದ 2.40 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ದರೋಡೆ ಮಾಡಿರುವುದೂ ಸಹ ಇದೀಗ ಬೆಳಕಿಗೆ ಬಂದಿದೆ.
ಗೋವಾದಲ್ಲಿ ಕ್ಯಾಸಿನೋಗಳಿಗೆ ಬರುವ ಶ್ರೀಮಂತರನ್ನು ತನ್ನ ಬಲೆಗೆ ಬೀಳಿಸಿಕೊಂಡು ಹೋಟೆಲ್ಗಳಿಗೆ ಕರೆದುಕೊಂಡು ಹೋಗಿ, ಪ್ರಜ್ಞೆ ತಪ್ಪಿಸಿ ಚಿನ್ನಾಭರಣ, ಹಣ ದರೋಡೆ ಮಾಡುವುದು, ಬಳಿಕ ಅವರಿಗೆ ಹನಿಟ್ರ್ಯಾಪ್ ಬೆದರಿಕೆ ಮೂಲಕ ಮತ್ತೆ ಹಣ ಕೀಳುವುದನ್ನೇ ಈ ಮಹಿಳೆ ದಂಧೆ ಮಾಡಿಕೊಂಡಿದ್ದ ಆತಂಕಕಾರಿ ಸಂಗತಿ ಗೋವಾ ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.
