ಲೋಕತಂತ್ರ ಬಚಾವೋ ಆಂದೋಲನ ಸಮಿತಿ ಬೆಳ್ತಂಗಡಿ ತಿರಂಗಾ ನಡಿಗೆ ಪ್ರತಿಭಟನೆಯಲ್ಲಿ ಖ್ಯಾತ ಅಂಕಣಕಾರ ಶಿವಸುಂದರ್ ಅಭಿಮತ
ದೇಶದಲ್ಲಿ ಮತದಾರರನ್ನು ಕಳ್ಳರಂತೆ, ದೇಶದ್ರೋಹಿಗಳಂತೆ ಕಾಣುವ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಸಂವಿಧಾನ ವಿರೋಧಿಯಾದುದು. ಇದರ ವಿರುದ್ಧ ನಾವು ಸಂವಿಧಾನದ ಆಧಾರಿತ ಹೋರಾಟ ನಡೆಸುತ್ತಿದ್ದರೆ, ಬಿಜೆಪಿ, ಸಂಘಪರಿವಾರ ಮನುಸ್ಮೃತಿ ಆಧಾರಿತ ಹೋರಾಟ ನಡೆಸಿದ್ದಾರೆ. ಆದುದರಿಂದ ದೇಶದಾದ್ಯಂತ ಸಂವಿಧಾನ ಮತ್ತು ಮನುಸ್ಮೃತಿ ನಡುವಿನ ಸಂಘರ್ಷ ಆರಂಭವಾಗಿದ್ದು, ಅಂತಿಮ ಜಯ ಸಂವಿಧಾನಕ್ಕೆ ಲಭಿಸಲಿದೆ ಎಂದು ಖ್ಯಾತ ಅಂಕಣಕಾರ, ಚಿಂತಕ ಶಿವಸುಂದರ್ ಹೇಳಿದರು. ಅವರು ಲೋಕತಂತ್ರ ಬಚಾವೋ ಆಂದೋಲನ ಸಮಿತಿ ಬೆಳ್ತಂಗಡಿ ಇದರ ನೇತೃತ್ವದಲ್ಲಿ ಸೋಮವಾರ ಬೆಳ್ತಂಗಡಿಯಲ್ಲಿ ನಡೆದ ತಿರಂಗಾ ನಡಿಗೆ ಮತ್ತು ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಎಸ್ಐಆರ್ ಹೆಸರಿನಲ್ಲಿ ದೇಶದಾದ್ಯಂತ 13 ಕೋಟಿ ಮತದಾರರನ್ನು ರಾಜ್ಯದಲ್ಲಿ 1 ಕೋಟಿ ಮತದಾರರನ್ನು ಕೈಬಿಡಲಾಗಿದ್ದು, ಇದನ್ನು ಸಹಿಸಲು ಸಾಧ್ಯವಿಲ್ಲ. ನುಸುಳುಕೋರರನ್ನು ಪತ್ತೆ ಹಚ್ಚುವ ನೆಪದಲ್ಲಿ ಭಾರತೀಯ ಮತದಾರರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುವ ದೇಶದ್ರೋಹಿ ಕೆಲಸವನ್ನು ಚುನಾವಣಾ ಆಯೋಗದ ಮೂಲಕ ಜ್ಞಾನೇಶ್ ಕುಮಾರ್ ನಡೆಸುತ್ತಿದ್ದಾರೆ ಎಂದು ಆರೋಪಿಸಿದ ಅವರು ರಾಜ್ಯದಲ್ಲಿ 1 ಕೋಟಿ ಮತದಾರರನ್ನು ಕೈಬಿಟ್ಟಿರುವ ಚುನಾವಣಾ ಆಯೋಗದ ಕ್ರಮವನ್ನು ರಾಜ್ಯ ಸರ್ಕಾರ ತಿರಸ್ಕರಿಸಬೇಕು ಎಂದು ಒತ್ತಾಯಿಸಿದ ಅವರು ಎಸ್ಐಆರ್ ರದ್ದುಗೊಳಿಸುವ ಹಾಗೂ ಜ್ಞಾನೇಶ್ ಕುಮಾರ್ ರಾಜಿನಾಮೆ ನೀಡುವ ತನಕವೂ ಪ್ರಜಾಪ್ರಭುತ್ವ ಉಳಿಸುವ ಹೋರಾಟಗಳು ನಡೆಯಲಿದೆ ಎಂದರು.

