ಬೆಂಗಳೂರು: ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದಾಗಲೇ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆ (BSWML) ಟೆಂಡರ್ ಪ್ರಕ್ರಿಯೆ ಮುಂದುವರಿಸಿ ಕಾಮಗಾರಿಗಳಿಗೆ ಕಾರ್ಯಾದೇಶ ನೀಡಿರುವ ಆರೋಪವನ್ನು ಸಿಟಿಜನ್ ರೈಟ್ಸ್ ಫೌಂಡೇಶನ್ (CRF) ಬಹಿರಂಗಪಡಿಸಿದೆ. ಈ ಕುರಿತು ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗಿದ್ದು, ಸ್ವತಂತ್ರ ತನಿಖೆಗೆ ಆಗ್ರಹಿಸಲಾಗಿದೆ.
ಕರ್ನಾಟಕ ವಿಧಾನ ಪರಿಷತ್ತಿನ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರಗಳ ಚುನಾವಣೆ ಸಂದರ್ಭದಲ್ಲಿ ಜಾರಿಯಲ್ಲಿದ್ದ ಮಾದರಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿ ಟೆಂಡರ್ ಪ್ರಕ್ರಿಯೆಗಳನ್ನು ಮುಂದುವರಿಸಲಾಗಿದೆ ಎಂಬುದು ಫೌಂಡೇಶನ್ನ ಪ್ರಮುಖ ಆರೋಪವಾಗಿದೆ.
CRF ಅಧ್ಯಕ್ಷ ಕೆ.ಎ. ಪಾಲ್ ಅವರು ನವೆಂಬರ್ 6ರಂದು ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿ, ಪ್ರಕರಣದ ಕುರಿತು ಉನ್ನತ ಮಟ್ಟದ ಸ್ವತಂತ್ರ ಹಾಗೂ ಕಾಲಮಿತಿಯ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.

2026ರ ಸೆಪ್ಟೆಂಬರ್ 22ರಂದು ನೀತಿ ಸಂಹಿತೆ ಜಾರಿಯಾದ ಬಳಿಕವೂ ಟೆಂಡರ್ ಪ್ರಕ್ರಿಯೆಗಳು ನಡೆದಿವೆ. 2025ರ ಜುಲೈ 30ರಂದು ಪ್ರಕಟಿಸಿದ್ದ ಟೆಂಡರ್ಗೆ ಸಂಬಂಧಿಸಿದ ಐದು ಪ್ಯಾಕೇಜ್ಗಳ ಕಾಮಗಾರಿಗಳಿಗೆ ಸೆಪ್ಟೆಂಬರ್ 23ರಂದು ಕಾರ್ಯಾದೇಶ ನೀಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಅಲ್ಲದೆ, ಸೆಪ್ಟೆಂಬರ್ 19ರಂದು ಆರು ಪ್ಯಾಕೇಜ್ಗಳಿಗೆ ಟೆಂಡರ್ ಪ್ರಕಟಿಸಿ, ನೀತಿ ಸಂಹಿತೆ ಅವಧಿಯಲ್ಲಿ ತಾಂತ್ರಿಕ ಅರ್ಹತೆ ಪರಿಶೀಲನೆ ಹಾಗೂ ಆರ್ಥಿಕ ಬಿಡ್ಗಳನ್ನು ತೆರೆಯಲಾಗಿದೆ ಎಂದು ಆರೋಪಿಸಲಾಗಿದೆ. ಸೆಪ್ಟೆಂಬರ್ 23ರಂದು ನಾಲ್ಕು ಮತ್ತು ಅಕ್ಟೋಬರ್ 8ರಂದು ಮತ್ತೆ ಮೂರು ಪ್ಯಾಕೇಜ್ಗಳಿಗೆ ಹೊಸ ಟೆಂಡರ್ ಅಧಿಸೂಚನೆ ಹೊರಡಿಸಿರುವುದನ್ನೂ ಪ್ರಶ್ನಿಸಲಾಗಿದೆ.

BSWML ಅಧಿಕಾರಿಗಳಾದ ಉಪ ಪ್ರಧಾನ ವ್ಯವಸ್ಥಾಪಕ ಚಂದ್ರಶೇಖರ್, ಮುಖ್ಯ ಪ್ರಧಾನ ವ್ಯವಸ್ಥಾಪಕ ಎಸ್.ವಿ. ರಾಜೇಶ್ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕರೀಗೌಡ ಅವರ ಪಾತ್ರವನ್ನು ಪರಿಶೀಲಿಸುವಂತೆಯೂ CRF ಮನವಿ ಮಾಡಿದೆ.
ಟೆಂಡರ್ ಪ್ರಕ್ರಿಯೆಯಲ್ಲಿ ಪಕ್ಷಪಾತ, ಬಿಡ್ಗಳ ಹೊಂದಾಣಿಕೆ, ಹಿತಾಸಕ್ತಿ ಸಂಘರ್ಷ ಹಾಗೂ ಅಧಿಕಾರ ದುರುಪಯೋಗ ನಡೆದಿದೆಯೇ ಎಂಬುದನ್ನು ತನಿಖೆ ಮಾಡಬೇಕು. ಸಂಬಂಧಿತ ದಾಖಲೆಗಳನ್ನು ಸಂರಕ್ಷಿಸಿ, ನಿಯಮ ಉಲ್ಲಂಘನೆ ಸಾಬೀತಾದರೆ ಟೆಂಡರ್ ರದ್ದುಗೊಳಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಫೌಂಡೇಶನ್ ಒತ್ತಾಯಿಸಿದೆ.
