ಮಂಗಳೂರಿನ ಕಣ್ಣೂರು ಎಂಬಲ್ಲಿರುವ ಸಿಮೆಂಟ್ ಹಾಗೂ ಕಬ್ಬಿಣ ಮಾರಾಟದ ಸಂಸ್ಥೆಯಲ್ಲಿ ಉದ್ಯೋಗಿಯಾಗಿರುವ ಮಯ್ಯದಿ ಎಂಬವರಿಗೆ ತಲವಾರು ತೋರಿಸಿ ಬೆದರಿಸಿ 8.35 ಲಕ್ಷ ನಗದು ದರೋಡೆಗೈದ ಪ್ರಕರಣಕ್ಕೆ ಸಂಬಂಧಿಸಿ ಬಂಟ್ವಾಳ ಗ್ರಾಮಾಂತರ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಗಸ್ಟ್ 20 ರಂದು ಈ ದರೋಡೆ ಪ್ರಕರಣ ನಡೆದಿದ್ದು, ಮಯ್ಯದ್ಧಿ ಎಂಬವರು ವ್ಯವಹಾರದ ಹಣವನ್ನು ವಿವಿಧ ಅಂಗಡಿಗಳಿಂದ ಸಂಗ್ರಹಿಸಿಕೊಂಡು ಬಂಟ್ವಾಳ ಕಕ್ಕೆಪದವಿನಿಂದ ಪಾಣೆಮಂಗಳೂರಿಗೆ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಮಧ್ಯಾಹ್ನ ಸುಮಾರು 1:00 ಗಂಟೆಗೆ ಬಂಟ್ವಾಳ ಮಣಿನಾಲ್ಕೂರು ಮುಲ್ಕಾಜೆ ಮಾಡ ಎಂಬಲ್ಲಿ ತಲುಪಿದಾಗ, ಎರಡು ಬೈಕ್ ನಲ್ಲಿ ಬಂದ ನಾಲ್ಕು ಜನ ಅಪರಿಚಿತರು ಮಯ್ಯದಿ ರವರಿಗೆ ತಲವಾರು ತೋರಿಸಿ, ಬೆದರಿಸಿ ಅವರ ಬಳಿಯಿದ್ದ ರೂ. 8,35,000/- ನಗದು ಹಣವನ್ನು ದರೋಡೆಗೈದು ಪರಾರಿಯಾಗಿದ್ದರು.
ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಅ . ಕ್ರ 115/2026 ಕಲಂ:309(6) BNS ಮತ್ತು ಕಲಂ: 25(1)(A) Arms Act ರಂತೆ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಆರೋಪಿಗಳ ಪೈಕಿ ಮಂಗಳೂರು ಶಕ್ತಿನಗರ ನಿವಾಸಿ ಪ್ರವಿತ್ ಶೆಟ್ಟಿ, ಉಳ್ಳಾಲ ಕೋಡಿ ನಿವಾಸಿ ಉಮ್ಮರ್ ಫಾರೂಕ್ ಮತ್ತು ಉಳ್ಳಾಲ ಹರೇಕಳ ನಿವಾಸಿ ಶಾಕೀರ್ ಎಂಬವರುಗಳನ್ನು ಅಕ್ಟೋಬರ್ 11 ರಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ನಿರೀಕ್ಷಕರಾದ ಸೀತಾರಾಮ ಪಿ ರವರ ನೇತೃತ್ವದಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಹೆಚ್ಚಿನ ವಿಚಾರಣೆಗಾಗಿ ಮೂವರು ಆರೋಪಿಗಳನ್ನು ನವೆಂಬರ್ 16 ರವರೆಗೆ ಪೊಲೀಸ್ ಕಸ್ಟಡಿಗೆ ವಹಿಸಿದ್ದು, ಪೊಲೀಸರು ಆರೋಪಿಗಳಿಂದ ಅಂದಾಜು 2 ಲಕ್ಷದವರೆಗೆ ನಗದನ್ನು ಸ್ವಾಧೀನಪಡಿಸಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಆರೋಪಿತ ಪ್ರವಿತ್ ರಾಜ್ ಶೆಟ್ಟಿ ಎಂಬಾತನ ಗುರುತು ಪತ್ತೆ ಪರೇಡ್ (Identification parade) ನಡೆಸಲಾಗಿದ್ದು, ಮುಂದಿನ ಕಾನೂನು ಕ್ರಮಕ್ಕೆ ಒಪ್ಪಿಸಲಾಗಿದೆ.
