ಕರಾಳ ಕಾರ್ಮಿಕ ಸಂಹಿತೆ ರದ್ದತಿಗೆ ಒತ್ತಾಯಿಸಿ, ಗುರುಪುರ ಕೈಕಂಬದಲ್ಲಿ ಕಟ್ಟಡ ಕಾರ್ಮಿಕರ ಸಂಘದಿಂದ ಮೆರವಣಿಗೆ, ಪ್ರತಿಭಟನೆ

ಕರಾವಳಿ

ಕೇಂದ್ರ ಸರಕಾರ ಜಾರಿಗೊಳಿಸಿರುವ ಕರಾಳ ಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸಬೇಕು, ಕಟ್ಟಡ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯನ್ನು ರಕ್ಷಿಸಬೇಕು, ಕಲ್ಯಾಣ ಮಂಡಳಿಯ ಹಣ ದುರುಪಯೋಗ ತಡೆಯಬೇಕು ಎಂದು ಒತ್ತಾಯಿಸಿ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘ (CWFI) ಕೇಂದ್ರ ಸಮಿತಿ ಇಂದು ದೇಶದಾದ್ಯಂತ ಪ್ರತಿಭಟನೆಗೆ ಕರೆ ನೀಡಿದ್ದು, ಅದರ ಭಾಗವಾಗಿ ಗುರುಪುರ, ಕೈಕಂಬದಲ್ಲಿ ನಿರ್ಮಾಣ ಕಾರ್ಮಿಕರು ಕೈಕಂಬ ಜಂಕ್ಷನ್ ನಿಂದ ನಾಡ ಕಚೇರಿವರಗೆ ಮೆರವಣಿಗೆ ನಡೆಸಿದರು‌.

ಮೆರವಣಿಗೆ ತರುವಾಯ ನಡೆದ ಪ್ರತಿಭಟನಾ ಸಭೆಯಲ್ಲಿ ಉದ್ಘಾಟಿಸಿ ಕಾರ್ಮಿಕ ಮುಖಂಡ ಸದಾಶಿವ ದಾಸ್ ಮಾತನಾಡುತ್ತಾ, ಕಟ್ಟಡ ನಿರ್ಮಾಣ ಕಾರ್ಮಿಕರನ್ನು ಹಕ್ಕುಗಳಿಂದ ವಂಚಿಸುವ ವ್ಯವಸ್ಥಿತ ಕೆಲಸಕ್ಕೆ ಕೇಂದ್ರ ಸರಕಾರ ಮುಂದಾಗಿದೆ, 50 ಲಕ್ಷ ರೂಪಾಯಿಗಿಂತ ಕಡಿಮೆ ವೆಚ್ಚದ ನಿರ್ಮಾಣದಲ್ಲಿ ಕೆಲಸ ಮಾಡುವವರನ್ನು ನಿರ್ಮಾಣ ಕಾರ್ಮಿಕರು ಎಂದು ಪರಿಗಣಿಸದಿರಲು ಮುಂದಾಗಿರುವುದು ಕಟ್ಟಡ ಕಾರ್ಮಿಕರಿಗೆ ಮಾಡುವ ದ್ರೋಹ ಆಗಿದೆ. ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಮಾತನಾಡುತ್ತಾ, ಕಾರ್ಮಿಕ ಕಾಯ್ದೆಗೆ ಬದಲಿಯಾಗಿ ಕೇಂದ್ರ ಸರಕಾರ ಜಾರಿಗೆ ತಂದಿರುವ ನಾಲ್ಕು ಕಾರ್ಮಿಕ ಸಂಹಿತೆಗಳು ಭಾರತದ ಕಾರ್ಮಿಕ ವರ್ಗದ ಕೊರಳಿಗೆ ಬಿಗಿದಿರುವ ಉರುಳಾಗಿದೆ‌. ಮೋದಿ ಸರಕಾರ ಕಾರ್ಪೊರೇಟ್ ಬಂಡವಾಳದಾರರ ಉದ್ದಾರಕ್ಕೆ ಟೊಂಕ ಕಟ್ಟಿದೆ. ಅದಕ್ಕಾಗಿ ಕಾರ್ಮಿಕ ವರ್ಗದ ಹಕ್ಕುಗಳನ್ನು ನಿರ್ದಯವಾಗಿ ಕಿತ್ತುಹಾಕುತ್ತಿದೆ. ಕಾರ್ಮಿಕರು ಈ ಕುರಿತು ಎಚ್ಚೆತ್ತುಕೊಳ್ಳದಿದ್ದರೆ ಬೀದಿಪಾಲಾಗಬೇಕಾಗುತ್ತದೆ ಎಂದು ಎಚ್ಚರಿಸಿದರು‌.

ಕೈಕಂಬ, ಮಳಲಿ ವಿಭಾಗ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಕಾರ್ಯದರ್ಶಿ ನೋಣಯ್ಯ ಗೌಡ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು, ಕುಪ್ಪೆಪದವು ವಲಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಕಾರ್ಯದರ್ಶಿ ವಸಂತಿ ಕುಪ್ಪೆಪದವು ಮನವಿ ಪತ್ರ ವಾಚಿಸಿದರು. ಪ್ರತಿಭಟನೆಯ ನೇತೃತ್ವವನ್ನು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಮುಖಂಡರುಗಳಾದ ಹರೀಶ್ ಮಂಗಲ್ಚಾರ್, ಇಬ್ರಾಹಿಂ ಕುಪ್ಪೆಪದವು, ಲೋಕೇಶ್, ರಾಮ ಶೆಟ್ಟಿಗಾರ್ ಕೊಂಪದವು, ರವೀಂದ್ರ ಶೆಟ್ಟಿಗಾರ್, ಆನಂದ ದೇವಾಡಿಗ, ಜನಾರ್ದನ ಗೌಡ ಎಡಪದವು, ರೋಹಿತ್ ಶೆಟ್ಟಿಗಾರ್, ಪುತ್ತು ಗೌಡ ಎಡಪದವು, ದಿನೇಶ್ ಇರುವೈಲು, ಭೋಜ ಇರುವೈಲು, ಆನಂದ ಪೂಜಾರಿ ಇರುವೈಲು, ರಾಜೇಶ್ ನಾಯ್ಕ್, ಸುರೇಶ್ ಆಚಾರ್ಯ, ಅಶೋಕ ವಾಮಂಜೂರು, ಹೊನ್ನಯ್ಯ ಅಮೀನ್, ಜಯಶೀಲ ವಾಮಂಜೂರು, ಗೋಪಾಲ ಮೂಲ್ಯ ಮಳಲಿ, ಯಶೋಧ ಮಳಲಿ, ಜನಾರ್ಧನ ಮಳಲಿ, ವೆಂಕಪ್ಪ ಸಾಲ್ಯಾನ್, ಬಾಬು ಗೌಡ ಕೊಂಪದವು ವಹಿಸಿದ್ದರು.