ಬೆಳ್ತಂಗಡಿ: ವನ್ಯಜೀವಿ ಅರಣ್ಯ ಇಲಾಖಾ ವಿಭಾಗಕ್ಕೆ ಸೇರಿದ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕಾಡಿನಿಂದ ಅಕ್ರಮವಾಗಿ ಮರ ಕಡಿದು ದಾಸ್ತಾನು ಮಾಡಿದ್ದ ಪ್ರಕರಣವನ್ನು ಬೆಳ್ತಂಗಡಿ ವಲಯ ವನ್ಯಜೀವಿ ಅರಣ್ಯ ಇಲಾಖೆಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ಬಾಲ್ತರ ಎಂಬಲ್ಲಿ ವನ್ಯಜೀವಿ ಅರಣ್ಯ ಇಲಾಖೆಗೆ ಸೇರಿದ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕಾಡಿನೊಳಗೆ ಅಕ್ರಮವಾಗಿ ಪ್ರವೇಶ ಮಾಡಿ ಹಲಸಿನ ಮರಗಳನ್ನು ಕಡಿದು ದಾಸ್ತಾನು ಮಾಡುತ್ತಿರುವ ಬಗ್ಗೆ ಬೆಳ್ತಂಗಡಿ ವಲಯ ವನ್ಯಜೀವಿ ವಿಭಾಗದ ಅರಣ್ಯಾಧಿಕಾರಿ ಶರ್ಮಿಷ್ಠಾ ನೇತೃತ್ವದ ತಂಡ ಖಚಿತ ಮಾಹಿತಿ ಮೇರೆಗೆ ಅ.13 ರಂದು ಸ್ಥಳಕ್ಕೆ ದಾಳಿ ಮಾಡಿದ್ದಾರೆ.

ದಾಳಿ ವೇಳೆ 6 ಹಲಸಿನ ಮರದ ತುಂಡುಗಳು ಹಾಗೂ ಒಂದು ಹಲಸಿನ ಮರದ ದಿಮ್ಮಿಯನ್ನು ವಶಕ್ಕೆ ಪಡೆದುಕೊಂಡು ಬೆಳ್ತಂಗಡಿ ನ್ಯಾಯಾಲಯದ ಅನುಮತಿ ಪಡೆದುಕೊಂಡು ಅ.14 ರಂದು ವನ್ಯಜೀವಿ ರಕ್ಷಣೆ ಕಾಯ್ದೆ 27,29,35,50,51,55 ಅಡಿಯಲ್ಲಿ ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ಮೊರ್ತಾಜೆ ನಿವಾಸಿ VHP ಹಾಗೂ ಬಿಜೆಪಿ ಪಕ್ಷದ ಮುಖಂಡ ಪ್ರಮೋದ್ ಸಾಲ್ಯಾನ್ ಮೋರ್ತಾಜೆ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆಯನ್ನು ಎಸಿಎಫ್ ಅವರು ನಡೆಸಲಿದ್ದಾರೆ.

ಹಿಂದೆ ಗೋಕಳ್ಳತನ ದಂಧೆ: ವಿಶ್ವ ಹಿಂದೂ ಪರಿಷತ್ತಿನ ನಾವೂರು ಗ್ರಾಮದ ಅಧ್ಯಕ್ಷನಾಗಿದ್ದ ಪ್ರಮೋದ್ ಸಾಲಿಯಾನ್ ಮೋರ್ತಾಜೆ ಈ ಹಿಂದೆ ಅಕ್ರಮ ಗೋಕಳ್ಳತನ ಮಾಡುತ್ತಿದ್ದು , ಸ್ವಂತ ಪಿಕಪ್ ವಾಹನದಲ್ಲಿ ಅಕ್ರಮ ಗೋ ಸಾಗಾಟ ಮಾಡುವ ಸಮಯದಲ್ಲಿ ಬಂಧಿತನಾಗಿ ಜೈಲು ಸೇರಿ, ಆ ಬಳಿಕವೂ ಅದೇ ದಂಧೆಯನ್ನು ಮಾಡುತ್ತಿದ್ದ ಎಂದು ಹೇಳಲಾಗುತ್ತಿದೆ. ಇದೀಗ ಗೋಕಳ್ಳತನ ನಡುವೆ ಅಕ್ರಮ ಮರ ಕಳ್ಳತನ ಮಾಡಿ ವನ್ಯಜೀವಿ ಅರಣ್ಯ ಇಲಾಖೆಯ ಅಧಿಕಾರಿಗಳ ಕೈ ಸಿಕ್ಕಿ ಬಿದ್ದು ಕ್ರಿಮಿನಲ್ ಕೇಸ್ ದಾಖಲಿಸಿಕೊಂಡಿದ್ದಾನೆ. ಆರೋಪಿ ಅ.14 ರಿಂದ ಪರಾರಿಯಾಗಿದ್ದು, ವನ್ಯಜೀವಿ ಅರಣ್ಯ ಇಲಾಖೆ ಆರೋಪಿಯ ಪತ್ತೆಗಾಗಿ ಬಲೆ ಬೀಸಿದ್ದಾರೆ.
