ವೈದ್ಯಕೀಯ ಲೋಕಕ್ಕೆ ಸವಾಲಾಗಿರುವ ಎಚ್‌ಐವಿ ಸೋಂಕಿಗೆ ಒಳಗಾಗುತ್ತಿರುವವರಲ್ಲಿ ಯುವ ಜನರ ಸಂಖ್ಯೆಯೇ ಹೆಚ್ಚು

ರಾಜ್ಯ

ಅಸುರಕ್ಷಿತ ನಡೆನುಡಿಗೆ ಒಳಗಾಗಿ 22 ವರ್ಷ ಒಳಗಿನ ಯುವ ಜನತೆ ಎಚ್‌ಐವಿ ಬಲೆಗೆ ಬೀಳುತ್ತಿದ್ದಾರೆ

ವೈದ್ಯಕೀಯ ಲೋಕಕ್ಕೆ ಸವಾಲಾಗಿರುವ ಎಚ್‌ಐವಿ ಸೋಂಕಿಗೆ ಒಳಗಾಗುತ್ತಿರುವವರಲ್ಲಿ ಯುವ ಜನರ ಸಂಖ್ಯೆಯೇ ಹೆಚ್ಚಾಗುತ್ತಿರುವ ಆತಂಕಕಾರಿ ಸಂಗತಿಯೊಂದು ಆರೋಗ್ಯ ಇಲಾಖೆಯ ಅಂಕಿ-ಅಂಶಗಳಿಂದ ಬೆಳಕಿಗೆ ಬಂದಿದೆ.

ರಾಜ್ಯದ ಯುವಜನತೆಯಲ್ಲಿ ಹೆಚ್‌ಐವಿ ಸೋಂಕು ದಿನೇ ದಿನೇ ಆತಂಕಕಾರಿ ರೀತಿಯಲ್ಲಿ ಹೆಚ್ಚಾಗುತ್ತಿದ್ದು, ಇದನ್ನು ಆರಂಭಿಕ ಹಂತದಲ್ಲೇ ತಡೆಯಲು ರಾಜ್ಯ ಸರ್ಕಾರಿ ನಿರ್ಧಾರಿಸಿದೆ. ದೇಶದಲ್ಲೇ ಮೊದಲ ಬಾರಿಗೆ ರಾಜ್ಯದ ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್‌ಐವಿ ಪರೀಕ್ಷೆಯನ್ನು ಕಡ್ಡಾಯಗೊಳಿಸಲು ಆರೋಗ್ಯ ಇಲಾಖೆ ಗಂಭೀರ ಚಿಂತನೆ ನಡೆಸಿದೆ.

ಇತ್ತೀಚೆಗೆ ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ (NACO) ಬಿಡುಗಡೆ ಮಾಡಿರುವ ಆತಂಕಕಾರಿ ವರದಿಯು ರಾಜ್ಯ ಸರ್ಕಾರವನ್ನು ಬೆಚ್ಚಿಬೀಳಿಸಿದೆ. ದೇಶದಲ್ಲೇ ಅತೀ ಹೆಚ್ಚು ಹೆಚ್‌ಐವಿ ಸೋಂಕಿತರಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ 3ನೇ ಸ್ಥಾನದಲ್ಲಿದೆ. ವರದಿಯ ಪ್ರಕಾರ, ಪ್ರಸ್ತುತ ಕರ್ನಾಟಕದಲ್ಲಿ ಸುಮಾರು 2.60 ಲಕ್ಷ ಮಂದಿ ಹೆಚ್‌ಐವಿ ಸೋಂಕಿಗೆ ಒಳಗಾಗಿದ್ದಾರೆ. ಈ ಪೈಕಿ ಸುಮಾರು 2.05 ಲಕ್ಷ ಸೋಂಕಿತರು ಆಂಟಿ ರೆಟ್ರೋ ವೈರಲ್ ಥೆರಪಿ (ART) ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಅಂಕಿ-ಅಂಶಗಳು ಆರೋಗ್ಯ ಇಲಾಖೆಯನ್ನು ತೀವ್ರ ಚಿಂತೆಗೆ ಈಡುಮಾಡಿದೆ.

ಹೆಚ್ಚಾಗಿ 18 ರಿಂದ 35 ವರ್ಷದ ಯುವ ಸಮೂಹದಲ್ಲಿ ಹೆಚ್‌ಐವಿ ಅತ್ಯಂತ ವೇಗವಾಗಿ ಹರಡುತ್ತಿದೆ. ಅದರಲ್ಲೂ ಕೇವಲ 18 ರಿಂದ 25 ವರ್ಷದ ವಯೋಮಾನದ ಸುಮಾರು 7,000 ಯುವಕ-ಯುವತಿಯರಲ್ಲಿ ಸೋಂಕು ಪತ್ತೆಯಾಗಿರುವುದು ದೊಡ್ಡ ಆಘಾತ ಉಂಟುಮಾಡಿದೆ. ಈ ಹಿನ್ನೆಲೆಯಲ್ಲಿ ಕಾಲೇಜು ಹಂತದಲ್ಲೇ ಸೋಂಕನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡಲು ಸರ್ಕಾರ ಮುಂದಾಗಿದೆ.

ಅಸುರಕ್ಷಿತ ನಡೆನುಡಿಗೆ ಒಳಗಾಗಿ ಯುವ ಜನತೆ ಎಚ್‌ಐವಿ ಬಲೆಗೆ ಬೀಳುತ್ತಿದ್ದಾರೆ. ಇದರಲ್ಲಿ 22 ವಯಸ್ಸಿನೊಳಗಿನವರೆ ಹೆಚ್ಚಾಗಿದ್ದು ಆತಂಕಕಾರಿ ಸಂಗತಿಯಾಗಿದೆ. ಪ್ರತಿವರ್ಷ ಸೋಂಕಿತರಲ್ಲಿ ಯುವಜನರ ಸಂಖ್ಯೆಯೇ ಹೆಚ್ಚು ಹೆಚ್ಚಾಗಿ ದಾಖಲಾಗುತ್ತಿರುವುದು ಆತಂಕ ಮೂಡಿಸಿದೆ. ಯುವ ಜನತೆಯಲ್ಲೆ ಹೆಚ್ಚಾಗಿ ಎಚ್‌ಐವಿ ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ಮೊದಲ ಬಾರಿಗೆ ಶಾಲಾ- ಕಾಲೇಜುಗಳಿಗೆ ಎಚ್ಐವಿ ಪರೀಕ್ಷೆಯನ್ನು ಕಡ್ಡಾಯಗೊಳಿಸಲು ಆರೋಗ್ಯ ಇಲಾಖೆ ಗಂಭೀರ ಚಿಂತನೆ ನಡೆಸಿದೆ.