ಸಾವಿನ ಹೆದ್ದಾರಿ ಆಗುತ್ತಿದೆ ಬಿಕರ್ನಕಟ್ಟೆ -ಸಾಣೂರು ರಾಷ್ಟ್ರೀಯ ಹೆದ್ದಾರಿ

ಕರಾವಳಿ

ಡಿಬಿಎಲ್ ಗುತ್ತಿಗೆದಾರರ ಘೋರ ನಿರ್ಲಕ್ಷ್ಯಕ್ಕೆ ಬಲಿಯಾಗುತ್ತಿದೆ ಅಮಾಯಕ ಜೀವಗಳು.. ಕೈಕಂಬ, ಗಂಜಿಮಠ, ಎಡಪದವಿನಲ್ಲಿ ಮೃತ್ಯು ಕೂಪ.!

ದಿನಾಲೂ ಸಾಯುವವರಿಗೆ ಅಳುವವರೇ ಇಲ್ಲ ಅನ್ನುವಂತಾಗಿದೆ ಡಿಬಿಎಲ್ ಸಂಸ್ಥೆಯವರು ನಡೆಸುತ್ತಿರುವ ಹೆದ್ದಾರಿ ಕಾಮಗಾರಿ. ಬಿಕರ್ನಕಟ್ಟೆ -ಸಾಣೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಸುವವರು ಭಯಬೀತಿಯಿಂದಲೇ ಸಂಚರಿಸಬೇಕಾದ ಅನಿವಾರ್ಯತೆ ಉಂಟಾಗಿದೆ. ಈ ರಸ್ತೆಯಲ್ಲಿ ನಡೆಯುತ್ತಿರುವ ಸರಣಿ ಅಪಘಾತವೇ ಇದಕ್ಕೆಲ್ಲ ಕಾರಣ. ಯಾವಾಗ ಮೃತ್ಯು ಕೂಪ ಎರಗುತ್ತಿದೆ ಅನ್ನುವುದನ್ನು ಹೇಳಲು ಸಾಧ್ಯವಿಲ್ಲ. ಡಿಬಿಎಲ್ ಗುತ್ತಿಗೆದಾರರ ಘೋರ ನಿರ್ಲಕ್ಷ್ಯಕ್ಕೆ ಹಲವು ಅಮಾಯಕ ಜೀವಗಳು ಬಲಿಯಾಗಿವೆ.

ಬಹುಶಃ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ -169 ರಷ್ಟು ಕಳಪೆ ಕಾಮಗಾರಿ ನಡೆದ ಉದಾಹರಣೆಯೇ ಬೇರೆ ಕಡೆ ಸಿಗಲಾರದು. ಒಂದು ಕಡೆ ಕಾಮಗಾರಿಗಳು ಆಮೆಗತಿಯಲ್ಲಿ ನಡೆದರೆ, ಮತ್ತೊಂದು ಕಡೆ ಕಳಪೆ ಮತ್ತು ಅವೈಜ್ಞಾನಿಕ ಕಾಮಗಾರಿಗೆ ಈ ರಸ್ತೆಯೇ ನೇರ ಸಾಕ್ಷಿ ನುಡಿಯುತ್ತಿದೆ. ಕೆಲವೆಡೆ ನಿಯಮಗಳನ್ನು ಸಂಪೂರ್ಣ ಗಾಳಿಗೆ ತೂರಿ ಅವೈಜ್ಞಾನಿಕವಾಗಿ ಗುಡ್ಡ ಕತ್ತರಿಸಲಾಗಿದ್ದು, ಭಾರಿ ಮಳೆಗೆ ಗುಡ್ಡ ಕುಸಿಯುವ ಭೀತಿ ಎದುರಾಗಿದೆ. ಎಡಪದವಿನ ಅಣೆಬಳಿ, ಕೆತ್ತಿಕಲ್ ನಂತಹ ಪ್ರದೇಶದಲ್ಲಿ ಯಾವಾಗ ಭೂಕುಸಿತ ನಡೆಯಬಹುದು ಅನ್ನುವ ಆತಂಕದಲ್ಲಿಯೇ ಪ್ರಯಾಣಿಕರು ಸಂಚರಿಸುವಂತಾಗಿದೆ. ಇಲ್ಲಿ ಗುಡ್ಡವನ್ನು ಅವೈಜ್ಞಾನಿಕವಾಗಿ ಕತ್ತರಿಸಿರುವುದರಿಂದ ಪ್ರಯಾಣಿಕರು ಜೀವವನ್ನು ಹಿಡಿದಿಟ್ಟು ಪ್ರಯಾಣಿಸುವಂತಾಗಿದೆ. ಇನ್ನು ಕೆಲವೆಡೆ ತಗ್ಗು ಪ್ರದೇಶಗಳಿಗೆ ಕೇವಲ ಮಣ್ಣು ತುಂಬಿಸಿ ರಸ್ತೆ ನಿರ್ಮಿಸಲಾಗಿದೆ. ಇದೀಗ ಭಾರೀ ಮಳೆಗೆ ಹೊಸದಾಗಿ ನಿರ್ಮಾಣಗೊಂಡ ರಸ್ತೆಗಳು ಬಿರುಕು ಬಿಡುತ್ತಿದ್ದು, ವಾಹನ ಸವಾರರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.

