ಮಂಗಳೂರು ನಗರದಲ್ಲಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ನಿಷೇಧಿತ ಮಾದಕವಸ್ತು ಎಂಡಿಎಂಎ (MDMA) ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಮಂಗಳೂರು ನಗರ ಅಪರಾಧ ವಿಭಾಗ (CCB) ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದು, ಅವರಿಂದ ಒಟ್ಟು 164 ಗ್ರಾಂ ಎಂಡಿಎಂಎ ಮಾದಕವಸ್ತುವನ್ನು ವಶಪಡಿಸಿಕೊಂಡಿರುತ್ತಾರೆ. ವಶಪಡಿಸಿಕೊಂಡ ಮಾದಕವಸ್ತುವಿನ ಒಟ್ಟು ಮೌಲ್ಯ ಸುಮಾರು 16,40,000 ರೂ. ಎಂದು ಅಂದಾಜಿಸಲಾಗಿದೆ.
ಬೆಂಗಳೂರು ನಗರದಿಂದ ಎಂಡಿಎಂಎ ಮಾದಕವಸ್ತುವನ್ನು ಖರೀದಿಸಿ ಮಂಗಳೂರು ನಗರಕ್ಕೆ ತಂದು ಹೊಯಿಗೆ ಬಜಾರ್ ಪರಿಸರದಲ್ಲಿರುವ ಮನೆಯಿಂದ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ದಿನಾಂಕ 05-06-2026ರಂದು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದು, ಬಂಧಿತ ಆರೋಪಿಯಿಂದ ಸುಮಾರು 10,40,000 ರೂ. ಮೌಲ್ಯದ 104 ಗ್ರಾಂ ಎಂಡಿಎಂಎ ಹಾಗೂ ಮೊಬೈಲ್ ಫೋನ್, ಜಿಪ್ ಲಾಕ್ ಕವರ್, ಡಿಜಿಟಲ್ ತೂಕಮಾಪನವನ್ನು ವಶಪಡಿಸಿಕೊಂಡಿರುತ್ತಾರೆ. ಈ ಕುರಿತು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಬಂಧಿತನನ್ನು ಪ್ರಣಾಮ್ ಕೋಟ್ಯಾನ್, ಜಾನಕಿ ನಿಲಯ, ಹೊಯ್ಗೆ ಬಜಾರ್, ಎಂದು ಗುರುತಿಸಲಾಗಿದ್ದು, ಈತನ ವಿರುದ್ಧ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ 2016ರಲ್ಲಿ ಹಲ್ಲೆ ಹಾಗೂ ಬೆದರಿಕೆ ಪ್ರಕರಣ, 2026ರಲ್ಲಿ ಮಾದಕವಸ್ತು ಸೇವನೆ ಪ್ರಕರಣ, 2022ರಲ್ಲಿ ಅಬಕಾರಿ ಇಲಾಖೆಯಲ್ಲಿ ಗಾಂಜಾ ಸಂಬಂಧಿತ ಪ್ರಕರಣ ಹಾಗೂ 2022ರಲ್ಲಿ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಗಾಂಜಾ ಮಾರಾಟ ಪ್ರಕರಣ ದಾಖಲಾಗಿವೆ.
ಮತ್ತೊಂದು ಪ್ರಕರಣದಲ್ಲಿ ಪದವಿನಂಗಡಿ ಪರಿಸರದಲ್ಲಿರುವ ಮನೆಯಿಂದ ಎಂಡಿಎಂಎ ಮಾದಕವಸ್ತುವನ್ನು ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು 05-06-2026 ರಂದು ಕಾರ್ಯಾಚರಣೆ ನಡೆಸಿ ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯಿಂದ ಸುಮಾರು 6,00,000 ರೂ. ಮೌಲ್ಯದ 60 ಗ್ರಾಂ ಎಂಡಿಎಂಎ ಹಾಗೂ ಜಿಪ್-ಲಾಕ್ ಕವರ್ಗಳು, ಒಂದು ಮೊಬೈಲ್ ಫೋನ್ ಹಾಗೂ ಡಿಜಿಟಲ್ ತೂಕಮಾಪನ ಯಂತ್ರವನ್ನು ವಶಪಡಿಸಿಕೊಂಡಿರುತ್ತಾರೆ. ಈ ಕುರಿತು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಧಿತ ಆರೋಪಿ ಧನರಾಜ್ ಪೂಜಾರಿ @ ಧನು ವಳಚಿಲ್, ಅರ್ಕುಳ, ವಳಚ್ಚಿಲ್ ಪದವು ನಿವಾಸಿ. ಈತನ ವಿರುದ್ದ ಮಂಗಳೂರು ದಕ್ಷಿಣ, ಮಂಗಳೂರು ಉತ್ತರ, ಸುರತ್ಕಲ್, ಬರ್ಕೆ, ಕಾವೂರು, ಕಂಕನಾಡಿ ನಗರ ಹಾಗೂ ಬಂಟ್ವಾಳ ಪೊಲೀಸ್ ಠಾಣೆಗಳಲ್ಲಿ ಕೊಲೆ, ಕೊಲೆಯತ್ನ, ಹಲ್ಲೆ, ಬೆದರಿಕೆ ಸೇರಿದಂತೆ ಸರಿಸುಮಾರು 12 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. 2016ರಲ್ಲಿ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಗಂಭೀರ ಹಲ್ಲೆ ಪ್ರಕರಣದಲ್ಲಿ ಈತನಿಗೆ 3 ವರ್ಷಗಳ ಶಿಕ್ಷೆಯೂ ವಿಧಿಸಲಾಗಿತ್ತು.
ಈ ಮಾದಕವಸ್ತು ಸಾಗಾಟ ಜಾಲದಲ್ಲಿ ಇನ್ನೂ ಹಲವರು ಮಂದಿ ಭಾಗಿಯಾಗಿದ್ದು, ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ. ಈ ಕಾರ್ಯಾಚರಣೆಯನ್ನು ಮಂಗಳೂರು ನಗರ ಸಿಸಿಬಿ ಘಟಕದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭಾಗವಹಿಸಿರುತ್ತಾರೆ.
