ಗಂಜಿಮಠ: ಗಬ್ಬು ನಾರುತ್ತಿದೆ ಮಾರ್ಕೆಟ್, ರಸ್ತೆಯಲ್ಲೇ ಹರಿಯುತ್ತಿದೆ ಕೊಳಚೆ ನೀರು; ರೋಗದ ಭೀತಿಯಲ್ಲಿ ನಾಗರಿಕರು, ಗಂಜಿಮಠ ಪಿಡಿಓ ಮೌನ.!

ಕರಾವಳಿ

ಇದು ಗಂಜಿಮಠ ಗ್ರಾಮ ಪಂಚಾಯತ್ ನ ಕಥೆ-ವ್ಯಥೆ. ಇಲ್ಲಿನ ಅಧಿಕಾರಿಗಳು ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದ್ದಾರೆ. ಜನಪ್ರತಿನಿಧಿಗಳು ನಿದ್ದೆಯಲ್ಲಿದ್ದಾರೆ. ಜನರ ಗೋಳು ಕೇಳುವವರೇ ಇಲ್ಲವಾಗಿದೆ.

ಗಂಜಿಮಠ ಪಂಚಾಯತಿಗೊಬ್ಬ ಪಂಚಾಯತ್ ಅಭಿವೃದ್ದಿ ಅಧಿಕಾರಿ. ಅದು ಯಾವ ಕರ್ಮಕ್ಕೊ ಗೊತ್ತಾಗುತ್ತಿಲ್ಲ. ಇಲ್ಲಿ ಎಲ್ಲವೂ ಲಂಚಮಯ. ಲಕ್ಷ, ಲಕ್ಷ ಕೊಟ್ಟರೆ ಎಲ್ಲವೂ ರೆಡಿ.9/11,ಪರವಾನಿಗೆ, ಕ್ಲಿಯೆರೆನ್ಸ್, ಯಾವುದು ಬೇಕು ಅದಕ್ಕೆ ಇಂತಿಷ್ಟು ಬಿಸಾಕಿದರೆ ಸಾಕು. ಮನೆ ಬಾಗಿಲಿಗೆ ಬರುತ್ತದೆ ದಾಖಲೆ ಪತ್ರ. ಮಿಟಿಂಗ್ ನಲ್ಲಿ ಇಟ್ಟು ಚರ್ಚೆ ಇಲ್ಲ. ಸದಸ್ಯರ ಗಮನಕ್ಕೂ ಬರುವುದಿಲ್ಲ. ಇಲ್ಲಿನ ಅಧಿಕಾರಿಗೆ ಚುನಾಯಿತ ಪ್ರತಿನಿಧಿಗಳು ಲೆಕ್ಕಕ್ಕಿಲ್ಲ.ದಪ್ಪ ಚರ್ಮದ ಈತನದ್ದೇ ಅಂಧ ದರ್ಭಾರು.! ಈತನಿಗೆ ಕಪ್ಪ ಸಂದಾಯವಾದರೆ ಸಾಕು. ತಾನು ಸುಖಿನು ಭವಂತು.