ಬಿಕರ್ನಕಟ್ಟೆ -ಸಾಣೂರು ರಾಷ್ಟ್ರೀಯ ಹೆದ್ದಾರಿ ಸಾವಿನ ಹೆದ್ದಾರಿ ಅಂದರೂ ತಪ್ಪಾಗದು. ಬನ್ನಡ್ಕದಲ್ಲಿ ಸರಣಿ ಅಪಘಾತಗಳು ನಡೆದು ಹಲವು ಜೀವಗಳು ಬಲಿಯಾಗಿವೆ. ಕೆಲವು ಕಡೆ ಅಲ್ಲಲ್ಲಿ ಹೊಂಡ ತೆಗೆಯಲಾಗಿದೆ, ಅಲ್ಲಿ ಯಾವುದೇ ಮುನ್ಸೂಚನೆ ಕ್ರಮ ಕೈಗೊಂಡಿಲ್ಲ. ಇದೀಗ ಕೈಕಂಬ, ಗಂಜಿಮಠ, ಎಡಪದವಿನಲ್ಲಿ ಸರಣಿ ಅಪಘಾತಗಳು ನಡೆದು ಜೀವ ಹಾನಿಯಾದ ಘಟನೆಗಳು ಕೂಡ ನಡೆದಿದೆ. ಇತ್ತೀಚೆಗೆ ಎಡಪದವಿನ ಮಿಜಾರು ಬಳಿ ಸ್ಥಳೀಯ ಕೂಲಿ ಕಾರ್ಮಿಕರೊಬ್ಬರು ಹೆದ್ದಾರಿ ದಾಟುವಾಗ ವಾಹನ ಡಿಕ್ಕಿಯಾಗಿ ಮೃತ್ಯುವಾಗಿದ್ದರು. ಗಂಜಿಮಠದಲ್ಲಿ ದಿನದ ಹಿಂದೆಯಷ್ಟೇ ಟಿಪ್ಪರ್ ಲಾರಿ ಅಡಿಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಮಿಜಾರು ಎಂಬಲ್ಲಿ ರಸ್ತೆಯವರು ನಿರ್ಮಿಸಿದ್ದ ಹೊಂಡಕ್ಕೆ ವರ್ಷದ ಹಿಂದೆ ವ್ಯಕ್ತಿಯೊಬ್ಬರು ಬೈಕ್ ಸಮೇತ ಬಿದ್ದು ಸಾವಿಗೀಡಾಗಿದ್ದರು.

ಇಂದು ಸಂಜೆ ಸೂರಲ್ಪಾಡಿ ಟೋಲ್ ಗೇಟ್ ಬಳಿ ಮೂಡಬಿದ್ರೆ ಕಡೆಯಿಂದ ಮಂಗಳೂರಿಗೆ ಹೊಗುತ್ತಿದ್ದ ವೇಗಧೂತ ಬಸ್ಸೊಂದು ಟಿಪ್ಪರ್ ಲಾರಿಗೆ ಡಿಕ್ಕಿ ಹೊಡೆದು ಜಖಂ ಆಗಿ, ರಸ್ತೆಗೆ ಅಡ್ಡವಾಗಿ ನಿಂತ ಘಟನೆ ನಡೆದಿದೆ. ಈ ಹಿಂದೆ ಇದೇ ಟೋಲ್ ಬಳಿ ಬೈಕ್ ಸವಾರನೊಬ್ಬ ಡಿವೈಡರ್ ಗೆ ಡಿಕ್ಕಿ ಹೊಡೆದು ಜೀವ ಕಳಕೊಂಡ ಘಟನೆಯು ನಡೆದಿದೆ. ಟೋಲ್ ನಿರ್ಮಾಣವಾಗುವ ಜಾಗದಲ್ಲಿ ಮುನ್ಸೂಚನೆ ಕ್ರಮಕೈಗೊಳ್ಳದಿರುವುದರಿಂದ ಹಲವಾರು ಬಾರಿ ಅನಾಹುತಗಳು ನಡೆದಿದೆ. ಕೈಕಂಬ, ಗಂಜಿಮಠ, ಎಡಪದವಿನಲ್ಲಿ ಸರಣಿ ಅಪಘಾತಗಳಿಗೆ ರಸ್ತೆ ಕಾಮಗಾರಿ ನಿರ್ವಹಿಸುತ್ತಿರುವ ಡಿಬಿಎಲ್ ಗುತ್ತಿಗೆದಾರರೇ ಕಾರಣರಾಗುತ್ತಿದ್ದಾರೆ.

