ಪಡಿಮಾರ್ನಾಡ್ ಎಂಬಲ್ಲಿ ರಸ್ತೆ ಮಾರ್ಜಿನ್ ಅತಿಕ್ರಮಿಸಿ ಅನಧಿಕೃತವಾಗಿ ವಿಸ್ತರಿಸಿದ ಕಟ್ಟಡವನ್ನು ಹೈಕೋರ್ಟ್ ಆದೇಶದಂತೆ ಮಂಗಳವಾರ ಕಟ್ಟಡ ತೆರವುಗೊಳಿಸಲಾಗಿದೆ. ಪಡುಮಾರ್ನಾಡು ಗ್ರಾಮ ಪಂಚಾಯತಿನ ಮುಂಭಾಗ ಸೂರಜ್ ಜೈನ್ ಮತ್ತು ಇತರರು ರಸ್ತೆ ಮಾರ್ಜಿನನ್ನು ಅತಿಕ್ರಮಿಸಿ ಕಟ್ಟಡವನ್ನು ವಿಸ್ತರಿಸಿದ್ದು, ಪಂಚಾಯತ್ನಿಂದ ಅನುಮತಿ ಪಡೆಯದೆ ಕಟ್ಟಡ ವಿಸ್ತರಣೆ ಹಾಗೂ ಸರಕಾರಿ ಭೂಮಿಯನ್ನು ಅತಿಕ್ರಮಿಸಿಕೊಂಡಿದ್ದಾರೆಂದು ಆರೋಪಿಸಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು 2024ರಲ್ಲಿ ಅಭಿನಂದನ್ ಬಲ್ಲಾಳ್, ಮಹಮ್ಮದ್ ಅಸ್ಲಂ ಮತ್ತು ಹರೀಶ್ ಹೆಗ್ಡೆ ಎಂಬವರು ಪಡುಮಾರ್ನಾಡು ಗ್ರಾಮ ಪಂಚಾಯತ್, ದ.ಕ ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರು.
ಆದರೆ ಕಟ್ಟಡ ತೆರವಿಗೆ ಆಗಿನ ಗ್ರಾಮ ಪಂಚಾಯತ್ ಆಡಳಿತ ಕ್ರಮ ಕೈಗೊಳ್ಳಲು ನಿರಾಸಕ್ತಿ ತೋರಿಸಿತ್ತು ಎನ್ನಲಾಗಿದೆ. ಇದರ ವಿರುದ್ಧ ದೂರುದಾರರು ಹೈಕೋರ್ಟ್ ಮೆಟ್ಟಲೇರಿದ್ದರು. ದೂರಿನಲ್ಲಿ ಜಿಲ್ಲಾಧಿಕಾರಿ, ಜಿಪಂ ಕಾರ್ಯನಿರ್ವಾಹಣಾಧಿಕಾರಿ ಮತ್ತು ಪಡುಮಾರ್ನಾಡು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು ಪ್ರತಿವಾದಿಯನ್ನಾಗಿಸಿದ್ದರು.
ಕರ್ನಾಟಕ ಹೈಕೋರ್ಟ್ನಲ್ಲಿ ವಿಚಾರಣೆ ನಡೆದು ಅತಿಕ್ರಮಿತ ಕಟ್ಟಡ ಹಾಗೂ ಸ್ವಾಧೀನಪಡಿಸಿಕೊಂಡಿರುವ ಸರಕಾರಿ ಜಮೀನನನ್ನು ತೆರವುಗೊಳಿಸುವಂತೆ ಸಂಬಂಧಪಟ್ಟ ಇಲಾಖೆಗೆ ಹೈಕೋರ್ಟ್ ಕಳೆದ 2026ರ ಎಪ್ರಿಲ್ನಲ್ಲಿ ಆದೇಶ ನೀಡಿತ್ತು. ಈ ಆದೇಶದ ವಿರುದ್ಧ ಸೂರಜ್ ಜೈನ್ ಪರ ವಕೀಲರು ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದು, ಮೇಲ್ಮನವಿ ತಿರಸ್ಕ್ರತಗೊಂಡಿತ್ತು. ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಪಡುಮಾರ್ನಾಡು ಪಂಚಾಯತ್ ಅಧಿಕಾರಿಗಳು ಮಂಗಳವಾರ ಅತಿಕ್ರಮಣ ತೆರವಿಗೆ ಕ್ರಮ ಕೈಗೊಂಡಿದ್ದಾರೆ.
