ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆ ನಡೆಸಬೇಕು ಅಂತ ಸಚಿವ ಸಂಪುಟದಲ್ಲಿ ತಿರ್ಮಾನ ಮಾಡಿದ್ದೇವೆ. ಡಿಸೆಂಬರ್ 2ನೇ ವಾರದಲ್ಲಿ ಚುನಾವಣಾ ವೇಳಾಪಟ್ಟಿ ಪ್ರಕಟವಾಗಿ, ಜನವರಿ ಮೊದಲ ವಾರ ಅಥವಾ 2ನೇ ವಾರದಲ್ಲಿ ತಾಲೂಕು- ಜಿಲ್ಲಾ ಪಂಚಾಯಿತಿ ಚುನಾವಣೆ ನಡೆಯುವ ಸಾಧ್ಯತೆ ಇದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿ.ಪಂ. ಮತ್ತು ತಾಪಂ ಚುನಾವಣೆಯ ಮೀಸಲಾತಿಯ ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸಲು ಅ.19ರವರೆಗೆ ಅವಕಾಶವಿತ್ತು. 1800 ಆಕ್ಷೇಪಣೆ ಅರ್ಜಿಗಳು ಬಂದಿದೆ ಎನ್ನುವ ಮಾಹಿತಿ ಇದೆ. ಒಂದು ವಾರದೊಳಗೆ ಆಕ್ಷೇಪಣೆಗಳನ್ನು ಪರಿಶೀಲನೆ ಮಾಡಿ ಅಂತಿಮವಾಗಿ ಕ್ಷೇತ್ರಗಳ ಪಟ್ಟಿ ಪ್ರಕಟಿಸುತ್ತೇವೆ ಎಂದರು.
ಈ ತಿಂಗಳೊಳಗೆ ಮೀಸಲಾತಿ ಪಟ್ಟಿ ಅಂತಿಮಗೊಳಿಸಿ ಚುನಾವಣಾ ಆಯೋಗಕ್ಕೆ ಸಲ್ಲಿಸುತ್ತೇವೆ. ಚುನಾವಣಾ ಆಯೋಗ, ಚುನಾವಣೆ ದಿನಾಂಕ, ವೇಳಾಪಟ್ಟಿ ಘೋಷಣೆ ಮಾಡಲಿದೆ. ಬ್ಯಾಲೆಟ್ ಬಾಕ್ಸ್ ಸೇರಿದಂತೆ ಎಲ್ಲಾ ತಯಾರಿ ಮಾಡಲು ಚುನಾವಣಾ ಆಯೋಗಕ್ಕೆ ಸಮಯಬೇಕು ಎಂದು ತಿಳಿಸಿದರು.
