ಮಂಗಳೂರಿನಲ್ಲಿ ಕಿದ್ವಾಯಿ, ಜಯದೇವ, ನಿಮ್ಹಾನ್ಸ್ ಆಸ್ಪತ್ರೆಗಳ ಘಟಕ ಸ್ಥಾಪಿಸಲು ಒತ್ತಾಯಿಸಿ ಸಿಪಿಐಎಂ ನಿಂದ ತೊಕ್ಕೊಟ್ಟಿನಲ್ಲಿ ಮುಸ್ಸಂಜೆ ಧರಣಿ. ಸರಕಾರಿ ಆಸ್ಪತ್ರೆಗಳನ್ನು ಬಲಪಡಿಸಬೇಕು, ಕಿದ್ವಾಯಿ, ಜಯದೇವ, ನಿಮ್ಹಾನ್ಸ್ ಆಸ್ಪತ್ರೆಗಳ ಘಟಕಗಳನ್ನು ಮಂಗಳೂರಿನಲ್ಲಿ ಸ್ಥಾಪಿಸಬೇಕು, ಉಳ್ಳಾಲ ತಾಲೂಕಿಗೆ ನೂರು ಹಾಸಿಗೆಗಳ ತಾಲೂಕು ಆಸ್ಪತ್ರೆ ಮಂಜೂರು ಮಾಡಬೇಕು ಎಂದು ಒತ್ತಾಯಿಸಿ ಸಿಪಿಐಎಂ ಉಳ್ಳಾಲ ತಾಲೂಕು ಸಮಿತಿ ವತಿಯಿಂದ ತೊಕ್ಕೊಟ್ಟು ಬಸ್ಸು ನಿಲ್ದಾಣದಲ್ಲಿ ಸಂಜೆ 4.00 ರಿಂದ ರಾತ್ರಿ 10.00 ಗಂಟೆಯವರಗೆ ಮುಸ್ಸಂಜೆ ಧರಣಿ ನಡೆಯಿತು.
ಧರಣಿಯನ್ನು ಸಿಪಿಐಎಂ ದ.ಕ. ಜಿಲ್ಲಾ ಕಾರ್ಯದರ್ಶಿ ಮನೀರ್ ಕಾಟಿಪಳ್ಳ ಉದ್ಘಾಟಿಸಿದರು. ಅವರು ಮಾತನಾಡುತ್ತಾ ದಕ್ಷಿಣ ಕನ್ನಡ ಜಿಲ್ಲೆಯ ಆರೋಗ್ಯ ಕ್ಷೇತ್ರ ಖಾಸಗಿ ಮೆಡಿಕಲ್ ಕಾಲೇಜುಗಳು ಹಾಗು ಕಾರ್ಪೊರೇಟ್ ಆಸ್ಪತ್ರೆಗಳ ಹಿಡಿತದಲ್ಲಿ ಸಿಲುಕಿ ನಲುಗಿ ಹೋಗಿದೆ. ಜಿಲ್ಲೆಯ ರಾಜಕಾರಣ, ಪ್ರಮುಖ ರಾಜಕೀಯ ಪಕ್ಷಗಳು ಖಾಸಗಿ ಮೆಡಿಕಲ್ ಲಾಬಿಗಳ ಮುಂದೆ ಮಂಡಿಯೂರಿವೆ. ಸರಕಾರಿ ಆರೋಗ್ಯ ಕೇಂದ್ರಗಳು, ಆಸ್ಪತ್ರೆಗಳನ್ನು ವೈದ್ಯರು, ಔಷಧಿ, ಮೂಲಭೂತ ಸೌಲಭ್ಯಗಳನ್ನು ಒದಗಿಸದೆ ಉದ್ದೇಶ ಪೂರ್ವಕವಾಗಿ ದುರ್ಬಲಗೊಳಿಸಲಾಗುತ್ತಿದೆ. ಪಿಪಿಪಿ ಮಾದರಿಯಲ್ಲಿ ಖಾಸಗಿಯವರಿಗೆ ಮಾರಾಟ ಮಾಡಲಾಗುತ್ತಿದೆ. ಜನರ ಪರವಾಗಿರಬೇಕಾದ ಆರೋಗ್ಯ ಸಚಿವ ಯು.ಟಿ ಖಾದರ್ ಅವರು ಈ ಎಲ್ಲಾ ಹುನ್ನಾರಗಳ ಹಿಂದೆ ಇರುವುದು, ಖಾಸಗಿ ಮೆಡಿಕಲ್ ಲಾಭಿಗಳ ಪರವಾಗಿ ಬ್ಯಾಟು ಬೀಸುತ್ತಿರುವುದು ವಿಷಾದನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ದ.