ಅಳದಂಗಡಿ ಜಿ.ಪಂ: ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್ಸಿನಿಂದ ಜಯಾನಂದ ಪಿಲಿಕಳ ಸ್ಪರ್ಧೆ ಸಾಧ್ಯತೆ

ಕರಾವಳಿ

ಆದಿವಾಸಿ, ಶೋಷಿತರ ಪರ ಎದೆಯೊಡ್ಡಿ ನಿಲ್ಲುವ ಗಟ್ಟಿ ನಾಯಕ; ಬಲಾಡ್ಯರ ವಿರುದ್ಧ ಸೆಣೆಸಿ ನ್ಯಾಯದ ಪರ ನಿಂತ ನೈಜ ಹೋರಾಟಗಾರ

ಸ್ಥಳೀಯಾಡಳಿತ ಚುನಾವಣೆಗೆ ಸಂಬಂಧಿಸಿದಂತೆ ಈಗಾಗಲೇ ಮೀಸಲಾತಿ ಪ್ರಕಟಗೊಂಡಿದ್ದು. ಬೆಳ್ತಂಗಡಿ ತಾಲೂಕಿನ ಅಳದಂಗಡಿ ಜಿಲ್ಲಾ ಪಂಚಾಯತ್ ಕ್ಷೇತ್ರದ ಮೇಲೆ ಎಲ್ಲರ ಗಮನ ಸೆಳೆಯುವ ಸಾಧ್ಯತೆಯಿದೆ. ಇಲ್ಲಿ ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಅವಕಾಶ ನೀಡಿದ್ದು, ಆದಿವಾಸಿ ಪರ ಹೋರಾಟಗಾರ ಜಯಾನಂದ ಪಿಲಿಕಲ ರವರು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.

ಜಯಾನಂದ ಪಿಲಿಕಲ ರವರು ಕಳೆದ 15-20 ವರ್ಷಗಳಿಂದ ಮಲೆಕುಡಿಯ ಸಮುದಾಯದ ಪರವಾಗಿ ನಿರಂತರವಾಗಿ ಧ್ವನಿಯಾಗಿ ದುಡಿಯುತ್ತಿದ್ದಾರೆ. ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ರಸ್ತೆ, ವಿದ್ಯುತ್, ಸೇತುವೆ ಸೇರಿದಂತೆ ಮೂಲಭೂತ ಸೌಕರ್ಯಗಳಿಗಾಗಿ ನಿರಂತರವಾಗಿ ಹೋರಾಟದ ಮುಂಚೂಣಿಯಲ್ಲಿದ್ದಾರೆ. ಯಾರು, ಎಲ್ಲಿಯಾದರೂ ಶೋಷಣೆಗೆ, ಅನ್ಯಾಯಕ್ಕೆ ಒಳಗಾದ ವಿಷಯ ತಿಳಿದರೆ ಸಾಕು ಅಲ್ಲಿ ಜಯಾನಂದ ಪಿಲಿಕಲ ರವರ ಹಾಜರು ಗ್ಯಾರಂಟಿ. ತನ್ನ ಎದುರು ಎಷ್ಟೇ ಬಲಿಷ್ಠವನಿದ್ದರೂ ನ್ಯಾಯಕ್ಕಾಗಿ ಧ್ವನಿಯನ್ನು ಅಡಗಿಸದೆ ಎದೆಯೊಡ್ಡಿ ನಿಲ್ಲುವ ಮೂಲಕ ಜನಸಾಮಾನ್ಯರ ಪ್ರೀತಿಯನ್ನು ಗಳಿಸಿದ್ದಾರೆ.

ನೆರಿಯ ಗ್ರಾಮದ ಕಾಟಾಜೆ ಸುಂದರ ಮಲೆಕುಡಿಯ ರವರ ಕೈ ಕಡಿತ ಪ್ರಕರಣವನ್ನು ಮುಂದಿಟ್ಟುಕೊಂಡು ತಿಂಗಳುಗಟ್ಟಲೆ ತಾಲೂಕು, ಜಿಲ್ಲಾ, ರಾಜ್ಯ ಮಟ್ಟದ ಹೋರಾಟದ ನೇತೃತ್ವ ವಹಿಸಿದ್ದ ಜಯಾನಂದ ಪಿಲಿಕಲ ರವರು ಹಗಲು ರಾತ್ರಿ ಎನ್ನದೆ ದುಡಿದಿದ್ದಾರೆ. ಆರೋಪಿಗಳಿಗೆ ಪ್ರಬಲ ರಾಜಕೀಯ ಬಲವಿದ್ದರೂ ಅಂತಿಮವಾಗಿ ಹೊರರಾಜ್ಯಕ್ಕೆ ಪರಾರಿಯಾಗಿದ್ದವರು ಜೈಲು ಕಂಬಿ ಎಣಿಸುವಂತಾಯಿತು.

