ಮಂಗಳೂರು: ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ; ಅಪರಾದಿಗೆ 20 ವರ್ಷ ಕಠಿಣ ಸಜೆ; ಅಫ್ರಿದಿ ಯಾನೆ ಅಪ್ಪಿ ಶಿಕ್ಷೆಗೊಳಗಾದ ಅಪರಾಧಿ

ಕರಾವಳಿ

ಬಾಲಕಿಯ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ ಎಸಗಿ, ಜೀವ ಬೆದರಿಕೆ ಹಾಕಿದ ಗುರುಪುರ ಅಡ್ಡೂರು ಕೆಳಗಿನಕೆರೆಮನೆ ನಿವಾಸಿ ಅಫ್ರಿದಿ (20) ಎಂಬಾತನಿಗೆ 20 ವರ್ಷ ಕಠಿಣ ಸಜೆ ಮತ್ತು ಒಟ್ಟು 50 ಸಾವಿರ ರೂ. ದಂಡ ವಿಧಿಸಿ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ಪೋಕ್ಸೊ ವಿಶೇಷ ನ್ಯಾಯಾಲಯ ಗುರುವಾರ ತೀರ್ಪು ನೀಡಿದೆ.

ಬಂಟ್ವಾಳ ತಾಲೂಕಿನ 17 ವರ್ಷದ ಅಪ್ರಾಪ್ತ ಬಾಲಕಿ ಪ್ಯಾಶನ್ ಡಿಸೈನಿಂಗ್ ಕೋರ್ಸ್‌ ಕಲಿಯುತ್ತಿದ್ದಳು. ಈ ಸಂದರ್ಭ ಬಾಲಕಿಗೆ ಇನ್‌ಸ್ಟಾಗ್ರಾಂ ಮೂಲಕ ಕಾರು ಚಾಲಕ ಅಡ್ಡೂರಿನ ಅಫ್ರಿದಿ ಎಂಬಾತನ ಪರಿಚಯ ಆಗಿತ್ತು. ಆಕೆಯ ಜೊತೆ ಅನ್ಯೋನತೆ ಬೆಳೆಸಿಕೊಂಡ ಆರೋಪಿಯು ಪ್ರೀತಿಯ ನಾಟಕವಾಡಿ, ಇಬ್ಬರು ಪರಸ್ಪರ ಪ್ರೀತಿಸಿದ್ದರು. ಮದುವೆಯಾಗುವುದಾಗಿ ನಂಬಿಸಿ ಆಕೆಯೊಂದಿಗೆ ಸಲುಗೆ ಬೆಳೆಸಿದ್ದ ಅಫ್ರಿದಿ, ಎರಡು ವರ್ಷಗಳ ಹಿಂದೆ ಬಾಲಕಿ ಮನೆಯಲ್ಲಿ ಒಬ್ಬಳೇ ಇದ್ದಾಗ ಅಲ್ಲಿಗೆ ತೆರಳಿ ದೈಹಿಕ ಸಂಪರ್ಕ ಬೆಳೆಸಿದ್ದ. ಇದರ ವಿಡಿಯೊ ಮಾಡಿರುವುದಾಗಿ ಹೇಳಿ ಹೆದರಿಸಿದ್ದ, ಆಕೆಯ ಮೇಲೆ ಮತ್ತೆ ಮತ್ತೆ ನಿರಂತರ ಲೈಂಗಿಕ ದೌರ್ಜನ್ಯ ನಡೆಸಿದ್ದ. ಬಾಲಕಿಯ ಪೋಷಕರು ಕಳೆದ ವರ್ಷ ಮನೆ ಬದಲಾಯಿಸಿ ಬೆಳ್ತಂಗಡಿ ತಾಲೂಕಿಗೆ ಹೋಗಿ ನೆಲೆಸಿದ್ದರು. ಆ ವಿಳಾಸವನ್ನೂ ಪತ್ತೆಹಚ್ಚಿದ್ದ ಆತ ಅಲ್ಲಿಗೂ ತೆರಳಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.

ಇದಾದ ಬಳಿಕ ಆರೋಪಿಯು ಬಾಲಕಿಯಿಂದ ದೂರ ಸರಿದಿದ್ದು, ಕೊನೆಗೆ ಮದುವೆಯಾಗುವುದಿಲ್ಲ ಎಂದು ಹೇಳಿದಾಗ ಬಾಲಕಿ ಫಿನಾಯಿಲ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಆಕೆಯನ್ನು ಕೂಡಲೇ ದೇರಳಕಟ್ಟೆಯ ಖಾಸಾಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಹೀಗಾಗಿ ಆರೋಪಿ ವಿರುದ್ದ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ಬಗ್ಗೆ ಸಮಗ್ರ ವಿಚಾರಣೆ ನಡೆಸಿದ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ಅಪರಾಧಿಗೆ 20 ವರ್ಷಗಳ ಕಠಿಣ ಸಜೆ ಮತ್ತು 50 ಸಾವಿರ ರೂ. ದಂಡ ವಿಧಿಸಿದೆ. ದಂಡದ ಮೊತ್ತ ಸೇರಿದಂತೆ ಒಟ್ಟು ರೂಪಾಯಿ 6 ಲಕ್ಷವನ್ನು ಪರಿಹಾರ ರೂಪದಲ್ಲಿ ಬಾಲಕಿಗೆ ನೀಡಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಸೂಚಿಸಿದ್ದಾರೆ. ಬೆಳ್ತಂಗಡಿ ಠಾಣಾ ಪೊಲೀಸ್ ಇನ್ಸ್ ಪೆಕ್ಟರ್ ರವಿ ಬಿ. ಎಸ್ ಆರೋಪಿಯ ವಿರುದ್ದ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಸಂತ್ರಸ್ತೆಯ ಪರವಾಗಿ ಸರ್ಕಾರಿ ವಕೀಲರಾದ ಸಹನಾದೇವಿ ಬೋಳೂರು ವಾದಿಸಿದ್ದರು.