ಕ. ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಕಡ್ಡಾಯವಾಗಿ ಇರಬೇಕಾದ ತಾಲೂಕು ಆಸ್ಪತ್ರೆಗಳೆ ಇಲ್ಲ, ಆರೋಗ್ಯ ಸಚಿವ ಖಾದರ್ ಅವರ ಕ್ಷೇತ್ರ ಉಳ್ಳಾಲ ತಾಲೂಕಿನಲ್ಲಿ ತಾಲೂಕು ಮಟ್ಟದ ಆಸ್ಪತ್ರೆ ಇಲ್ಲದಿರುವುದು ಜಿಲ್ಲೆಯ ಆರೋಗ್ಯ ಕ್ಷೇತ್ರದ ದುಸ್ಥಿತಿಗೆ ಕನ್ನಡಿ ಹಿಡಿಯುತ್ತದೆ ಎಂದು ಮುನೀರ್ ಕಾಟಿಪಳ್ಳ ಆರೋಪಿಸಿದರು. ಆರೋಗ್ಯ ಕ್ಷೇತ್ರದಲ್ಲಿ ಜನರ ಬೇಡಿಕೆ ಈಡೇರಿಸದಿದ್ದರೆ ಜನರನ್ನು ಸಂಘಟಿಸಿ ಬೀದಿಯಲ್ಲಿ ಸಚಿವರಿಗೆ ಮುಖಾಮುಖಿಯಾಗುವುದಾಗಿ ಅವರು ಎಚ್ಚರಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಿಪಿಐಎಂ ಉಳ್ಳಾಲ ವಲಯ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮಾತನಾಡುತ್ತಾ, ಉಳ್ಳಾಲದಲ್ಲಿ ಇರುವ ಏಕೈಕ ಸಮುದಾಯ ಆಸ್ಪತ್ರೆ ಖಾಸಗಿ ಮೆಡಿಕಲ್ ಕಾಲೇಜಿಗೆ ಬಿಟ್ಟುಕೊಡಲಾಗಿದೆ. ಖಾಸಗಿ ಆಸ್ಪತ್ರೆಗಳು ದುಬಾರಿ ಬಿಲ್ ವಿಧಿಸುವುದಲ್ಲದೆ, ಬಿಲ್ ಪಾವತಿಸಲಾಗದ ರೋಗಿಗಳ ಹೆಣವನ್ನೂ ಬಿಟ್ಟುಕೊಡದೆ ಅಮಾನವೀಯತೆ ಮೆರೆಯುತ್ತಿದೆ. ಉಳ್ಳಾಲದಲ್ಲಿ ತಾಲೂಕು ಆಸ್ಪತ್ರೆ ನಿರ್ಮಾಣ, ಕ್ಯಾನ್ಸರ್, ಹೃದಯದ ಆಸ್ಪತ್ರೆ ಸ್ಥಾಪನೆ ಆಗುವವರೆಗೂ ಹೋರಾಟ ನಿಲ್ಲುವುದಿಲ್ಲ. ಹೋರಾಟವನ್ನು ನಿರ್ಣಾಯಕ ಹಂತಕ್ಕೆ ತೆಗೆದುಕೊಂಡು ಹೋಗಲಾಗುವುದು ಎಂದು ಹೇಳಿದರು