ವಾರಗಳ ಕಾಲ ಪ್ರತಿಭಟನೆ: ತಾಲೂಕಿನ ಮಲೆಕುಡಿಯ, ಮರಾಠಿ ನಾಯ್ಕ, ಕೊರಗ ಸಮುದಾಯದ ಮೂಲಭೂತ ಸೌಕರ್ಯಗಳು ಸೇರಿದಂತೆ ಸಮಸ್ಯೆಗಳ ಈಡೇರಿಕೆಗೆ ಒತ್ತಾಯಿಸಿ ಬೆಳ್ತಂಗಡಿ ತಾಲೂಕು ಕಚೇರಿ ಎದುರು ಒಂದು ವಾರ ನಿರಂತರವಾಗಿ ನಡೆದ ಹೋರಾಟ ಇಡೀ ಜಿಲ್ಲಾಡಳಿತವನ್ನೇ ನಡುಗಿಸಿತು. ಅಂದಿನ ಜಿಲ್ಲಾಧಿಕಾರಿಯಾಗಿದ್ದ ಎ.ಬಿ ಇಬ್ರಾಹಿಂ ರವರು ತಾಲೂಕಿನಲ್ಲಿರುವ ಎಲ್ಲಾ 36 ಸರ್ಕಾರಿ ಕಚೇರಿಗಳ ಅಧಿಕಾರಿಗಳನ್ನು ಏಕಕಾಲದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ತಾಲೂಕು ಕಚೇರಿಗೆ ಕಳುಹಿಸಿ ಸಮಸ್ಯೆಗಳನ್ನು ಪರಿಹರಿಸಲು ಸೂಚಿಸಿದರು. ಈ ಹೋರಾಟ ಕೇವಲ ತಾಲೂಕು ಮಾತ್ರವಲ್ಲ ಇಡೀ ಜಿಲ್ಲೆಯಲ್ಲೇ ಆದಿವಾಸಿ ಸಮುದಾಯ ಸತತವಾಗಿ ಒಂದು ವಾರಗಳ ಕಾಲ ನಡೆಸಿದ ಹೋರಾಟ ಎಂದು ದಾಖಲಾಗಿದೆ.

ನೆರೆಯಲ್ಲಿ ನೆಲೆ ಕಳೆದುಕೊಂಡವರ ನಡುವೆ: 2019 ರ ಆಗಸ್ಟ್ 9 ರಂದು ನಡೆದ ಭೀಕರ ಪ್ರಕೃತಿ ವಿಕೋಪ ಸಂದರ್ಭದಲ್ಲಿ ನೆರಿಯ, ಚಾರ್ಮಾಡಿ, ಮಿತ್ತಬಾಗಿಲು, ಮಲವಂತಿಗೆ ಗ್ರಾಮಗಳ ನೂರಾರು ಮಲೆಕುಡಿಯ ಸಮುದಾಯದ ಕುಟುಂಬಗಳು ನೆಲೆ ಕಳೆದುಕೊಂಡಾಗ ತಾನೇ ತನ್ನ ಸ್ವಂತ ವಾಹನದಲ್ಲಿ ಪ್ರತಿ ಪ್ರದೇಶಕ್ಕೆ ತೆರಳಿ ಅಧಿಕಾರಿಗಳಿಗೆ ಮೊದಲು ಮಾಹಿತಿ ನೀಡಿದ್ದೆ ಜಯಾನಂದ ಪಿಲಿಕಲ. ಆ ನಂತರ ಅಲ್ಲಿಗೆ ಅಧಿಕಾರಿಗಳು ಭೇಟಿ ನೀಡುತ್ತಿದ್ದರು. ಕೆಲವೊಂದು ಪ್ರದೇಶಗಳಿಗೆ ತನ್ನ ವಾಹನದಲ್ಲೇ ಅಧಿಕಾರಿಗಳನ್ನು ಕರೆದುಕೊಂಡು ಹೋಗಿದ್ದರು. ನೆಲೆ ಕಳೆದುಕೊಂಡವರಿಗೆ ಸರ್ಕಾರದ ಅನುದಾನ, ಮನೆ ಸಿಗುವಲ್ಲಿ ಅವಿರತವಾಗಿ ಶ್ರಮಿಸಿದ್ದಾರೆ.

