ಕಾಂಗ್ರೆಸ್ ಕಾರ್ಯಕರ್ತರಲ್ಲಿ ಗರಿಗೆದರಿದ ನಿರೀಕ್ಷೆ..
ಕಾಂಗ್ರೆಸ್ ಕಾರ್ಯಕರ್ತರಿಗೆ ಅಧಿಕಾರ ನೀಡುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿ ಮತ್ತೊಂದು ಮಹತ್ವದ ಸುಳಿವು ನೀಡಿದ್ದಾರೆ. ನಿಗಮ-ಮಂಡಳಿಗಳಿಗೆ ಸದಸ್ಯರ ನೇಮಕಾತಿಯ ಮೊದಲ ಪಟ್ಟಿ ಪ್ರಕಟಿಸಿರುವ ಬೆನ್ನಲ್ಲೇ, ಇದೀಗ ಎರಡನೇ ಪಟ್ಟಿಯನ್ನೂ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದ್ದಾರೆ.
ಎರಡು-ಮೂರು ದಿನಗಳಲ್ಲಿ 2ನೇ ಪಟ್ಟಿ ಪ್ರಕಟವಾಗಲಿದ್ದು, ಬಾಕಿ ಉಳಿದಿರುವ ನಿಗಮ-ಮಂಡಳಿಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳನ್ನು ಕಾಂಗ್ರೆಸ್ ಕಾರ್ಯಕರ್ತರಿಗೆ ನೀಡಲಾಗುವುದು ಎಂದು ತಿಳಿಸಿದ್ದಾರೆ. ಈ ಮೂಲಕ ಪಕ್ಷದ ಕಾರ್ಯಕರ್ತರಲ್ಲಿ ಅಧಿಕಾರದ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.
ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ಒಂದೆರಡು ದಿನಗಳಲ್ಲಿ ಎರಡನೇ ನೇಮಕಾತಿ ಪಟ್ಟಿ ಬಿಡುಗಡೆಯಾಗಲಿದೆ ಎಂದು ಸುಳಿವು ನೀಡಿದ್ದಾರೆ. ಮೊದಲ ಪಟ್ಟಿಯಲ್ಲಿ ಅವಕಾಶ ಸಿಗದಿರುವ ಕಾರ್ಯಕರ್ತರಿಗೆ ಮುಂದಿನ ಪಟ್ಟಿಯಲ್ಲಿ ಆದ್ಯತೆ ನೀಡುವ ಸಾಧ್ಯತೆಯಿದೆ.
ಈ ಹಿಂದೆ ನಿಗಮ-ಮಂಡಳಿಗಳ ಅಧ್ಯಕ್ಷರಿಗೆ ರಾಜೀನಾಮೆ ನೀಡುವಂತೆ ಸೂಚಿಸಿದ್ದರು. ಹೀಗಾಗಿ ಹೊಸದಾಗಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರ ನೇಮಕಾತಿ ಪ್ರಕ್ರಿಯೆ ಹಲವು ತಿಂಗಳುಗಳಿಂದ ಬಾಕಿ ಉಳಿದಿತ್ತು. ಇದೀಗ ನೇಮಕಾತಿ ಪ್ರಕ್ರಿಯೆಗೆ ವೇಗ ಸಿಕ್ಕಿದ್ದು, ಕಳೆದ ಬುಧವಾರ 428 ಮಂದಿಯ ಸದಸ್ಯತ್ವ ನೇಮಕಾತಿ ಪಟ್ಟಿ ಪ್ರಕಟಿಸಲಾಗಿದೆ. ಇದರ ಬೆನ್ನಲ್ಲೇ ಎರಡನೇ ಪಟ್ಟಿಯ ತಯಾರಿ ನಡೆಯುತ್ತಿದೆ.