ಸಾಮೂಹಿಕ ಧರಣಿಯನ್ನುದ್ದೇಶಿಸಿ CPIM ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸುಕುಮಾರ್ ತೊಕ್ಕೋಟು, ಜಿಲ್ಲಾ ಸಮಿತಿ ಸದಸ್ಯರಾದ ಯು ಜಯಂತ ನಾಯಕ್, ಬಿ ಕೆ ಇಮ್ತಿಯಾಜ್, ಯೋಗೀಶ್ ಜಪ್ಪಿನಮೊಗರು, ರಫೀಕ್ ಹರೇಕಳ, ಜಿಲ್ಲೆಯ ಹಿರಿಯ ಕಮ್ಯುನಿಸ್ಟ್ ನಾಯಕರಾದ ಕೃಷ್ಣಪ್ಪ ಸಾಲ್ಯಾನ್, ಉಳ್ಳಾಲ ವಲಯ ಸಮಿತಿ ಸದಸ್ಯರಾದ ಚಂದ್ರಹಾಸ ಪಿಲಾರ್, ಪ್ರಗತಿಪರ ಚಿಂತಕರಾದ ರಮೇಶ್ ಉಳ್ಳಾಲ ಮುಂತಾದವರು ಮಾತನಾಡಿದರು. ಕೊನೆಯಲ್ಲಿ ಧರಣಿಯನ್ನು CPIM ಜಿಲ್ಲಾ ಯುವನಾಯಕರಾದ ನಿತಿನ್ ಕುತ್ತಾರ್ ರವರು ಸಮಾರೋಪಗೊಳಿಸಿದರು.
ಧರಣಿಯಲ್ಲಿ ಮುನ್ನೂರು ಪಂಚಾಯತ್ ಉಪಾಧ್ಯಕ್ಷರಾದ ಮಹಾಬಲ ದೆಪ್ಪಲಿಮಾರ್, ಪಂಚಾಯತ್ ಸದಸ್ಯರಾದ ಗಣೇಶ್ ಅಡ್ಯಂತಾಯ, ರಾಜೇಶ್ವರಿ, ಶಶಿಕಲಾ, ಆಶ್ರಫ್ ಹರೇಕಳ, DYFI ಜಿಲ್ಲಾ ನಾಯಕರಾದ ರಿಜ್ವಾನ್ ಹರೇಕಳ, ಸುನಿಲ್ ತೇವುಲ, ರಿಯಾಜ್ ಮಂಗಳೂರು, ಇಕ್ಬಾಲ್ ಹರೇಕಳ, ಅನಿಲ್ ತಿಲಕ್ ನಗರ, CPIM ಹಿರಿಯ ನಾಯಕರಾದ ಯು ಬಿ ನಾರಾಯಣ, ಮಹಿಳಾ ಮುಖಂಡರಾದ ಯೋಗಿತಾ ಉಳ್ಳಾಲ, ನಳಿನಾಕ್ಷಿ ಶೆಟ್ಟಿ, ವಲಸೆ ಕಾರ್ಮಿಕರ ಮುಖಂಡರಾದ ಕಾಂತಪ್ಪ, ಮಹಾಂತೇಶ್, ಮೆಹಬೂಬ್ ಸಾಬ್, ಕಟ್ಟಡ ಕಾರ್ಮಿಕರ ಮುಖಂಡರಾದ ರಾಮಚಂದ್ರ ಪಜೀರ್, ಬಶೀರ್ ಮುಂತಾದವರು ಭಾಗವಹಿಸಿದ್ದರು.
ಧರಣಿಯ ನೇತೃತ್ವವನ್ನು CPIM ಉಳ್ಳಾಲ ವಲಯ ಮುಖಂಡರಾದ ಪದ್ಮಾವತಿ ಶೆಟ್ಟಿ, ಸುಂದರ ಕುಂಪಲ, ರೋಹಿದಾಸ್ ಭಟ್ನಗರ, ವಿಲಾಸಿನಿ, ಪ್ರಮೋದಿನಿ, ಜನಾರ್ಧನ ಕುತ್ತಾರ್, ಇಬ್ರಾಹಿಂ ಅಂಬ್ಲಮೊಗರು, ಸದಾಶಿವ ಕುತ್ತಾರ್, ನವೀನ್ ಗಿರಿಯಮೂಲೆ, ಅಬ್ಬಾಸ್ ಮದಕ, ಚಂದ್ರಹಾಸ ಕುತ್ತಾರ್ ರವರು ವಹಿಸಿದ್ದರು.
