ಮಂಗಳೂರು ನಗರದ, ಉರ್ವ ಮಾರ್ಕೆಟ್ ಬಳಿಯ ಮಠದಕಣಿ ಎಂಬಲ್ಲಿಯ ಮನೆಯವರು ದಿನಾಂಕ 11-07-2026 ರಂದು ಸಂಜೆ ಮನೆಗೆ ಲಾಕ್ ಮಾಡಿ, ಬಂಟ್ವಾಳದಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಹೋಗಿ ದಿನಾಂಕ 12-07-2026 ರಂದು ವಾಪಾಸು ಬಂದು ನೋಡಿದಾಗ ಮನೆಯ ಹಿಂಬದಿಯ ಬಾಗಿಲು ಒಡೆದು ಯಾರೋ ಕಳ್ಳರು ಒಳ ನುಗ್ಗಿ ಮನೆಯಲ್ಲಿದ್ದ ಸುಮಾರು 64 ಗ್ರಾಂ ತೂಕದ ಚಿನ್ನಾಭರಣ ಹಾಗೂ 25 ಸಾವಿರ ರೂ. ಸೇರಿದಂತೆ ಒಟ್ಟು 8 ಲಕ್ಷದ 57 ಸಾವಿರ ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿರುವ ಬಗ್ಗೆ ನೀಡಿರುವ ದೂರಿನಂತೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಅ.ಕ್ರ 70/2026 ರಂತೆ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ನಡೆಸುತ್ತಿದ್ದರು.
ಪ್ರಕರಣ ದಾಖಲಾದ ಐದು ದಿನಗಳಲ್ಲಿ ಬರ್ಕೆ ಪೊಲೀಸರು ದಿನಾಂಕ 17-07-2026 ರ ಬೆಳಗ್ಗಿನ ಜಾವ ನೇಪಾಳ ಮೂಲದ 3 ಜನ ಕುಖ್ಯಾತ ಮನೆಗಳ್ಳರನ್ನು ಬೋಳೂರಿನಲ್ಲಿ ಬಂಧಿಸಿ, ವಿಚಾರಣೆಗೆ ಒಳಪಡಿಸಿದಾಗ ಬರ್ಕೆ ಪೊಲೀಸ್ ಠಾಣಾ ಪ್ರಕರಣಕ್ಕೆ ಸಂಭಂಧಿಸಿದಂತೆ ಎಲ್ಲಾ ಚಿನ್ನಾಭರಣಗಳು ಮತ್ತು ಆರೋಪಿತರು ಮಹಾರಾಷ್ಟ್ರ ರಾಜ್ಯದ ನಾಸಿಕ್ ನಗರದಲ್ಲಿ ಕಳ್ಳತನ ಮಾಡಿದ 790 ಗ್ರಾಂ ಬೆಳ್ಳಿ ಆಭರಣಗಳು ಸೇರಿದಂತೆ ಸುಮಾರು 10 ಲಕ್ಷ ಮೌಲ್ಯದ ಸೊತ್ತುಗಳನ್ನು ಆರೋಪಿಗಳಿಂದ ಬರ್ಕೆ ಪೊಲೀಸರು ವಶಕ್ಕೆ ಪಡೆದುಕೊಂಡಿರುತ್ತಾರೆ. ಬಂಧಿತರನ್ನು ತಿಲಕ್ ಕುಮಾರ್ ಖಡ್ಕ @ ತಿಲಕ್ ಖಡ್ಕ, ನೇಪಾಳ. ಅಶೋಕ್ ರಾಜ್ @ ಅಶೋಕ್ ಸಿಂಗ್ @ ಅಶೋಕ್ ಸಿಂಗ್ ಠಾಕುರಿ, ನೇಪಾಳ. ದಿಪೇಂದರ್ ರಸೈಲಿ ನೇಪಾಲಿ ಎಂದು ಗುರುತಿಸಲಾಗಿದೆ.
ಬಂಧಿತ ಆರೋಪಿಗಳು 2026ರ ಮಾರ್ಚ್ ತಿಂಗಳಲ್ಲಿ ಮಂಗಳೂರು ನಗರದ ಉರ್ವಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆ ಕಳ್ಳತನ ಪ್ರಯತ್ನ ಪಟ್ಟಿದ್ದು, ಯಾವುದೇ ವಸ್ತುಗಳು ಕಳವಾಗಿರುವುದಿಲ್ಲ. ಸದರಿ ಠಾಣೆಯಲ್ಲಿ ಅ.ಕ್ರ 44/2026 ರಂತೆ ಪ್ರಕರಣ ದಾಖಲಾಗಿದ್ದು, ಬಂಧಿತ ಆರೋಪಿಗಳು ಸದ್ರಿ ಪ್ರಕರಣದಲ್ಲಿಯೂ ಭಾಗಿಯಾಗಿರುವುದು ವಿಚಾರಣಾ ವೇಳೆಯಲ್ಲಿ ಒಪ್ಪಿಕೊಂಡಿರುತ್ತಾರೆ.
ಅಲ್ಲದೆ ಬೆಂಗಳೂರು, ದಾವಣಗೆರೆ, ಉಡುಪಿ ಸೇರಿದಂತೆ ಹಲವಾರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸುಮಾರು 15 ಕ್ಕೂ ಹೆಚ್ಚು ಮನೆ ಕಳ್ಳತನ ಪ್ರಕರಣ ಇವರ ಮೇಲೆ ದಾಖಲಾಗಿರುತ್ತದೆ. ತಮಿಳುನಾಡು, ದೆಹಲಿ, ಹರ್ಯಾಣ ರಾಜ್ಯಗಳಲ್ಲಿ ಆರೋಪಿತರ ಮೇಲೆ ಪ್ರಕರಣ ದಾಖಲಾಗಿರುತ್ತದೆ. ಆರೋಪಿಗಳನ್ನು ಹೆಚ್ಚಿನ ವಿಚಾರಣೆ ಒಳಪಡಿಸಿದ ಪೊಲೀಸರು, ಕಳವುಗೈದ ಸ್ವತ್ತುಗಳನ್ನು ವಶಕ್ಕೆ ಪಡೆದು, ಬಂಧಿತರನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ. ಆರೋಪಿಗಳ ಪತ್ತೆ ಕಾರ್ಯದಲ್ಲಿ ಬರ್ಕೆ ಪೊಲೀಸ್ ಠಾಣೆಯ ಅಧಿಕಾರಿಗಳು, ಸಿಬ್ಬಂದಿಗಳು ಭಾಗವಹಿಸಿದ್ದರು.
