ವಿದ್ಯಾರ್ಥಿಗಳಲ್ಲಿ ಪ್ರೀತಿ ಹಂಚುವವನೇ ನೈಜ ಜನನಾಯಕ; ದ್ವೇಷ ಹಂಚುವವ ಎಂ ಎಲ್ ಎ ಅಲ್ಲ..ಹಾದಿ ಬೀದಿ ದಾಸಯ್ಯ
ಪೂಂಜಾಗೆ ಠಕ್ಕರ್ ಕೊಟ್ಟ ಸಾಮಾಜಿಕ ಹೋರಾಟಗಾರ ಲಾಯಿಲ
ಸರ್ಕಾರಿ ಶಾಲಾ ಕಾಲೇಜುಗಳಿಗೆ ಮೂಲಭೂತ ಸೌಕರ್ಯಗಳನ್ನು ನೀಡಿ ಮಕ್ಕಳಲ್ಲಿ ದೇಶಪ್ರೇಮ, ವಿದ್ಯಾರ್ಥಿಗಳ ನಡುವೆ ಪ್ರೀತಿ-ಪ್ರೇಮವನ್ನು ಹಂಚುವ ಕೆಲಸ ಮಾಡಬೇಕೇ ಹೊರತು ಅಸೂಯೆ, ದ್ವೇಷವನ್ನಲ್ಲ. ಶಾಸಕ ಹರೀಶ್ ಪೂಂಜಾ ತನ್ನ ಪ್ರಚಾರದ ತೆವಲಿಗಾಗಿ ಅಪ್ರಾಪ್ತ ಮಕ್ಕಳ ನಡುವೆ ರಾಜಕೀಯ ಭಾಷಣ ಮಾಡಿರುವುದು ಶಾಸಕರ ದಿವಾಳಿತನಕ್ಕೆ ಸಾಕ್ಷಿಯಾಗಿದೆ ಎಂದು ಸಾಮಾಜಿಕ ಹೋರಾಟಗಾರ ಶೇಖರ್ ಲಾಯಿಲ ಟೀಕಿಸಿದ್ದಾರೆ.
ಶಾಸಕ ಹರೀಶ್ ಪೂಂಜಾರಿಗೆ ಎಲ್ಲಿ, ಯಾವಾಗ, ಏನು ಮಾತನಾಡಬೇಕು ಎಂಬ ಸಾಮಾನ್ಯ ಜ್ಞಾನವಿಲ್ಲ ಜೊತೆಗೆ ಅನುಭವದ ಕೊರತೆಯಿದೆ. ಅನುಭವದ ಕೊರತೆ ನೀಗಿಸಲು ತಾವು ಭಾಷಣ ಮಾಡಿದ ಕಾಲೇಜಿನ ಅಪ್ರಾಪ್ತ ಮಕ್ಕಳಿಂದ ಪಾಠ ಕಲಿಯಬೇಕಾದ ಅಗತ್ಯವಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಿನ್ನಾಭಿಪ್ರಾಯಗಳು ಸಾಮಾನ್ಯವಾಗಿದೆ. ಆದರೆ ತನಗಿರುವ ರಾಜಕೀಯ ಭಿನ್ನಾಭಿಪ್ರಾಯವನ್ನು ಅಪ್ರಾಪ್ತ ಮಕ್ಕಳ ಮೇಲೆ ಬಲತ್ಕಾರವಾಗಿ ಹೇರುವುದು ಶಾಸಕರ ಸರ್ವಾಧಿಕಾರದ ವರ್ತನೆಯಾಗಿದೆ. ಆ ಮೂಲಕ ಅಪ್ರಾಪ್ತ ವಯಸ್ಸಿನ ಮಕ್ಕಳ ನಡುವೆ ಗೊಂದಲ, ದ್ವೇಷ ಸಾಧನೆಗೆ ಕರೆ ಕೊಡುವುವಂತದ್ದು ಮೂರ್ಖತನ ಪರಾಮಾವಧಿ. ಶಾಸಕ ಹರೀಶ್ ಪೂಂಜಾ ಘನತೆ, ಗೌರವ ಇಲ್ಲದವರಂತೆ ಮಾತನಾಡುವ ಮೂಲಕ ತಾವೇ ತಮ್ಮ ಮಾನ ಹರಾಜು ಹಾಕಿಕೊಳ್ಳುತ್ತಿರುವುದು ಹಾಸ್ಯಸ್ಪದವಾಗಿದೆ.

ಎರಡನೇ ಅವಧಿಯಲ್ಲಿ ಶಾಸಕನಾದ ನಂತರ ಒಬ್ಬ ದ್ವೇಷ ಭಾಷಣಕಾರನಾಗಿ, ಗಲಭೆ, ಗಲಾಟೆ ಸೃಷ್ಟಿಸುವ ಬೀದಿರೌಡಿಯಂತೆ ವರ್ತಿಸುವುದು ಅತ್ಯಂತ ಆತಂಕಕಾರಿಯಾಗಿದೆ. ಶಾಸಕ ಪೂಂಜಾ ಕ್ರಿಮಿನಲ್ ಶಾಸಕನಾಗುವ ಮೂಲಕ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಜನರ ಮಾನ ಹರಾಜು ಹಾಕುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಸೋಲುವ ಭಯದಿಂದ ಹಾದಿಬೀದಿಯಲ್ಲಿ ರಾಜಕೀಯ ಮಾಡಲು ಹೊರಟಿದ್ದಾರೆ. ಇಂತಹ ನೀಚತನದ ರಾಜಕೀಯ ಸಹಿಸಲು ಸಾಧ್ಯವಿಲ್ಲ, ಮುಂದಿನ ದಿನಗಳಲ್ಲಿ ಹಾದಿಬೀದಿಯಲ್ಲಿಯೇ ಪ್ರತ್ಯುತ್ತರ ನೀಡಬೇಕಾಗುತ್ತದೆ ಎಂಬುದು ನೆನಪಿರಲಿ ಎಂದು ಸಾಮಾಜಿಕ ಹೋರಾಟಗಾರ ಶೇಖರ್ ಲಾಯಿಲ ಎಚ್ಚರಿಕೆ ನೀಡಿದ್ದಾರೆ.
