ಬೆಳ್ತಂಗಡಿ ನಗರ ಪಂಚಾಯತ್: ಚೀಪ್ ಆಫೀಸರ್ ದರ್ಬಾರ್

ಕರಾವಳಿ

ಎತ್ತಂಗಡಿ ಮೇಲೆ ಎತ್ತಂಗಡಿಯಾದರೂ ಕೊನೆಗೆ ಬಂದು ಸೇರುವುದು ಇದೇ ನಗರ ಪಂಚಾಯತಿಗೆ. ಏನಪ್ಪಾ ಕಮಾಯಿ.!

ಬೆಳ್ತಂಗಡಿ ತಾಲೂಕು ಅಂದರೆ ಸಾಕು, ಇಲ್ಲಿ ಘಟಾನುಘಟಿ ಲೀಡರ್ ಗಳೇ ಆಳಿದ ಊರು. ವಸಂತ ಬಂಗೇರರಂತಹ ಪವರ್ ಫುಲ್ ಲೀಡರ್ ಬೆಳ್ತಂಗಡಿಯ ಶಾಸಕರಾಗಿದ್ದರು. ಇದೀಗ ಹರೀಶ್ ಪೂಂಜಾ ಎರಡನೇ ಅವಧಿಗೆ ಶಾಸಕರಾಗಿದ್ದಾರೆ. ವಿವಾದದ ಮೂಲಕವೇ ಹರೀಶ್ ಪೂಂಜಾ ರಾಜ್ಯದಾದ್ಯಂತ ಸುದ್ಧಿಯಲ್ಲಿರುವವರು. ಶಾಸಕರೇನೂ ಸುದ್ದಿಯಲ್ಲಿದ್ದಾರೆ ಬಿಡಿ. ಬೆಳ್ತಂಗಡಿ ತಾಲೂಕಿನ ಅವಸ್ಥೆಯಂತೂ ಹೇಳಿ ಪ್ರಯೋಜನವಿಲ್ಲ. ಅಭಿವೃದ್ಧಿಯ ನಾಗಾಲೋಟಕ್ಕೆ ಇನ್ನೂ ತೆರೆದುಕೊಂಡಿಲ್ಲ. ಘಟಾನುಘಟಿ ನಾಯಕರೇ ಬೆಳ್ತಂಗಡಿಯನ್ನು ಆಳಿ ಹೋದರೂ ಒಂದು ಸುಸಜ್ಜಿತ ಬಸ್ ತಂಗುದಾಣ ನಿರ್ಮಿಸಲು ಸಾಧ್ಯವಾಗಿಲ್ಲ. ಬೆಳ್ತಂಗಡಿ ತಾಲೂಕಿನಲ್ಲಿ ಧರ್ಮಸ್ಥಳ ಅನ್ನುವ ಪುಣ್ಯಕ್ಷೇತ್ರ ಇಲ್ಲದಿದ್ದರೆ ಈ ತಾಲೂಕನ್ನು ಭೂತಗನ್ನಡಿ ಹಿಡಿದು ನೋಡಬೇಕಿತ್ತು. ಆ ರೀತಿ ಹಂಡಾಲೆದ್ದು ಹೋಗಿದೆ.

