ಮದುವೆಯಾಗುವುದಾಗಿ ನಂಬಿಸಿ ಬೆಳ್ತಂಗಡಿಯ ಉದ್ಯಮಿಗೆ 87 ಲಕ್ಷ ರೂ. ವಂಚನೆ, ಪ್ರಕರಣ ದಾಖಲು

ರಾಜ್ಯ

ಮ್ಯಾಟ್ರಿಮೋನಿ ವೆಬ್‌ಸೈಟ್ ಮೂಲಕ ಪರಿಚಯವಾಗಿ ಮದುವೆಯಾಗುವುದಾಗಿ ನಂಬಿಸಿ, ಬೆಳ್ತಂಗಡಿಯ ಉದ್ಯಮಿಯೊಬ್ಬರಿಂದ 87 ಲಕ್ಷ ರೂ. ಪಡೆದು ವಂಚಿಸಿರುವ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಯ್ಯೂರು ಗ್ರಾಮದ ಉದ್ಯಮಿ ಅನನ್ಯ ಕೃಷ್ಣ ಎಂಬವರಿಗೆ 2024ರ ಮೇ ತಿಂಗಳಲ್ಲಿ ಮ್ಯಾಟ್ರಿಮೋನಿ ಮೂಲಕ ಶಿವಮೊಗ್ಗ ಮೂಲದ ಅನಿಷಾ ಪಾಲನ್ನ ಎಂಬ ಯುವತಿಯ ಪರಿಚಯವಾಗಿತ್ತು. ಬಳಿಕ ಇಬ್ಬರೂ ಇನ್‌ ಸ್ಟಾಗ್ರಾಂ ಹಾಗೂ ಮೊಬೈಲ್ ಮೂಲಕ ಸಂಪರ್ಕ ದಲ್ಲಿದ್ದು, ಮದುವೆಯಾಗುವ ಕುರಿತು ಮೊಬೈಲ್ ನಲ್ಲಿ ಮಾತುಕತೆ ನಡೆಸುತ್ತಿದ್ದರು. ಈ ವೇಳೆ ಆರೋಪಿ ಅನಿಷಾ ಪಾಲನ್ನ ವ್ಯವಹಾರದಲ್ಲಿ ತೊಂದರೆ ಉಂಟಾಗಿದೆ ಎಂದು ಹೇಳಿ ಬೇರೆ ಬೇರೆ ವ್ಯಕ್ತಿಗಳ ಬ್ಯಾಂಕ್ ಖಾತೆಗಳಿಗೆ ಹಾಗೂ ತನ್ನ ಖಾತೆ ಮತ್ತು ಗೂಗಲ್ ಪೇ ಮೂಲಕ ಉದ್ಯಮಿ ಅನನ್ಯ ಕೃಷ್ಣರಿಂದ ಹಂತ ಹಂತವಾಗಿ ಹಣ ವರ್ಗಾಯಿಸಿಕೊಳ್ಳುತ್ತಿದ್ದಳು. ಬೆಂಗಳೂರಿನಲ್ಲಿ ತನ್ನ ಪರವಾಗಿ ಬಂದ ವ್ಯಕ್ತಿಯ ಮೂಲಕ ಲಕ್ಷಾಂತರ ರೂಪಾಯಿ ಹಣವನ್ನು ಉದ್ಯಮಿಯಿಂದ ಪಡೆದುಕೊಂಡಿದ್ದಾಳೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಹಣ ಪಡೆದುಕೊಂಡ ಬಳಿಕ ಆರೋಪಿ ಅನಿಷಾ ಪಾಲನ್ನ ಮೊಬೈಲ್ ಸಂಪರ್ಕಕ್ಕೂ ಸಿಗದೆ, ಹಣವನ್ನು ಹಿಂದಿರುಗಿಸದೆ ವಂಚಿಸಿರುವುದಾಗಿ ದೂರುದಾರರು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.