ಮೊಟ್ಟೆಗಳನ್ನು ಸಾಗಿಸುವ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 16 ಜಾನುವಾರುಗಳನ್ನು ಮಂಗಳೂರು ನಗರದ ಕಂಕನಾಡಿ ಠಾಣೆಯ ಪೊಲೀಸರು ಸೋಮವಾರ ರಕ್ಷಣೆ ಮಾಡಿದ್ದಾರೆ. ವಾಹನದ ಚಾಲಕ ಮೈಸೂರಿನ ಮಹಮ್ಮದ್ ರಫೀಕ್ ಹಾಗೂ ರೆಹಮಾನ್ ಎಂಬವರನ್ನು ಬಂಧಿಸಲಾಗಿದೆ.
ಮೊಟ್ಟೆ ಸಾಗಾಟಕ್ಕೆ ಬಳಸುವ ‘ಸ್ಟಾರ್ ಎಗ್’ ಎಂದು ಬರೆದಿರುವ ವಾಹನದಲ್ಲಿ ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು, ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಪಂಪ್ವೆಲ್ ನ ಉಜ್ಜೋಡಿ ಬಳಿ ವಾಹನವನ್ನು ತಡೆದು ತಪಾಸಣೆಗೆ ಒಳಪಡಿಸಿದಾಗ ಅದರಲ್ಲಿ ಜಾನುವಾರುಗಳು ಪತ್ತೆಯಾಗಿವೆ. ಜಾನುವಾರುಗಳನ್ನು ಬೆಳಗಾವಿ ಜಿಲ್ಲೆಯ ಯಮಕನಮರಡಿಯಿಂದ ತರಲಾಗಿದ್ದು, ಕೇರಳದ ಕಾಸರಗೋಡಿಗೆ ಮಾಂಸ ಮಾಡುವ ಉದ್ದೇಶದಿಂದ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ.
ಲಾರಿಯ ಹಿಂಬದಿ ಮೊಟ್ಟೆಗಳನ್ನು ಇಡುವ ಟ್ರೇಗಳನ್ನು ಪೇರಿಸಿಟ್ಟಿದ್ದರು. ವಾಹನದ ಒಳಭಾಗದಲ್ಲಿ 16 ಜಾನುವಾರುಗಳನ್ನು ಹಿಂಸಾತ್ಮಕ ರೀತಿಯಲ್ಲಿ ತುಂಬಿಸಲಾಗಿತ್ತು. ಜಾನುವಾರುಗಳನ್ನು ಫಜೀರಿನ ಗೋಶಾಲೆಗೆ ಸಾಗಿಸಲಾಗಿದೆ.
