ಕಾನೂನಿಗೆ ತಲೆ ಇರಬೇಕು, ಆದರೆ ಅದು ಎಂದಿಗೂ ತನ್ನ ಹೃದಯವನ್ನು ಕಳೆದುಕೊಳ್ಳಬಾರದು: ಹೈಕೋರ್ಟ್
ನೇಮಕಾತಿಯ ಆದೇಶ ಕೈಸೇರುವ ಒಂದು ತಿಂಗಳ ಮುನ್ನ ಅಪಘಾತದಲ್ಲಿ ಒಂದು ಕಾಲು ಕಳೆದುಕೊಂಡ ಪೊಲೀಸ್ ಕಾನ್ಸ್ಟೆಬಲ್ ಗೆ, ಸರ್ಕಾರಿ ಇಲಾಖೆಯಲ್ಲಿ ಸೂಕ್ತವಾದ ಕಛೇರಿ ಕೆಲಸ ನೀಡುವಂತೆ ರಾಜ್ಯ ಹೈಕೋರ್ಟ್ ಸರ್ಕಾರಕ್ಕೆ ಮಹತ್ವದ ನಿರ್ದೇಶನ ನೀಡಿದೆ. ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಮತ್ತು ನ್ಯಾಯಮೂರ್ತಿ ಹೇಮಾ ಕುಲಕರ್ಣಿ ಅವರಿದ್ದ ವಿಭಾಗೀಯ ಪೀಠವು ಈ ಮಹತ್ವದ ಆದೇಶ ಹೊರಡಿಸಿದೆ.
ಅರ್ಜಿದಾರರಾದ ಶಿವಕುಮಾರ್ ಹಿರೇಮಠ ಅವರು 2019ರಲ್ಲಿ ನಡೆದ ಸಿವಿಲ್ ಪೊಲೀಸ್ ಕಾನ್ಸ್ಟೆಬಲ್ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಿ, ಅಂತಿಮ ಆಯ್ಕೆ ಪಟ್ಟಿಯಲ್ಲೂ ಸ್ಥಾನ ಪಡೆದಿದ್ದರು. ಆದರೆ, ಅವರು ವ್ಯಾಸಂಗ ಮಾಡಿದ್ದ ಮೂರು ವರ್ಷಗಳ ಡಿಪ್ಲೊಮಾ ಕೋರ್ಸ್, ಪಿಯುಸಿ ಕೋರ್ಸ್ಗೆ ಸಮಾನವೇ ಎಂಬ ಗೊಂದಲದ ನೆಪವೊಡ್ಡಿ ಸರ್ಕಾರ ಅವರ ನೇಮಕಾತಿ ಆದೇಶವನ್ನು ತಡೆಹಿಡಿದಿತ್ತು.
ಈ ಕುರಿತು ಶಿವಕುಮಾರ್ ಕರ್ನಾಟಕ ರಾಜ್ಯ ಆಡಳಿತ ನ್ಯಾಯಾಧಿಕರಣದ ಮೆಟ್ಟಿಲೇರಿದ್ದರು. ಕಾನ್ಸ್ಟೆಬಲ್ ಹುದ್ದೆಗೆ ನೇಮಕಾತಿ ನೀಡುವಂತೆ ಕೆಎಸ್ಎಟಿ ಆದೇಶಿಸಿದ್ದರೂ, ಸರ್ಕಾರ ಒಂದು ವರ್ಷಕ್ಕೂ ಹೆಚ್ಚು ಕಾಲ ಆದೇಶ ಪಾಲಿಸಿರಲಿಲ್ಲ. ಕೊನೆಗೆ ಅಭ್ಯರ್ಥಿಯು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ ಬಳಿಕ, 2025ರ ಜನವರಿ 1ರಂದು ಸರ್ಕಾರ ನೇಮಕಾತಿ ಆದೇಶ ನೀಡಿತ್ತು. ಆದೇಶ ಕೈಸೇರುವ ಮುನ್ನವೇ ನಡೆದ ಘೋರ ದುರಂತ
ದುರದೃಷ್ಟವಶಾತ್, ಸರ್ಕಾರ ನೇಮಕಾತಿ ಆದೇಶ ನೀಡುವ ಕೇವಲ ಒಂದು ತಿಂಗಳ ಮುನ್ನ, ಶಿವಕುಮಾರ್ ಭೀಕರ ಅಪಘಾತಕ್ಕೆ ತುತ್ತಾಗಿ ಅವರ ಒಂದು ಕಾಲನ್ನು ಕತ್ತರಿಸಬೇಕಾಯಿತು.
