ಯೋಗ ಗುರು ಬಾಬಾ ರಾಮದೇವ್ ಅವರಿಗೆ ಸೇರಿದ ಔಷಧ ಕಂಪೆನಿಗಳು ತಯಾರಿಸುವ 14 ಬಗೆಯ ಉತ್ಪನ್ನಗಳ ತಯಾರಿಕೆಗೆ ನೀಡಿರುವ ಪರವಾನಗಿಯನ್ನು ಉತ್ತರಾಖಂಡ ಸರಕಾರವು ಅಮಾನತಿನಲ್ಲಿ ಇರಿಸಿದೆ. ಔಷಧಗಳ ಸಾಮರ್ಥ್ಯದ ಬಗ್ಗೆ ತಪ್ಪುದಾರಿಗೆ ಎಳೆಯುವ ಜಾಹೀರಾತುಗಳನ್ನು ಮತ್ತೆ ಮತ್ತೆ ಪ್ರಕಟಿಸಿದ್ದಕ್ಕಾಗಿ ಈ ರೀತಿ ಮಾಡಲಾಗಿದೆ.
ಈ ಆದೇಶವು ರಾಮದೇವ ಅವರಿಗೆ ಆಗಿರುವ ಹಿನ್ನೆಡೆ ಎಂದು ವಿಶ್ಲೇಷಿಸಲಾಗಿದೆ. ರಾಮದೇವ ಅವರು ಈಚಿನ ದಿನಗಳಲ್ಲಿ ಸುಪ್ರೀಂಕೋರ್ಟ್ ನ ಕೋಪಕ್ಕೂ ತುತ್ತಾಗಿದ್ದಾರೆ.
ಉತ್ತರಾಖಂಡ ಸರಕಾರವು ಏಪ್ರಿಲ್ 15 ರಂದು ಈ ಅಮಾನತು ಆದೇಶ ಹೊರಡಿಸಿದೆ. ಆಸ್ತಮಾ, ಶ್ವಾಸನಾಳಗಳ ಒಳಪೊರೆಯ ಉರಿಯೂತ (ಬ್ರಾಂಕೈಟಿಸ್) ಮತ್ತು ಮಧುಮೇಹ ಔಷಧಿಗಳ ತಯಾರಿಕಾ ಪರವಾನಗಿಯನ್ನು ಅಮಾನತು ಮಾಡಲಾಗಿದೆ. ಈ ಕುರಿತು ತಕ್ಷಣಕ್ಕೆ ಪ್ರತಿಕ್ರಿಯೆ ನೀಡಲು ರಾಮದೇವ ಅವರ ವಕ್ತಾರರು ನಿರಾಕರಿಸಿದ್ದಾರೆ.
