ಕೊಟ್ಟಷ್ಟು ಹಣ ಪಡೆದು ಸುಮ್ಮನಾಗು, ಇಲ್ಲದಿದ್ದಲ್ಲಿ ಕೊಲೆ ಮಾಡುವ ಬೆದರಿಕೆ
ಮದುವೆಯಾಗುವುದಾಗಿ ನಂಬಿಸಿ 25 ವರ್ಷ ಪ್ರಾಯದ ಯುವತಿಯನ್ನು ಅತ್ಯಾಚಾರವೆಸಗಿದ ಪ್ರಕರಣದಲ್ಲಿ ಮದ್ದಾವಣಪುರ ದೇವವೀರ ಸಂಸ್ಥಾನ ಮಠದ ದಯಾನಂದ ಅಲಿಯಾಸ್ ನಂಜೇಶ್ವರ ಶಿವಾಚಾರ್ಯ ಮಹಾ ಸ್ವಾಮೀಜಿಯನ್ನು ಈಶಾನ್ಯ ವಿಭಾಗದ ಮಹಿಳಾ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು ಈಶಾನ್ಯ ವಿಭಾಗದ ಮಹಿಳಾ ಪೊಲೀಸ್ ಠಾಣೆಯಲ್ಲಿ 25 ವರ್ಷದ ಯುವತಿಯೊಬ್ಬರು ಸ್ವಾಮೀಜಿ ವಿರುದ್ಧ ದೂರು ದಾಖಲಿಸಿದ್ದಾರೆ. ಮದುವೆಯಾಗುವುದಾಗಿ ನಂಬಿಸಿ ತಮ್ಮನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂದು ಯುವತಿ ಆರೋಪಿಸಿದ್ದಾರೆ. ಈ ಸಂಬಂಧ ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸರು ಸ್ವಾಮೀಜಿಯನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.
ಮಠದ ಭಕ್ತೆಯಾಗಿರುವ ಕಾರಣ ಸ್ವಾಮೀಜಿ ಪರಿಚಯವಾಗಿದ್ದರು. 2023ರಲ್ಲಿ ಮೈಸೂರಿಗೆ ಕುಟುಂಬದ ಜೊತೆ ಪ್ರವಾಸಕ್ಕೆ ತೆರಳಿದ್ದಾಗ ಮೊಬೈಲ್ ನಂಬರ್ ಪಡೆದು, ಆತ್ಮೀಯರಾಗಿದ್ದರು. ಬಳಿಕ ಮದುವೆಯಾಗುವುದಾಗಿ ಭರವಸೆ ನೀಡಿ ಲೈಂಗಿಕ ದೌರ್ಜನ್ಯ ಎಸಗಿದ್ದರು. ಇತ್ತೀಚೆಗೆ ಮದುವೆಯಾಗಲು ನಿರಾಕರಿಸಿದ್ದರು. ಪ್ರಶ್ನಿಸಿದ್ದಕ್ಕೆ ಜೀವ ಬೆದರಿಕೆ ನೀಡಿದ್ದರು. ಎಂದು ಸಂತ್ರಸ್ತೆ ಮಹಿಳೆ ನೀಡಿದ ದೂರಿನಲ್ಲಿ ಅರೋಪಿಸಿದ್ದಾಳೆ.
ಕೊಟ್ಟಷ್ಟು ಹಣ ಪಡೆದು ಸುಮ್ಮನಾಗು ಇಲ್ಲದಿದ್ದಲ್ಲಿ ಕೊಲೆ ಮಾಡುವೆ ಎಂದು ಬೆದರಿಸಿದ್ದಾರೆ ಎಂದು ಯುವತಿ ದೂರು ನೀಡಿರುತ್ತಾಳೆ. ಪ್ರಕರಣದ ಕುರಿತು ಪೊಲೀಸರ ತನಿಖೆ ಮುಂದುವರಿದಿದೆ. ಸ್ವಾಮೀಜಿ ಈ ಹಿಂದೆಯೂ ವಿವಾದವೊಂದರಲ್ಲಿ ಸಿಲುಕಿದ್ದರು ಎನ್ನಲಾಗಿದ್ದು, ಇದೀಗ ಮತ್ತೆ ಅವರ ವಿರುದ್ಧ ಆರೋಪ ಕೇಳಿಬಂದಿದೆ. ಸ್ವಾಮೀಜಿಯವರ ವಿರುದ್ಧ ಇದೇ ರೀತಿಯಾಗಿ ಮಹಿಳೆಯರೊಂದಿಗೆ ಅಕ್ರಮ ಸಂಬಂಧ ಹಾಗೂ ದೈಹಿಕ ಸಂಪರ್ಕದ ಆರೋಪಗಳು ಕೇಳಿಬಂದಿದ್ದು, ಆ ಸಂದರ್ಭದಲ್ಲಿ ಗ್ರಾಮಸ್ಥರು ಮತ್ತು ಭಕ್ತರು ಮಠದ ಮುಂದೆ ಪ್ರತಿಭಟನೆ ನಡೆಸಿ ಅವರನ್ನು ಕೆಳಗಿಳಿಸುವಂತೆ ಆಗ್ರಹಿಸಿದ್ದರು.