ಗಂಜಿಮಠ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಳಲಿ ಕ್ರಾಸ್ ಬಳಿಯ ಕಲ್ಯಾಣ ಮಂಟಪ,ಕೈಕಂಬದ ಪೇಟೆಯ ಹೆದ್ದಾರಿ ಪಕ್ಕದಲ್ಲಿರುವ ವಸತಿ ಸಮುಚ್ಚಾಯದ ಕೊಳಚೆ ನೀರು,ಮಲ-ಮೂತ್ರ ತುಂಬಿದ ಗಲೀಜು ನೀರು ರಸ್ತೆ ಮೇಲೆ ಹರಿಯುತ್ತಿದ್ದು, ಜನ ತೊಂದರೆ ಪಡುತ್ತಿದ್ದಾರೆ. ರೋಗ ಹರಡುವ ಸಾಧ್ಯತೆ ಇರುವ ಬಗ್ಗೆ ಜನ ಆತಂಕ ವ್ಯಕ್ತಪಡಿಸಿದ್ದಾರೆ. ಕೊಳಚೆ ನೀರು ಸರಾಗವಾಗಿ ರಸ್ತೆಯ ಮೇಲೆ ಹರಿಯುತ್ತಿದೆ. ಈ ಕೊಳಚೆ ನೀರು ದುರ್ವಾಸನೆ ಬೀರುತ್ತಿದ್ದು, ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ. ಆದರೆ ಗಂಜಿಮಠ ಗ್ರಾಮ ಪಂಚಾಯತ್ ಅಧಿಕಾರಿ ಇದ್ಯಾವುದಕ್ಕೂ ಕ್ಯಾರೇ ಅನ್ನದೆ ನಿರ್ಲಕ್ಷ್ಯವಹಿಸಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ದೂರಿದ್ದಾರೆ.

ಪಂಚಾಯತ್ ಕಛೇರಿಗೆ ತಾಗಿ ಕೊಂಡಿರುವ ಗಂಜಿಮಠ ಮಾರ್ಕೆಟಿನ ಅವಸ್ಥೆ ಹೇಳಿ ಪ್ರಯೋಜನವಿಲ್ಲ. ಬೀದಿ ನಾಯಿಗಳ,ಅಲೆಮಾರಿ ದನಗಳ ದೊಡ್ಡಿಯಾಗಿದೆ ಮಾರ್ಕೆಟ್. ಇಲ್ಲಿ ವ್ಯಾಪಾರ ನಡೆಸುವ ಆ ಬಡಪಾಯಿಗಳಿಗೆ ಅದೆಂತಹಾ ರೋಗ ಬರುತ್ತದೋ.. ಆ ದೇವನೇ ಬಲ್ಲ.! ತರಕಾರಿ ಖರೀದಿಸಬೇಕಾದರೆ ಮೂಗು ಮುಚ್ಚಿ ಕೊಂಡು ಹೋಗುವ ಪರಿಸ್ಥಿತಿ. ಗಲೀಜು ತುಂಬಿ, ಕೆಸರಿನಿಂದ ಸುಳಿದಾಡಲು ಸಾದ್ಯವಿಲ್ಲ. ಮಾರ್ಕೆಟ್ ಗಬ್ಬು ನಾರುತ್ತಿದೆ. ಆದರೆ ಮಾರ್ಕೆಟ್ ಪಕ್ಕದಲ್ಲೇ ಇರುವ ಈ ಮಹಾನುಭಾವನ ಕಛೇರಿಗೆ ಇದರ ವಾಸನೆ ಬಡಿಯುತ್ತಿಲ್ಲ. ಇಲ್ಲಿ ಏನಿದ್ದರೂ ಕೇವಲ ಕುರುಡು ಕಾಂಚಣದ ವಾಸನೆ ಮಾತ್ರ.!

