ಸಾರ್ವಜನಿಕ ಉದ್ದೇಶಕ್ಕಾಗಿ ಸರ್ಕಾರ ಅಥವಾ ಮಹಾನಗರ ಪಾಲಿಕೆಗಳು ಭೂಸ್ವಾಧೀನ ಪಡಿಸಿಕೊಂಡಾಗ, ಭೂಮಿ ಕಳೆದುಕೊಂಡ ಭೂ ಮಾಲೀಕರಿಗೆ ಪರಿಹಾರದ ರೂಪದಲ್ಲಿ ನೀಡುವ ಪರ್ಯಾಯ ನಿವೇಶನದ ಕ್ರಯಪತ್ರಕ್ಕೆ ಯಾವುದೇ ಮುದ್ರಾಂಕ ಮತ್ತು ನೋಂದಣಿ ಶುಲ್ಕ ವಿಧಿಸುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಆದೇಶಿಸಿದೆ.
ಬೆಳಗಾವಿಯ ಟಿಳಕವಾಡಿಯ ನಾರಾಯಣ್ ಹರಿಶ್ಚಂದ್ರ ಪೈ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಂ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.
‘ಭೂಸ್ವಾಧೀನ ಕಾಯ್ದೆ–1894ರ ಕಲಂ 51ರ ಪ್ರಕಾರ, ಭೂಸ್ವಾಧೀನ ಪ್ರಕ್ರಿಯೆಯಡಿ ನಡೆಯುವ ಯಾವುದೇ ಒಪ್ಪಂದ ಅಥವಾ ಆದೇಶಗಳಿಗೆ ಮುದ್ರಾಂಕ ಮತ್ತು ನೋಂದಣಿ ಶುಲ್ಕದಿಂದ ವಿನಾಯಿತಿ ಇರಲಿದೆ. ಪಾಲಿಕೆಯು ಇದನ್ನು ಸಾಮಾನ್ಯ ಹಕ್ಕು ವರ್ಗಾವಣೆ ಪತ್ರ ಎಂದು ಕರೆದಾಕ್ಷಣ ವಿನಾಯಿತಿ ಇಲ್ಲ ಎನ್ನಲಾಗುವುದಿಲ್ಲ. ಇದು ವ್ಯಾಪಾರಕ್ಕಾಗಿ ನಡೆದ ಮಾರಾಟವಲ್ಲ, ಭೂಮಿ ಕಳೆದುಕೊಂಡವರಿಗೆ ನೀಡಿದ ಪರಿಹಾರವಾಗಿದೆ’ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
