ಕಾಂಗ್ರೆಸ್ ಪ್ರಭಾವಿ ಮುಖಂಡನ ಅಣಬೆ ಫ್ಯಾಕ್ಟರಿಗೆ ಡಿ.ಸಿ ತಲೆ ದಂಡ.! ಮುಲೈ ಮುಹಿಲನ್ ದ.ಕ ಜಿಲ್ಲಾ ನೂತನ ಡಿ.ಸಿ

ಕರಾವಳಿ

ಮಂಗಳೂರಿನ ವಾಮಂಜೂರು ತಿರುವೈಲ್ ವಾರ್ಡ್ ನ ಓಂಕಾರ ನಗರದಲ್ಲಿ ಕಾಂಗ್ರೆಸ್ ಪ್ರಭಾವಿ ಮುಖಂಡರು, ಮಾಜಿ ಶಾಸಕರ ಪಾಲುದಾರಿಕೆ, ಒಡೆತನದ ಮಶ್ರೂಮ್ ಫ್ಯಾಕ್ಟರಿ ವಿರುದ್ಧ ಸ್ಥಳೀಯ ಸಾರ್ವಜನಿಕರು ತೀವ್ರ ವಿರೋಧ ಹಾಗೂ ಪ್ರತಿಭಟನೆಗೆ ಇಳಿದ ಪರಿಣಾಮ ಹಾಗೂ ಈ ಹಿಂದೆಯೇ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರಿಂದ ವಿವಿಧ ರೀತಿಯ ತನಿಖೆ ನಡೆಸಿ ಕೊನೆಗೆ ಜಿಲ್ಲಾಧಿಕಾರಿ ರವಿಕುಮಾರ್ ‘ವೈಟ್ ಗ್ರೋ ಎಗ್ರಿ ಎಲ್ ಎಲ್ ಪಿ’ ಹೆಸರಿನ ಅಣಬೆ ಫ್ಯಾಕ್ಟರಿಗೆ ಬೀಗ ಜಡಿದು ಆದೇಶಿಸಿದರು.

ಸ್ಪೆಷಲ್ ನ್ಯೂಸ್ ಮೀಡಿಯಾ ನಿನ್ನೆಯಷ್ಟೇ ಜಿಲ್ಲಾಧಿಕಾರಿ ಬದಲಾಯಿಸಲು ಕಾಂಗ್ರೆಸ್ ಮುಖಂಡರು ಪ್ರಯತ್ನಿಸುತ್ತಿದ್ದಾರೆ ಎಂದು ಸವಿವರವಾಗಿ ವರದಿ ಮಾಡಿತ್ತು. ಇತ್ತೀಚೆಗೆ ಜಿಲ್ಲೆಗೆ ಭೇಟಿ ನೀಡಿದ ಉಸ್ತುವಾರಿ ಸಚಿವರ ಕಾರ್ಯಕ್ರಮದಲ್ಲಿಯೇ ಕಾಂಗ್ರೆಸ್ ಪ್ರಭಾವಿ ಮುಖಂಡನ ಚೇಲಾಗಳು ಕಾಂಗ್ರೆಸ್ ಸರಕಾರ ಇದ್ದಾಗಲೂ ನಮಗೆ ಈ ಗತಿಯಾಗಿದೆ, ಬಿಜೆಪಿ ಸರಕಾರ ಇದ್ದಾಗ ನಮಗೇನೂ ತೊಂದರೆಯಾಗಿಲ್ಲ ಎಂದು ಕಾಂಗ್ರೆಸ್ ನ ಕೆಲವೊಂದು ನಾಯಕರ ಮುಂದೆಯೇ ಅಸಮಾಧಾನ ಹೊರಹಾಕಿದ್ದರು. ಡಿ.ಸಿ ಬದಲಾಯಿಸುವಂತೆ ದುಂಬಾಲು ಬಿದ್ದಿದ್ದರು.

ಇದೀಗ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರವಿಕುಮಾರ್ ಅವರನ್ನು ವರ್ಗಾವಣೆಗೊಳಿಸಿ ನೂತನ ಜಿಲ್ಲಾಧಿಕಾರಿಯಾಗಿ ಮುಲೈ ಮುಹಿಲನ್ ಅವರ ಹೆಸರನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ. ಮುಲೈ ಮುಹಿಲನ್ ಸ್ಮಾರ್ಟ್ ಗವರ್ನೆನ್ಸ್ ಬೆಂಗಳೂರು ಇದರ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಸೇವೆಯಲ್ಲಿದ್ದರು. ತಮಿಳುನಾಡು ಮೂಲದ 2013 ರ ಬ್ಯಾಚ್ ಐಎಎಸ್ ಅಧಿಕಾರಿಯಾಗಿದ್ದಾರೆ.

ಅಣಬೆ ವಿಚಾರವಲ್ಲ..ಅನೇಕ ಸಂದರ್ಭಗಳಲ್ಲೂ ಇದು ಸಾಬೀತಾಗಿದೆ. ಕಾಂಗ್ರೆಸ್ ಅಧಿಕಾರವಿದ್ದಾಗ ಅಲ್ಪಸಂಖ್ಯಾತ ಸಮುದಾಯದೊಳಗಿನ ಸಣ್ಣ ಸಮುದಾಯದವರ ಯಾವುದೇ ಸಮಸ್ಯೆ ಉಂಟಾದಾಗ ಹೈಕಮಾಂಡ್ ಮಟ್ಟದಲ್ಲಿ ಪ್ರಭಾವ ಬೀರಿ ಬದಲಾಯಿಸುವ ಶಕ್ತಿ ಹೊಂದಿದ್ದಾರೆ. ಆದರೆ ಅಲ್ಪಸಂಖ್ಯಾತ ಸಮುದಾಯದೊಳಗಿನ ದೊಡ್ಡ ಸಂಖ್ಯೆಯ ಸಮುದಾಯದವರಿಗೆ ಅನ್ಯಾಯಗೊಳಗಾದಾಗ ಅಧಿಕಾರಿಗಳ ತಲೆದಂಡಕ್ಕೆ ಮೀನಮೇಷ ಎಣಿಸಲಾಗುತ್ತಿದೆ ಎಂಬುದು ಮತ್ತೊಮ್ಮೆ ಜಗಜ್ಜಾಹೀರು ಆಗಿದೆ.