ಮಂಗಳೂರು ಜೈಲಿನಲ್ಲಿ ಮಾಡೂರು ಯುಸೂಫ್ ಹತ್ಯೆ ಪ್ರಕರಣ: ಐದು ಮಂದಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟ

ಕರಾವಳಿ

ಮಂಗಳೂರು: ಬರ್ಕೆ ಪೊಲೀಸ್ ಠಾಣಾ ವ್ಯಾಪ್ತಿಯ ಮಂಗಳೂರು ಕಾರಾಗೃಹದಲ್ಲಿ ದಿನಾಂಕ: 02-11-2015 ರಂದು ಮಾಡೂರು ಯುಸೂಫ್ ಎಂಬುವನನ್ನು ಹತ್ಯೆಗೈದ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಕ್ರ.ಸಂ: 92/2015 ಕಲಂ 143, 144, 147, 148, 324, 326, 353, 332, 307, 302, 120(ಬಿ), 37 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿತ್ತು.

ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳಾದ ಲಿತೇಶ್ ಪೂಜಾರಿ @ ಲಿತ್ತು, ಕೋಟೆ, ಸೂರಿಂಜೆ, ಕಾಟಿಪಳ್ಳ. ಶೋಭರಾಜ್ @ ಶೋಭಿ, ಮಧ್ಯ, ಸುರತ್ಕಲ್. ಯುವರಾಜ್ ಶಿಬರೂರು, ಕಾಟಿಪಳ್ಳ. ಪ್ರದೀಪ್, ವಿಶ್ವನಾಥ ಮಹಾಗಣಪತಿ ದೇವಸ್ಥಾನದ ಹತ್ತಿರ, ಉಳಾಯಿಬೆಟ್ಟು. ಉಮೇಶ್ ಕೊಂಬಾರ್ @ ಉಮೇಶ್ ಕುಂಬಾರ, ಬಾಳುಗೋಡು ಸುಳ್ಯ. ಈ ಐದು ಮಂದಿ ಆರೋಪಿಗಳಿಗೆ ಮಾನ್ಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಮಾನ್ಯ ನ್ಯಾಯಾಧೀಶರಾದ ಶ್ರೀ ಜಗದೀಶ್ ವಿ‌ ಎನ್ ರವರು ಪ್ರಕರಣದಲ್ಲಿ ವಿಚಾರಣೆಯನ್ನು ಪೂರ್ಣಗೊಳಿಸಿ, ದಿನಾಂಕ 01-10-2026 ರಂದು ಜೀವಾವಧಿ ಶಿಕ್ಷೆ ಹಾಗೂ 76,000 ರೂ ದಂಡ ವಿಧಿಸಿ, ಶಿಕ್ಷೆ ಪ್ರಕಟ ಮಾಡಿರುತ್ತಾರೆ.

ಮಾಡೂರು ಯೂಸುಫ್ ಹತ್ಯೆ ಪ್ರಕರಣದಲ್ಲಿ ವಿಶೇಷ ಸರಕಾರಿ ಅಭಿಯೋಜಕರಾದ ಬಿ.ಮೋಹನ್ ಕುಮಾರ್ ರವರು ಸರಕಾರದ ಪರವಾಗಿ ವಾದಿಸಿರುತ್ತಾರೆ. ಪ್ರಕರಣದ ತನಿಖೆಯನ್ನು ಅಂದಿನ ಮಂಗಳೂರು ಕೇಂದ್ರ ಉಪವಿಭಾಗ ಸಹಾಯಕ ಪೊಲೀಸ್ ಆಯುಕ್ತರಾಗಿದ್ದ ತಿಲಕ್ ಚಂದ್ರ ರವರು ನಡೆಸಿ ಆರೋಪಿಗಳ ವಿರುದ್ದ ದೋಷಾರೋಪಣ ಪತ್ರವನ್ನು ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.