ಲೋಕತಂತ್ರ ಬಚಾವೋ ಆಂದೋಲನ ಸಮಿತಿ ಬೆಳ್ತಂಗಡಿ ಸಂಚಾಲಕ ಶೇಖರ್ ಲಾಯಿಲ ಮಾತನಾಡಿ ಬಿಜೆಪಿ ವಿರೋಧಿ ಮತದಾರರನ್ನು ಕಿತ್ತೆಸೆಯಲು ನರೇಂದ್ರ ಮೋದಿ ಮತ್ತು ಅಮಿಶ್ ಶಾ ತಂಡ ಜ್ಞಾನೇಶ್ ಕುಮಾರ್ ಮೂಲಕ RSS ನ ಗುಪ್ತ ಅಜೆಂಡಾವನ್ನು ಜಾರಿಗೊಳಿಸುತ್ತಿದೆ. ದಲಿತ, ಆದಿವಾಸಿ, ಮುಸ್ಲಿಂ, ಕ್ರೈಸ್ತ, ಹಿಂದುಳಿದ ವರ್ಗಗಳ ಮತದಾರರನ್ನು ವ್ಯವಸ್ಥಿತವಾಗಿ ಹೊರಗಿಡಲಾಗುತ್ತಿದೆ. ಸ್ವಾಯತ್ತ ಸಂಸ್ಥೆಯಾಗಿದ್ದ ಚುನಾವಣಾ ಆಯೋಗವನ್ನು ಇಂದು RSS ಕಚೇರಿಯಾಗಿ ಪರಿವರ್ತಿಸಲಾಗಿದೆ. ದೇಶದ ಪ್ರಜಾಪ್ರಭುತ್ವ ಉಳಿಸುವ ನಿಟ್ಟಿನಲ್ಲಿ ದೇಶದಾದ್ಯಂತ ನಡೆಯುತ್ತಿರುವ ಜನಾಂದೋಲನಕ್ಕೆ ಶಕ್ತಿ ತುಂಬಲು ಈ ಹೋರಾಟ ಬೆಳ್ತಂಗಡಿಯಲ್ಲಿ ನಡೆಸಲಾಗಿದೆ ಎಂದರು.
ಪ್ರತಿಭಟನೆಯನ್ನು ಉದ್ದೇಶಿಸಿ ಪ್ರಜಾಪ್ರಭುತ್ವ ಉಳಿಸಿ ಆಂದೋಲನದ ಜಿಲ್ಲಾ ಸಂಚಾಲಕ , ನ್ಯಾಯವಾದಿ ವಿನೋದ್ ಮಸ್ಕರೇನಸ್, RYA ಜಿಲ್ಲಾ ಉಪ ಸಂಚಾಲಕ ಲುಕ್ಮಾನ್ ನೆಲ್ಯಾಡಿ, ವೆಲ್ಪೆರ್ ಪಾರ್ಟಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುನೀರ್ ಪದರಂಗಿ, ಎಸ್ಕೆಎಸ್ಎಸ್ಎಫ್ ನ ರಾಜ್ಯ ಉಪಾಧ್ಯಕ್ಷ ಕೆ. ಎಸ್ ಇಕ್ಬಾಲ್ ಬಾಳಿಲ ಮಾತನಾಡಿದರು.

ನೇತೃತ್ವವನ್ನು ಲೋಕತಂತ್ರ ಬಚಾವೋ ಆಂದೋಲನ ಸಮಿತಿ ಬೆಳ್ತಂಗಡಿ ಸಹ ಸಂಚಾಲಕರಾದ ಶಾಫಿ ಬಂಗಾಡಿ, ಗ್ರೇಸಿ ಲೋಬೋ, ವೆಲ್ಪೆರ್ ಪಾರ್ಟಿ ಜಿಲ್ಲಾಧ್ಯಕ್ಷ ಎಂ ದಿವಾಕರ ರಾವ್, ಯುವ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಅಜಾರುದ್ದೀನ್, ಸೋಲಿಡಾರ್ಟಿ ಯೂತ್ ಮೂಮೆಂಟ್ ಜಿಲ್ಲಾಧ್ಯಕ್ಷ ಅಸ್ಲಾಂ ಪಂಜಲ, ಮುಖಂಡರಾದ ಸಂಜೀವ್ ನಾಯ್ಕ್, ನಿಲೇಶ್ ಹೆಚ್ ಪೆರಿಂಜೆ ಮೊದಲಾದವರು ವಹಿಸಿದ್ದರು.
ಸಂತೆಕಟ್ಟೆ ಅಯ್ಯಪ್ಪ ದೇವಸ್ಥಾನದ ಬಳಿಯಿಂದ ಬೆಳ್ತಂಗಡಿ ಬಸ್ ನಿಲ್ದಾಣದ ವರೆಗೆ ಬಾರಿ ಮಳೆಯ ನಡುವೆಯೂ ತಿರಂಗಾ ನಡಿಗೆ ನಡೆಯಿತು. ಪ್ರತಿಭಟನಾಕಾರರು ಮಳೆಯಲ್ಲಿ ನೆನೆಯುತ್ತಲೆ ನಡಿಗೆಯಲ್ಲಿ ಪಾಲ್ಗೊಂಡರು. ಪ್ರತಿಭಟನೆಕಾರರೊಂದಿಗೆ ಶಿವಸುಂದರ್ ರವರು ಮಳೆಯಲ್ಲಿ ನೆನೆಯುತ್ತಲೆ ನಡಿಗೆಯಲ್ಲಿ ಪಾಲ್ಗೊಂಡರು.
