ನೂತನವಾಗಿ ಆಯ್ಕೆಯಾದ ಲೋಕಸಭಾ ಸದಸ್ಯರ ಪೈಕಿ 251 ಮಂದಿ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಾಗಿವೆ

ರಾಷ್ಟ್ರೀಯ

ಇವರಲ್ಲಿ 27 ಮಂದಿ ಶಿಕ್ಷೆಗೆ ಒಳಗಾದರು ಸೇರಿದ್ದಾರೆ

ನೂತನವಾಗಿ ಆಯ್ಕೆಯಾದ ಲೋಕಸಭಾ ಸದಸ್ಯರ ಪೈಕಿ 251 ಮಂದಿ ವಿರುದ್ದ ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗಿವೆ. ಅವರಲ್ಲಿ 27 ಮಂದಿ ಶಿಕ್ಷೆಗೆ ಒಳಗಾದರು ಸೇರಿದ್ದಾರೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ವರದಿ ಮಾಡಿದೆ. 2019 ರಲ್ಲಿ 233 (43%), 2014 ರಲ್ಲಿ 185 (34%), 2009 ರಲ್ಲಿ 162 (30%) ಮತ್ತು 2004 ರಲ್ಲಿ 125 (23%) ಸಂಸದರ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು.

ಈ ಬಾರಿಯ ಚುನಾವಣೆಯಲ್ಲಿ ಗೆದ್ದ ‌251 ಅಭ್ಯರ್ಥಿಗಳ ಪೈಕಿ 170 (ಶೇಕಡಾ 31) ಮಂದಿ ಅತ್ಯಾಚಾರ, ಕೊಲೆ, ಕೊಲೆಯತ್ನ, ಅಪಹರಣ ಮತ್ತು ಮಹಿಳೆಯರ ವಿರುದ್ಧದ ಅಪರಾಧಗಳು ಸೇರಿದಂತೆ ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.

105 ನೂತನ ಸಂಸದರ ವಿದ್ಯಾರ್ಹತೆ: 5 ರಿಂದ 12 ನೇ ತರಗತಿ ಮಾತ್ರ

ಲೋಕಸಮರದಲ್ಲಿ ವಿಜೇತರಾಗಿರುವವರ ಪೈಕಿ 105 ಅಭ್ಯರ್ಥಿಗಳ (ಶೇಕಡಾ 19 ರಷ್ಟು) ಶೈಕ್ಷಣಿಕ ಅರ್ಹತೆ 5 ರಿಂದ 12 ನೇ ತರಗತಿ ಇದೆ. ಜತೆಗೆ, 420 ಅಭ್ಯರ್ಥಿಗಳ (ಶೇಕಡಾ 77 ರಷ್ಟು) ಶೈಕ್ಷಣಿಕ ಅರ್ಹತೆ ಪದವಿ ಅಥವಾ ಅದಕ್ಕಿಂತ ಹೆಚ್ಚಿನದ್ದಾಗಿದೆ ಎಂದು ಅಫಿಡವಿಟ್ ನಲ್ಲಿ ಘೋಷಿಸಿಕೊಂಡಿದ್ದಾರೆ ಎಂದು ಎಡಿಆರ್ ಸಂಸ್ಥೆಯ ವರದಿ ತಿಳಿಸಿದೆ. ವಿಜೇತ ಅಭ್ಯರ್ಥಿಗಳ ಪೈಕಿ 17 ಅಭ್ಯರ್ಥಿಗಳು ಡಿಪ್ಲೊಮಾ ಪದವೀಧರರಾಗಿದ್ದು, 5 ನೇ ತರಗತಿಯವರೆಗೆ ಮಾತ್ರವೇ ಶಿಕ್ಷಣ ಪಡೆದಿರುವ ಇಬ್ಬರು ಅಭ್ಯರ್ಥಿಗಳಿದ್ದಾರೆ. ನಾಲ್ವರು 8 ನೇ ತರಗತಿಯವರೆಗೆ ಓದಿರುವುದಾಗಿ ಘೋಷಿಸಿದ್ದಾರೆ. 34 ಅಭ್ಯರ್ಥಿಗಳು ತಾವು 10 ನೇ ತರಗತಿಯವರೆಗೆ ಮತ್ತು 65 ಅಭ್ಯರ್ಥಿಗಳು 12 ನೇ ತರಗತಿಯವರೆಗೆ ಓದಿರುವುದಾಗಿ ಹೇಳಿದ್ದಾರೆ. ಒಬ್ಬ ಅಭ್ಯರ್ಥಿ ಅಕ್ಷರಸ್ಥ ಎಂದಷ್ಟೇ ಘೋಷಿಸಿರುವುದಾಗಿ ವರದಿ ತಿಳಿಸಿದೆ.

ಅತ್ಯಂತ ಬಡ ಸಂಸದ

ಲೋಕಸಭಾ ಚುನಾವಣೆಯಲ್ಲಿ ಬಹಳಷ್ಟು ಸಂಸದರು ಬಿಲಿಯನೇರ್ ಗಳು ಆಯ್ಕೆಯಾಗಿದ್ದು, ಅವುಗಳ ಪೈಕಿ ಕೆಲವೇ ಕೆಲವರು ಬಡ ಸಂಸದರಾಗಿದ್ದಾರೆ. ಪಶ್ಚಿಮ ಬಂಗಾಳದ ಪುರುಲಿಯಾದಿಂದ ಆಯ್ಕೆಯಾಗಿರುವ ಜ್ಯೋತಿಮರ್ಯ್ ಸಿಂಗ್ ಮಹತೋ ಬಡ ಸಂಸದರಾಗಿದ್ದಾರೆ. ಮಹತೋ ಆಸ್ತಿ 5 ಲಕ್ಷ ರೂಪಾಯಿ ಗಳಾದರೆ, ಟಿಎಂಸಿ ಯ ಅರಂಭಾಗ್ ಸಂಸದೆ ಮಿಥಾಲಿ ಬಾಗ್ ಆಸ್ತಿ ಮೌಲ್ಯ 7 ಲಕ್ಷ ರೂಪಾಯಿಗಳಾಗಿದೆ. ಉತ್ತರ ಪ್ರದೇಶದ ಮಚಲಿ ಶಹರ್ ನಿಂದ ಆಯ್ಕೆಯಾದ ಸಮಾಜವಾದಿ ಪಕ್ಷದ ಪ್ರಿಯಾ ಸರೋಜ್ ಆಸ್ತಿ ಕೇವಲ 11 ಲಕ್ಷ ರೂಪಾಯಿ ಗಳಾಗಿದೆ. ಟಿಡಿಪಿಯ ಚಂದ್ರಶೇಖರ್ ಪೆಮ್ಮಸಾನಿ ಅಧಿಕ ಸಾಲ ಹೊಂದಿದ ಸಂಸದರಾಗಿದ್ದಾರೆ. ಗುಂಟೂರು ಸಂಸದರ ಸಾಲದ ಮೊತ್ತ 1,038 ಕೋಟಿ ರೂಪಾಯಿಗಳಿಷ್ಟಿದೆ.