ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಜಲಾಲಿಯ ನಗರದ ಮುಹ್ಯುದ್ದೀನ್ ಜುಮಾ ಮಸೀದಿ ಆಡಳಿತ ಸಮಿತಿಯು ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ನಿಯಮಾವಳಿ (ಬೈಲಾ) ಅಂಗೀಕರಿಸಿಲ್ಲ, ಲೆಕ್ಕ ಪರಿಶೋಧಕರಿಗೆ ಲೆಕ್ಕ ಪತ್ರ ಪ್ರಸ್ತುತಪಡಿಸಿಲ್ಲ ಹಾಗೂ ಆಡಳಿತ ಮಂಡಳಿಯನ್ನು ರಚಿಸಿ ಅದಕ್ಕೆ ರಾಜ್ಯ ವಕ್ಫ್ ಮಂಡಳಿಯಿಂದ ಅಂಗೀಕಾರ ಪಡೆಯದೆ ಸ್ವಯಂ ಘೋಷಿತ ಸಮಿತಿ ರಚಿಸಿಕೊಂಡಿರುವ ಕಾರಣಕ್ಕೆ ಆಡಳಿತ ಮಂಡಳಿಯನ್ನು ವಜಾಗೊಳಿಸಿ ರಾಜ್ಯ ವಕ್ಫ್ ಮಂಡಳಿ ಆದೇಶ ಹೊರಡಿಸಿದೆ.
ಜೂನ್ 1 ರಂದು ಮಸ್ಜಿದ್ ಗೆ ಭೇಟಿ ನೀಡಿದ ವಕ್ಫ್ ಜಿಲ್ಲಾ ಅಧಿಕಾರಿ ಅಬೂಬಕ್ಕರ್ ಅವರು ನೋಟೀಸು ಜಾರಿಗೊಳಿಸಿ ಸಮಿತಿಯನ್ನು ವಜಾಗೊಳಿಸಿ ಅಧಿಕಾರ ಪಡೆದುಕೊಂಡರು. ನೂತನ ಆಡಳಿತಾಧಿಕಾರಿಯಾಗಿ ಮಾಜಿ ಸೈನಿಕ ಮುಹಮ್ಮದ್ ರಫಿಯವರನ್ನು ನೇಮಕಗೊಳಿಸಿದೆ.
ಮಸ್ಜಿದ್ ನಲ್ಲಿ ನಿರಂತರ ಗೊಂದಲ, ಅಶಾಂತಿ ಸೃಷ್ಟಿಯಾದ ಕಾರಣ ಆಡಳಿತ ಸಮಿತಿಯ ಕೆಲವು ಸದಸ್ಯರು ಜಿಲ್ಲಾಧಿಕಾರಿಯವರಿಗೆ ದೂರನ್ನೂ ಸಲ್ಲಿಸಿದ್ದರು. ದೂರನ್ನು ಕೂಲಂಕಷವಾಗಿ ಪರಿಶೀಲಿಸಿದ ವಕ್ಫ್ ಮಂಡಳಿ ಇಲ್ಲಿನ ಆಡಳಿತವನ್ನು ನೇರ ಸುಪರ್ದಿಗೆ ಪಡೆದು, ತಮ್ಮ ವತಿಯಿಂದಲೇ ಆಡಳಿತಾಧಿಕಾರಿಯನ್ನೂ ನೇಮಿಸಿ ಕ್ರಮ ಕೈಗೊಂಡಿದೆ.
ಇನ್ನು ಮುಂದೆ ಮುಂದಿನ ಆದೇಶದವರೆಗೆ ಜಮಾಅತ್ ಎಲ್ಲಾ ಆಡಳಿತ ನಿರ್ವಹಣೆ ಆಡಳಿತಾಧಿಕಾರಿಯ ವ್ಯಾಪ್ತಿಗೆ ಬರುತ್ತದೆ. ಜಮಾಅತ್ಗೆ ವಂತಿಗೆ , ಇತರ ಧನ ಸಹಾಯ ಮಾಡುವವರು ಆಡಳಿತಾಧಿಕಾರಿಯನ್ನು ನೇರ ಭೇಟಿಯಾಗಿ ಸೂಕ್ತ ರಶೀದಿ ಪಡೆದುಕೊಳ್ಳಬಹುದು. ಅಲ್ಲದೆ ಈ ಹಿಂದೆ ಅಧ್ಯಕ್ಷರಾಗಿದ್ದ ಅವರ ಮಂಡಳಿಯು ಮೂರು ದಿನಗಳ ಒಳಗಾಗಿ ಮಸೀದಿಯ ಎಲ್ಲಾ ದಾಖಲೆಪತ್ರಗಳನ್ನು, ರಶೀದಿ ವಗೈರೆ ಕಡತಗಳನ್ನು ಕಡ್ಡಾಯವಾಗಿ ಆಡಳಿತಾಧಿಕಾರಿಗೆ ತಂದೊಪ್ಪಿಸಬೇಕು ಎಂದು ವಕ್ಫ್ ಮಂಡಳಿ ನೋಟೀಸು ಜಾರಿ ಗೊಳಿಸಿ ಆದೇಶ ನೀಡಿದೆ.
ಈ ವೇಳೆ ವಕ್ಫ್ ಜಿಲ್ಲಾ ಸಲಹಾ ಸಮಿತಿ ಉಪಾಧ್ಯಕ್ಷ ಪಕೀರಬ್ಬ ಮಾಸ್ಟರ್ ಮರೋಡಿ, ಮಾಜಿ ಸದಸ್ಯ ಬಿ.ಎಸ್ ಹಸನಬ್ಬ ಚಾರ್ಮಾಡಿ, ಹಾಗೂ ಜಮಾಅತ್ ಸದಸ್ಯರು ಉಪಸ್ಥಿತರಿದ್ದರು.