ಈಗ ವಿಷಯಕ್ಕೆ ಬರೋಣ. ಬೆಳ್ತಂಗಡಿ ತಾಲೂಕಿನಲ್ಲಿ ನಗರ ಪಂಚಾಯತ್ ಒಂದಿದೆ. ಹೆಸರಿಗೆ ಮಾತ್ರ ನಗರ ಪಂಚಾಯತ್. ಇಲ್ಲಿ ಅಧಿಕಾರಿಗಳದ್ದೇ ದರ್ಬಾರ್. ಇಲ್ಲಿನ ಮುಖ್ಯಾಧಿಕಾರಿ ರಾಜೇಶ್ ಎಂಬುವವರು ಇಲ್ಲಿಯೇ ಪರ್ಮನೆಂಟಾಗಿ ಗೂಟ ಹೊಡೆದಿದ್ದಾರೆ. ಎರಡು ಮೂರು ಬಾರಿ ಇಲ್ಲಿಂದ ಎತ್ತಂಗಡಿಯಾದರೂ ಕೊನೆಗೆ ಬಂದು ಸೇರುವುದು ಇದೇ ನಗರ ಪಂಚಾಯತ್ ಗೆ. ನೀವೇ ಊಹಿಸಿಕೊಳ್ಳಿ. ಇಲ್ಲಿನ ಮುಖ್ಯಾಧಿಕಾರಿ ಸ್ಥಾನ ಬಿಟ್ಟುಕೊಡಲು ಇವರು ತಯಾರಿಲ್ಲ. ‘ಲಾಭ’ ಇಲ್ಲದೆ ಇಲ್ಲಿ ಗೂಟ ಹೊಡೆದು ಕೂರಲು ಇವರಿಗೇನು ರೋಗ ಅಲ್ಲವೇ? ಕಳೆದ ಏಳೆಂಟು ವರ್ಷಗಳಿಂದ ಎರಡು ಮೂರು ಬಾರಿ ಇಲ್ಲಿಂದ ವರ್ಗಾವಣೆಯಾದರೂ ವರ್ಗಾವಣೆಯಷ್ಟೇ ಸಲೀಸಾಗಿ ನೇಮಕಗೊಳ್ಳುತ್ತಿದ್ದಾರೆ. ಇದು ಆಶ್ಚರ್ಯ ಆದರೂ ಸತ್ಯ.

ಇಲ್ಲಿನ ಮುಖ್ಯಾಧಿಕಾರಿ ಕಮಾಯಿ ಮಾಡುವುದರಲ್ಲಿ ಎತ್ತಿದ ಕೈ ಅಂತೆ. ಇಲ್ಲಿ ಶ್ರೀಮಂತರಿಗೊಂದು ನ್ಯಾಯ? ಬಡವರಿಗೊಂದು ನ್ಯಾಯ ಅಂತೆ? ಬೆಳ್ತಂಗಡಿ ನಗರ ಪಂಚಾಯತ್ ನಲ್ಲಿ ಗೋಲ್ಮಾಲ್ ಗಳದ್ದೇ ಕಥೆಯಂತೆ. ಇಲ್ಲಿ ಅನಧಿಕೃತವಾಗಿ ಬಿಲ್ಡಿಂಗ್, ಅಪಾರ್ಟ್ ಮೆಂಟ್ ಕಟ್ಟುವವರಿಗೆ ಸುಗ್ಗಿಯೇ ಸುಗ್ಗಿ. ಇವರಿಗೆ ಯಾವುದೇ ಕಾನೂನು ಕಟ್ಟಲೆಗಳು ಅನ್ವಯವಾಗುವುದಿಲ್ಲವಂತೆ. ಇಲ್ಲಿನ ಮುಖ್ಯಾಧಿಕಾರಿಯ ಕೃಪೆಯಿಂದ ಸಕ್ರಮಗೊಳ್ಳುತ್ತಿದೆಯಂತೆ. ಇಲ್ಲಿ ರಸ್ತೆ ಮಾರ್ಜಿನ್ ಬಿಡದೆ ಕಟ್ಟಿದ ಕಟ್ಟಡಗಳು, ಸೆಟ್ ಬ್ಯಾಕ್ಸ್ ಇಲ್ಲದ ಕಟ್ಟಡಗಳು, ಇನ್ನು ಜಾಸ್ತಿ ಮಹಡಿಗಳ ಕಟ್ಟಿರುವ ಕಟ್ಟಡಗಳು ಡೀಲ್ ಕುದುರಿಸಿ ಮುಖ್ಯಾಧಿಕಾರಿಗಳು ಸಕ್ರಮಗೊಳಿಸುತ್ತಿದ್ದಾರಂತೆ! ಎಲ್ಲವೂ ಕಟ್ಟಡದ ಮಹಿಮೆ. ಇನ್ನು ಹೊಸ ಬಿಲ್ಡಿಂಗ್ ಕಟ್ಟುವವರು ಯಾವುದೇ ಕಾನೂನುಗಳನ್ನು ಪಾಲಿಸುತ್ತಿಲ್ಲ. ಪಾರ್ಕಿಂಗ್ ವ್ಯವಸ್ಥೆ ಮಾಡದೆ ಬಿಲ್ಡಿಂಗ್ ಕಟ್ಟುತ್ತಿದ್ದಾರೆ. ಇಲ್ಲಿನ ಅಧಿಕಾರಿಗಳಿಗೆ ಕಪ್ಪಕಾಣಿಕೆ ಕೊಟ್ಟರೆ ಸಾಕು, ಕಣ್ಣು ಮುಚ್ಚಿ ಲೈಸೆನ್ಸ್ ನೀಡುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ಹಲವು ಪುರಾವೆಗಳು ನಮ್ಮ ಬತ್ತಳಿಕೆಯಲ್ಲಿದೆ. ಮುಂದಕ್ಕೆ ನೋಡೋಣ.