ಗಂಜಿಮಠ ಪಂಚಾಯತ್ ವ್ಯಾಪ್ತಿಯ ಕೆಲವು ವಸತಿ ಸಮುಚ್ಚಾಯದ ಡ್ರೈನೇಜ್ ನ ಮಲ-ಮೂತ್ರದ ನೀರು ನೇರವಾಗಿ ರಸ್ತೆಯಲ್ಲೆ ಹರಿದು ಪರಿಸರದ ನಿವಾಸಿಗಳಿಗೆ ದುರ್ಗಂಧ ಬೀರುವಂತಾಗಿದೆ. ಇದರಿಂದ ಪರಿಸರದ ನಿವಾಸಿಗಳಿಗೆ ರೋಗ,ತಪ್ಪಿದ್ದಲ್ಲ. ಇಲ್ಲಿನ ಸಮುಚ್ಚಾಯಗಳಿಗೆ stp ವ್ಯವಸ್ಥೆ ಇಲ್ಲದಿದ್ದರೂ ಲಕ್ಷ-ಲಕ್ಷ,ಪಡೆದು ಈ ಮಹಾನುಭಾವ ಪರ್ಮಿಶನ್ ನೀಡುತ್ತಾರೆ. ಯಾರೇ ದೂರು ನೀಡಿದರೂ ಕ್ಯಾರೇ ಇಲ್ಲ. ಕೇಳಿದರೆ ಮೇಲಾಧಿಕಾರಿಗಳಿಗೆ ಮಾಮೂಲು ನೀಡಬೇಕೆಂಬ ಸಬೂಬು.! ಗಂಜಿಮಠ ಪಂಚಾಯತ್ ವ್ಯಾಪ್ತಿಯಲ್ಲಿ ಅವ್ಯಾಹತವಾಗಿ ಮರಳು ಮಾಫಿಯಾ,ಅಕ್ರಮ ಗಣಿಗಾರಿಕೆ ರಾಜಾರೋಷವಾಗಿ ನಡೆಯುತ್ತಿದ್ದರೂ ಯಾವುದೇ ಕ್ರಮ ವಹಿಸದೆ ಮೌನಿಯಾಗಿದ್ದಾರೆ ಎಂದು ಸಾರ್ವಜನಿಕವಾಗಿ ಕೇಳಿ ಬರುತ್ತಿದೆ. ತನ್ನ ವಸೂಲಿಯ ಸಂಪಾದನೆಯಿಂದ ಬೃಹತ್ ಬೇನಾಮಿ ಕಟ್ಟಡವೊಂದು ತಲೆ ಎತ್ತುತ್ತಿದೆ.

ರಸ್ತೆ ಪಕ್ಕದಲ್ಲಿರುವ ಗುಂಡಿಗಳಲ್ಲಿ ಈ ಮಲ-ಮೂತ್ರದ ನೀರು ತುಂಬಿ ಸೊಳ್ಳೆ ಉತ್ಪತ್ತಿಯಾಗಿ ಪರಿಸರದಲ್ಲಿ ಮಲೇರಿಯಾ, ಡೆಂಗ್ಯೂಗಳಂತಹ ಮಾರಕ ರೋಗ ಬರುವ ಸಾಧ್ಯತೆ ಇದೆ. ಸ್ಥಳಿಯ ನಿವಾಸಿಗಳು ಸೊಳ್ಳೆಕಾಟದಿಂದ ಕಂಗಾಲಾಗಿದ್ದಾರೆ. ಪರಿಸರದ ತೋಡುಗಳಲ್ಲಿ, ಹೊಂಡಗಳಲ್ಲಿ ಡ್ರೈನೇಜ್ ನೀರು ನಿಂತು ಪಾಚಿ ಕಟ್ಟಿರುತ್ತದೆ. ಇಲ್ಲಿನ ಸಮುಚ್ಜಾಯದ ಅವ್ಯವಸ್ಥೆಯಿಂದ ಪರಿಸರದ ನಿವಾಸಿಗಳಿಗೆ ಬಹಳ ತೊಂದರೆಯಾಗುತ್ತಿದೆ. ಈ ಬಗ್ಗೆ ಹಲವಾರು ಬಾರಿ ಸಂಬಂದ ಪಟ್ಟ ಇಲಾಖೆಗೆ, ಪಂಚಾಯತ್ ಅಭಿವೃದ್ದಿ ಅಧಿಕಾರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಯಾರ ದೂರಿಗೆ ಕಿಮ್ಮತ್ತು ನೀಡುತ್ತಿಲ್ಲ ಎಂದು ನಾಗರಿಕರು ತಮ್ಮ ಅಹವಾಲು ಹೇಳಿ ಕೊಂಡಿದ್ದಾರೆ. ಸಂಬಂಧ ಪಟ್ಟವರು ಕೂಡಲೇ ಸಾರ್ವಜನಿಕರ ಆರೋಗ್ಯದ ಹಿತದೃಷ್ಠಿಯಿಂದ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.