ಉತ್ತಮ ಉದ್ಯೋಗವಿದ್ದು, ಆರ್ಥಿಕ ಸಬಲತೆ ಹೊಂದಿರುವ ಮಹಿಳೆಗೆ ಪತಿಯಿಂದ ಜೀವನಾಂಶ ಪಡೆಯುವ ಹಕ್ಕಿಲ್ಲ: ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ

ರಾಜ್ಯ

ಉತ್ತಮ ವಿದ್ಯಾಭ್ಯಾಸ ಹೊಂದಿ, ಗೌರವಯುತವಾಗಿ ಸ್ವಾವಲಂಬಿ ಬದುಕು ಸಾಗಿಸುವಷ್ಟು ಆರ್ಥಿಕ ಸಬಲತೆ ಹೊಂದಿರುವ ಮಹಿಳೆಗೆ ಪತಿಯಿಂದ ಜೀವನಾಂಶ ಪಡೆಯುವ ಹಕ್ಕಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಪ್ರತ್ಯೇಕವಾಗಿ ವಾಸಿಸುತ್ತಿರುವ ಪತ್ನಿಗೆ ತಿಂಗಳಿಗೆ ರೂ. 20 ಸಾವಿರ ಜೀವನಾಂಶ ಪಾವತಿಸುವಂತೆ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಾ. ಚಿಲ್ಲಾಕೂರು ಸುಮಲತಾ ಅವರ ಏಕಸದಸ್ಯ ಪೀಠವು, ಜೀವನಾಂಶ ಕೋರಿಕೆಯ ಅರ್ಜಿಯನ್ನು ತಿರಸ್ಕರಿಸಲು ಆರ್ಥಿಕ ಸ್ವಾವಲಂಬನೆ ಮತ್ತು ಉದ್ಯೋಗ ಬಲವಾದ ಆಧಾರಗಳಾಗಿವೆ ಎಂದು ಸ್ಪಷ್ಟಪಡಿಸಿತು.

ತನ್ನನ್ನು ತಾನು ಪೋಷಿಸಿಕೊಳ್ಳಲು ಯಾವುದೇ ಆದಾಯದ ಮೂಲವಿಲ್ಲದ ಅಸಹಾಯಕ ಸ್ಥಿತಿಯಲ್ಲಿ ಮಾತ್ರ ಮಹಿಳೆಗೆ ಜೀವನಾಂಶ ಪಡೆಯುವ ಹಕ್ಕಿರುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಪ್ರತಿಯೊಂದು ಸಂದರ್ಭದಲ್ಲೂ ಪತಿಯೇ ಪತ್ನಿಯನ್ನು ಪೋಷಿಸಬೇಕು ಎಂದು ಕಾನೂನು ಕಡ್ಡಾಯಗೊಳಿಸಿಲ್ಲ ಎಂದು ಹೇಳಿದ ಪೀಠ, “ಮಹಿಳೆಯು ಉನ್ನತ ಶಿಕ್ಷಣ ಪಡೆದು, ಉತ್ತಮ ಹುದ್ದೆಯಲ್ಲಿದ್ದು, ಗೌರವಯುತ ಜೀವನಕ್ಕೆ ಬೇಕಾದಷ್ಟು ಆದಾಯ ಗಳಿಸುತ್ತಿರುವಾಗ ಆಕೆಯನ್ನು ಯಾವುದೇ ಕಾರಣಕ್ಕೂ ‘ಪತಿಯ ಮೇಲೆ ಅವಲಂಬಿತಳು’ ಎಂದು ಪರಿಗಣಿಸಲಾಗದು” ಎಂದು ಆದೇಶದಲ್ಲಿ ಸ್ಪಷ್ಟಪಡಿಸಿದೆ.