ತಮಗೆ ಬೇರೆ ಯಾವುದಾದರೂ ಹುದ್ದೆ ನೀಡುವಂತೆ ಕೋರಿ ಶಿವಕುಮಾರ್ ಮತ್ತೆ ಕೆಎಸ್ಎಟಿ ಮೊರೆ ಹೋಗಿದ್ದರು. ಆದರೆ, ‘ನೇಮಕಾತಿ ಅಧಿಸೂಚನೆ ಕೇವಲ ಪೊಲೀಸ್ ಕಾನ್ಸ್ಟೆಬಲ್ ಹುದ್ದೆಗೆ ಮಾತ್ರ ಸೀಮಿತವಾಗಿದೆ, ಹೀಗಾಗಿ ಬೇರೆ ಹುದ್ದೆ ನೀಡಲು ಸಾಧ್ಯವಿಲ್ಲ’ ಎಂದು ಕೆಎಸ್ಎಟಿ ಅವರ ಅರ್ಜಿಯನ್ನು ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ, ಸರ್ಕಾರದ ಆಡಳಿತಾತ್ಮಕ ಜಡತ್ವಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ‘ಅಪಘಾತಕ್ಕೆ ಸರ್ಕಾರ ಕಾರಣವಲ್ಲದಿದ್ದರೂ, ನ್ಯಾಯಾಲಯದ ಆದೇಶವನ್ನು ಜಾರಿಗೊಳಿಸುವಲ್ಲಿ ತಾನು ಮಾಡಿದ ವಿಳಂಬದ ಪರಿಣಾಮಗಳಿಂದ ಸರ್ಕಾರ ನುಣುಚಿಕೊಳ್ಳಲು ಸಾಧ್ಯವಿಲ್ಲ’ ಎಂದು ಪೀಠ ಸ್ಪಷ್ಟಪಡಿಸಿತು. ತೀರ್ಪಿನ ವೇಳೆ ಅತ್ಯಂತ ಮಾರ್ಮಿಕವಾಗಿ ನುಡಿದ ನ್ಯಾಯಪೀಠ, ‘ಕಾನೂನಿಗೆ ತಲೆ ಇರಬೇಕು, ಆದರೆ ಅದು ಎಂದಿಗೂ ತನ್ನ ಹೃದಯವನ್ನು ಕಳೆದುಕೊಳ್ಳಬಾರದು. ಸಂವಿಧಾನವು ಕೇವಲ ಕಠಿಣ ಆದೇಶಗಳ ಕಟ್ಟಡವಲ್ಲ; ಅದು ಹಕ್ಕುಗಳು, ಘನತೆ ಮತ್ತು ನ್ಯಾಯದ ಜೀವಂತ ಸನ್ನದು. ಕಾನೂನನ್ನು ತರ್ಕ, ನ್ಯಾಯ ಮತ್ತು ಮಾನವೀಯತೆಯೊಂದಿಗೆ ಜಾರಿಗೊಳಿಸಬೇಕು’ ಎಂದು ಅಭಿಪ್ರಾಯಪಟ್ಟಿತು.
ಅರ್ಜಿದಾರರ ಪರಿಸ್ಥಿತಿಯನ್ನು ಮಾನವೀಯ ನೆಲೆಯಲ್ಲಿ ಪರಿಗಣಿಸಿರುವ ಹೈಕೋರ್ಟ್, ಕಾನ್ಸ್ಟೆಬಲ್ ಹುದ್ದೆಗೆ ಸಮಾನಾಂತರವಾದ ಜೂನಿಯರ್ ಡೇಟಾ ಎಂಟ್ರಿ ಆಪರೇಟರ್, ದ್ವಿತೀಯ ದರ್ಜೆ ಸಹಾಯಕ, ಸಹಾಯಕ ಬರಹಗಾರ ಅಥವಾ ಇನ್ನಾವುದೇ ಸೂಕ್ತ ಹುದ್ದೆಗೆ ಶಿವಕುಮಾರ್ ಅವರನ್ನು ನೇಮಿಸುವ ಕುರಿತು 8 ವಾರಗಳ ಒಳಗಾಗಿ ಪರಿಗಣಿಸುವಂತೆ ರಾಜ್ಯ ಸರ್ಕಾರಕ್ಕೆ ಖಡಕ್ ನಿರ್ದೇಶನ ನೀಡಿದೆ.