ಕತ್ತಲೆಯ ಬಾಂಜಾರಿಗೆ ಬೆಳಕು: ನೆರಿಯ ಗ್ರಾಮದ ಬಾಂಜಾರು ಮಲೆಕುಡಿಯ ಕಾಲೋನಿಯಲ್ಲಿ 48 ಕುಟುಂಬಗಳಿಗೆ ವಿದ್ಯುತ್ ಇಲ್ಲದೆ ಕತ್ತಲೆಯಲ್ಲಿದ್ದನ್ನು ಗಮನಿಸಿ ಎರಡು ಎಸ್ಟೇಟ್ ಮಾಲೀಕರ ಜೊತೆಗೆ ಮಾತನಾಡಿ ಅನುಮತಿ ಪಡೆದು ಬಳಿಕ ಸರ್ಕಾರ ಹಾಗೂ ಸಂಬಂಧಿಸಿದ ಇಲಾಖೆಗಳ ಬೆನ್ನು ಬಿದ್ದು ಸುಮಾರು 600 ಕ್ಕೂ ಹೆಚ್ಚು ವಿದ್ಯುತ್ ಕಂಬಗಳ ಮೂಲಕ ಬಾಂಜಾರು ಮಲೆಕುಡಿಯ ಸಮುದಾಯದ ಗುಡಿಸಲಿನಲ್ಲಿ ವಿದ್ಯುತ್ ಬೆಳಕು ಬೆಳಗುವಂತೆ ಮಾಡಿದ್ದು ಕೂಡ ಜಯಾನಂದ ಪಿಲಿಕಲ. ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಅಭಿವೃದ್ಧಿ ವಿಚಾರದಲ್ಲಿ ರಾಜಿ ರಹಿತ ಹೋರಾಟಕ್ಕೆ ಇಳಿದಿರುವ ಇವರು ಈಗಾಗಲೇ ತಾಲೂಕಿನ ನಡ, ಸವಣಾಲು, ಸುಲ್ಕೇರಿಮೊಗ್ರು ಗ್ರಾಮದ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವಲ್ಲಿ ಸಫಲತೆ ಕಂಡಿದ್ದಾರೆ. ಇನ್ನೂ ನಾವೂರು, ಕುತ್ಲೂರು, ಸವಣಾಲು ಗ್ರಾಮದ ಹಿತ್ತಿಲಪೇಲ, ನಾವರ ಮತ್ತು ನಾರಾವಿ ಗ್ರಾಮದ ವಿದ್ಯುತ್ ಸಂಪರ್ಕಕ್ಕಾಗಿ ಶ್ರಮಿಸುತ್ತಿದ್ದು ಕೆಲವೊಂದು ಅನುಮತಿ ದೊರತ್ತಿದ್ದು, ಕೇಂದ್ರ ಸರ್ಕಾರದ ಅನುಮತಿ ದೊರೆತರೆ ಇಡೀ ತಾಲೂಕು ವಿದ್ಯುತ್ ಸಂಪರ್ಕ ಹೊಂದಿದಂತಾಗುತ್ತದೆ. ರಸ್ತೆ, ಸೇತುವೆಗಾಗಿಯೂ ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ.

ಈಗಾಗಲೇ ಮಲೆಕುಡಿಯ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿಯಾಗಿ, ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿ ಜೊತೆಗೆ ಕಾಂಗ್ರೆಸ್ ಪರಿಶಿಷ್ಟ ಪಂಗಡ ಘಟಕದ ಅಧ್ಯಕ್ಷರಾಗಿ ಜೊತೆಗೆ ಕರ್ನಾಟಕ ರಾಜ್ಯ ಸರ್ಕಾರದ ಅಲೆಮಾರಿ ಅಭಿವೃದ್ಧಿ ನಿಗಮದ ಜಿಲ್ಲಾ ಸಮಿತಿ ಸದಸ್ಯರಾಗಿ ದುಡಿಯುತ್ತಿದ್ದಾರೆ. ಅತ್ಯಂತ ಸೌಮ್ಯ ಸ್ವಭಾವದ ಮತ್ತು ಹೋರಾಟದ ವಿಚಾರ ಬಂದರೆ ನೈಜ ಹೋರಾಟಗಾರನಂತೆ ಬದಲಾಗುವ ಜಯಾನಂದ ಪಿಲಿಕಲ ಜನರನ್ನು ಬಹುಬೇಗನೆ ಅಯಸ್ಕಾಂತದಂತೆ ಸೆಳೆಯುತ್ತಾರೆ.

ಅಂತೂ ಬೆಳ್ತಂಗಡಿ ತಾಲೂಕಿನಲ್ಲಿ ಅದೂ ಮಲೆಕುಡಿಯ ಸಮುದಾಯದ ಯುವಜನರ ಕಣ್ಮನಿಯಾಗಿ ಮಿಂಚುತ್ತಿರುವ ಜಯಾನಂದ ಪಿಲಿಕಲ ರವರು ಮುಂದಿನ ಅಳದಂಗಡಿ ಜಿಲ್ಲಾ ಪಂಚಾಯತ್ ಕ್ಷೇತ್ರದ ಚುನಾವಣೆಗೆ ಸಮರ್ಥ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದಾರೆ. ಈಗಾಗಲೇ ಸದ್ದಿಲ್ಲದೆ ಜನರ ನಡುವೆ ತನ್ನ ಪ್ರಭಾವವನ್ನು ಬೀರುತ್ತಿರುವ ಜಯಾನಂದ ಪಿಲಿಕಲ ರವರ ಆಯ್ಕೆ ಆದಿವಾಸಿ ಸಮುದಾಯಕ್ಕೆ ಹೊಸ ಶಕ್ತಿಯನ್ನು ನೀಡಲಿದೆ.