ಕೌಟುಂಬಿಕ ನ್ಯಾಯಾಲಯವು ತಿಂಗಳಿಗೆ 20 ಸಾವಿರ ರೂಪಾಯಿ ಜೀವನಾಂಶ ನೀಡುವಂತೆ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಪತಿ ಹೈಕೋರ್ಟ್ ಮೊರೆ ಹೋಗಿದ್ದರು. ವಿಚಾರಣೆ ವೇಳೆ ಪತಿಯ ಪರ ವಕೀಲರು, “ಪತ್ನಿಯು ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿ.ಇ ಪದವಿ ಪಡೆದಿದ್ದು, ಖಾಸಗಿ ಕಂಪನಿಯೊಂದರಲ್ಲಿ ವಾರ್ಷಿಕ 10 ಲಕ್ಷ ರೂ. ಪ್ಯಾಕೇಜ್‌ನಲ್ಲಿ ಉದ್ಯೋಗದಲ್ಲಿದ್ದಾರೆ. ತಿಂಗಳಿಗೆ ಸುಮಾರು 54,700 ರೂ. ಸಂಬಳ ಪಡೆಯುತ್ತಿದ್ದು, ಸ್ವಾವಲಂಬಿ ಬದುಕಿಗೆ ಇದು ಸಾಕಾಗುತ್ತದೆ. ಇನ್ನೊಂದೆಡೆ, ಪತಿ ತಿಂಗಳಿಗೆ 2 ಲಕ್ಷ ರೂ. ಗಳಿಸುತ್ತಿದ್ದರೂ ತೀವ್ರ ಮಧುಮೇಹದಿಂದ ಬಳಲುತ್ತಿದ್ದಾರೆ. ದಿನಕ್ಕೆ ನಾಲ್ಕು ಬಾರಿ ಇನ್ಸುಲಿನ್ ಪಡೆಯಬೇಕಿದ್ದು, ಅನಾರೋಗ್ಯ ಪೀಡಿತ ವೃದ್ಧ ಪೋಷಕರು ಹಾಗೂ ತಮ್ಮ ಚಿಕಿತ್ಸೆಗಾಗಿಯೇ ತಿಂಗಳಿಗೆ 70 ಸಾವಿರಕ್ಕೂ ಹೆಚ್ಚು ಖರ್ಚಾಗುತ್ತಿದೆ. ಜೊತೆಗೆ ಕಾನೂನು ಹೋರಾಟದ ವೆಚ್ಚವನ್ನೂ ಭರಿಸಬೇಕಿದೆ” ಎಂದು ನ್ಯಾಯಾಲಯದ ಗಮನಕ್ಕೆ ತಂದಿದ್ದರು.

ವಿಚಾರಣೆ ವೇಳೆ ಪತ್ನಿಯು, ತನ್ನ ಸಂಬಳದಲ್ಲಿ ಪ್ರತಿ ತಿಂಗಳು ಸುಮಾರು 35 ಸಾವಿರ ರೂಪಾಯಿಯನ್ನು ಪೋಷಕರ ನಿರ್ವಹಣೆಗೆ ನೀಡುತ್ತಿರುವುದಾಗಿ ತಿಳಿಸಿದ್ದರು. ಈ ಅಂಶವನ್ನು ಪ್ರಮುಖವಾಗಿ ಪರಿಗಣಿಸಿದ ನ್ಯಾಯಾಲಯ, “ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (BNSS) ಸೆಕ್ಷನ್ 144 ರ ಪ್ರಕಾರ, ಜೀವನಾಂಶ ಕೋರುವವರು ಮೊದಲು ತಾವು ಸ್ವತಃ ಜೀವನ ನಿರ್ವಹಣೆ ಮಾಡಲು ಅಶಕ್ತರೆಂದು ಸಾಬೀತುಪಡಿಸಬೇಕು. ತನ್ನ ಸಂಪಾದನೆಯಿಂದ ತಾನೂ ಬದುಕಿ, ಪೋಷಕರನ್ನೂ ಸಲಹುವ ಆರ್ಥಿಕ ಶಕ್ತಿ ಹೊಂದಿರುವ ಮಹಿಳೆ ಪತಿಯನ್ನೇ ಅವಲಂಬಿಸಿದ್ದಾಳೆ ಎಂಬ ವಾದ ಒಪ್ಪಲು ಸಾಧ್ಯವಿಲ್ಲ” ಎಂದು ತೀರ್ಮಾನಿಸಿ, ಜೀವನಾಂಶ ಆದೇಶವನ್ನು ವಜಾಗೊಳಿಸಿತು.