ಐಷಾರಾಮಿ ಕಾರುಗಳನ್ನು ಕಳವು ಮಾಡಿ, ನಕಲಿ ಎನ್‌ಒಸಿ ಸೃಷ್ಟಿಸಿ ಮಾರಾಟ ಮಾಡುತ್ತಿದ್ದ ಜಾಲವನ್ನು ಬೇಧಿಸಿದ ಸಿಸಿಬಿ ಪೊಲೀಸರು

ರಾಜ್ಯ

ಇಬ್ಬರು ಅಂತಾರಾಜ್ಯ ಕಳ್ಳರ ಬಂಧನ, 2.56 ಕೋಟಿ ರೂಪಾಯಿ ಮೌಲ್ಯದ 17 ಕಾರುಗಳ ವಶ

ನಗರ ಪ್ರದೇಶದಲ್ಲಿ ಕಳವು ಮಾಡಿದ ವಿವಿಧ ಮಾದರಿಯ ಕಾರುಗಳಿಗೆ ನಕಲಿ ಎನ್‌ಒಸಿ ಸೃಷ್ಟಿಸಿ ಅಮಾಯಕ ಜನರಿಗೆ ಕಾರುಗಳನ್ನು ಮಾರಾಟ ಮಾಡುತ್ತಿದ್ದ ಜಾಲವನ್ನು ಸಿಸಿಬಿ ಪೊಲೀಸರು ಭೇದಿಸಿ ಇಬ್ಬರು ಅಂತಾರಾಜ್ಯ ಕಳ್ಳರನ್ನು ಬಂಧಿಸಿ 2.56 ಕೋಟಿ ರೂಪಾಯಿ ಮೌಲ್ಯದ 17 ಕಾರುಗಳನ್ನು ವಶಪಡಿಸಿ ಕೊಂಡಿದ್ದಾರೆ. ಗೋವಾದ ಆಸ್ಟಿನ್ ಕರೋಡ ಅಲಿಯಾಸ್ ಚಿಂಟು ಮತ್ತು ಪೇಜರ್ ಟೌನ್ ನಿವಾಸಿ ಸಯ್ಯದ್ ರಿಯಾಜ್ ಬಂಧಿತ ಆರೋಪಿಗಳು. ನಗರದಲ್ಲಿ ಸಕ್ರಿಯವಾಗಿದ್ದ ತಂಡವೊಂದು ಬೇರೆ ಬೇರೆ ರಾಜ್ಯಗಳಿಂದ ಕಾರುಗಳನ್ನು ಕಳ್ಳತನ ಮಾಡಿ ಅವುಗಳನ್ನು ನಗರಕ್ಕೆ ತಂದು ಅದೇ ಮಾದರಿಯ ಬೇರೆ ನೋಂದಣಿ ನಂಬರ್ ಗಳನ್ನು ಹಾಕಿ ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ಮಾರಾಟ ಮಾಡುತ್ತಿದ್ದರು.

ಆರೋಪಿಗಳನ್ನು ವಿಚಾರಣೆಗೊಳಪಡಿಸಿ ದುಬಾರಿ ಬೆಲೆಯ ರೇಂಜ್ ರೋವರ್, ಜಾಗ್ವಾರ್ ಸೇರಿದಂತೆ ವಿವಿಧ ಕಂಪೆನಿಯ ಒಟ್ಟು 17 ಕಾರುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅವುಗಳ ಒಟ್ಟು ಮೌಲ್ಯ 2 ಕೋಟಿ 56 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ. ಈ ಕುರಿತು ಬೆಂಗಳೂರು ಸಿಸಿಬಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.