ಮಳೆಗಾಲದ ಸಮಯದಲ್ಲಿ ಸರಿಯಾದ ಸುರಕ್ಷತಾ ನಿಯಮ ಪಾಲಿಸದೇ ಅಲ್ಲಲ್ಲಿ ರಸ್ತೆಗಳನ್ನು ಅಗೆದಿರುವುದು, ಸೂಕ್ತ ಸೂಚನಾ ಫಲಕ ಅಳವಡಿಸದಿರುವುದು ಹಾಗೂ ರಾತ್ರಿ ವೇಳೆಯಲ್ಲಿ ತಿರುವುಗಳಲ್ಲಿ ಪ್ರತಿಫಲಕಗಳು, ಸೂಚನಾ ಫಲಕ ಅಳವಡಿಸದೇ ಕಾಮಗಾರಿ ನಡೆಸುತ್ತಿರುವುದರಿಂದ ವಾಹನ ಸವಾರರು ವೇಗವಾಗಿ ಚಲಿಸುತ್ತಿರುವುದರಿಂದ ಅಪಘಾತಕ್ಕೆ ಕಾರಣವಾಗುತ್ತಿದೆ. ಕಾಮಗಾರಿ ನಡೆಸುತ್ತಿರುವವರ ಬೇಜವಾಬ್ದಾರಿತನಕ್ಕೆ ಹಲವು ಕುಟುಂಬಗಳು ಕಣ್ಣೀರಿನ ಪರಿಸ್ಥಿತಿ ಅನುಭವಿಸಬೇಕಾಗಿ ಬಂದಿದೆ.

ಜಿಲ್ಲೆಯಲ್ಲಿ ಹಲವು ಕಡೆಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆದಿದೆ. ಗುತ್ತಿಗೆ ಸಂಸ್ಥೆಯವರು ಯೋಜನಾಬದ್ಧವಾಗಿ ಕಾಮಗಾರಿ ನಡೆಸಿದ ಪರಿಣಾಮ ಯಾವುದೇ ದೊಡ್ಡ ಅನಾಹುತ ನಡೆದ ಉದಾಹರಣೆ ಇಲ್ಲ. ಉಪ್ಪಿನಂಗಡಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅತ್ಯಂತ ಯೋಜನಾ ಬದ್ಧವಾಗಿ, ವೈಜ್ಞಾನಿಕ ರೀತಿಯಲ್ಲಿ ನಡೆಸಲಾಗಿದೆ. ಅಲ್ಲಿ ರಸ್ತೆ ಬಳಿಯ ಗುಡ್ಡಗಳನ್ನು ಅತ್ಯಂತ ವೈಜ್ಞಾನಿಕ ರೀತಿಯಲ್ಲಿ ಕತ್ತರಿಸಲಾಗಿದೆ. ಆದರೆ ಬಿಕರ್ನಕಟ್ಟೆ -ಸಾಣೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅವೈಜ್ಞಾನಿಕವಾಗಿ ನಡೆಯುತ್ತಿರುವ ಪರಿಣಾಮ ಇಲ್ಲಿ ಸರಣಿ ಸಾವುಗಳು ಸಂಭವಿಸುತ್ತಿದೆ. ಇದಕ್ಕೆ ಯಾರು ಹೊಣೆ.? ವಾಹನ ಸವಾರರ, ಪಾದಚಾರಿಗಳ ಜೀವದೊಂದಿಗೆ ಚೆಲ್ಲಾಟವಾಡುವ ಈ ನರಹಂತಕರಿಗೆ ಮೂಗುದಾರ ಹಾಕುವವರಾರು.? ಬೇಕಾಬಿಟ್ಟಿಯಾಗಿ, ಬೇಜವಾಬ್ದಾರಿತನದಿಂದ ಕಾಮಗಾರಿ ನಡೆಸುವ ಗುತ್ತಿಗೆದಾರ ಸಂಸ್ಥೆಯವರಿಗೆ ಸಂಬಂಧ ಪಟ್ಟ ಇಲಾಖೆಯವರು, ಜನಪ್ರತಿನಿಧಿಗಳು ಇನ್ನಾದರೂ ಬಿಸಿ ಮುಟ್ಟಿಸುವ ಕೆಲಸ ಮಾಡಬೇಕಾಗಿದೆ.