ಇನ್ನು ನಗರ ಪಂಚಾಯತ್ ಅಧಿಕಾರಿಗಳದ್ದೇ ಇಲ್ಲಿ ದರ್ಬಾರ್. ಸಾರ್ವಜನಿಕರು ದೂರು ಕೊಟ್ಟರೆ ಬಿಲ್ಡರ್ ಮಾಫಿಯಾಗಳೊಂದಿಗೆ ಡೀಲಿಂಗ್.. ಸೆಟ್ಟಿಂಗ್ ಮಾಡುತ್ತಿದ್ದಾರಂತೆ. ಸಖತ್ ಮೇಯುವುದನ್ನೇ ಕಸುಬು ಮಾಡಿಕೊಂಡಿದ್ದಾರೆ. ಇಲ್ಲಿನ ಮುಖ್ಯಾಧಿಕಾರಿ ಕಮಾಯಿಯಲ್ಲೂ ಎಕ್ಸ್ ಫರ್ಟ್ ಅಂತೆ! ಬೆಳ್ತಂಗಡಿಯ ನರನಾಡಿ ಗೊತ್ತಿರುವುದರಿಂದ ಉಣ್ಣುವುದರಲ್ಲೇ ಸಖತ್ ಬ್ಯುಸಿಯಂತೆ.

ಇನ್ನು ಇಲ್ಲಿನ ಘನತ್ಯಾಜ್ಯದ ವಿಚಾರವಂತೂ ಹೇಳಿ ಪ್ರಯೋಜನವಿಲ್ಲ. ಘನತ್ಯಾಜ್ಯದ ವಾಹನಗಳನ್ನು ಸಾಲಾಗಿ ಪಟ್ಟಣ ಪಂಚಾಯತ್ ಮುಂದೆಯೇ ನಿಲ್ಲಿಸಲಾಗುತ್ತದೆ. ಸಾರ್ವಜನಿಕರು ಕೆಲಸ ಕಾರ್ಯಗಳಿಗೆ ನಗರ ಪಂಚಾಯತ್ ಗೆ ಬರಬೇಕಾದರೆ ಮೂಗು ಮುಚ್ಚಿ ಬರಬೇಕಾದ ದೈನೇಸಿ ಸ್ಥಿತಿ ಇಲ್ಲಿಯದು. ಘನತ್ಯಾಜ್ಯ ವಾಹನಕ್ಕೆ ಪಟ್ಟಣ ಪಂಚಾಯತ್ ಪಾರ್ಕಿಂಗ್ ಪರ್ಯಾಯ ವ್ಯವಸ್ಥೆ ಕಲ್ಪಿಸದ ಕಾರಣ ಇದರ ದುರ್ನಾತ ಸ್ಥಳೀಯವಾಗಿ ಹತ್ತಿರವಿರುವ ಹಲವು ಇಲಾಖೆಗಳಿಗೂ ಬಡಿಯುತ್ತಿದೆ. ಒಂದು ನಗರ ಪಂಚಾಯತ್ ಅನ್ನು ಸರಿ ಇಡಲು ಸಾಧ್ಯವಿಲ್ಲದವರು ಇನ್ನು ಊರನ್ನು ಹೇಗೆ ಸರಿ ಇಟ್ಟುಕೊಳ್ಳುವವರು ಅಲ್ಲವೇ.?