ಕಾವೂರು ಸುರೇಂದ್ರನ್ ಹತ್ಯೆ ಪ್ರಕರಣ: ಪ್ರಮುಖ ಆರೋಪಿ ಸಂತೋಷ್ ನಿಗೆ ಜೀವಾವಧಿ ಶಿಕ್ಷೆ, ಇನ್ನೋರ್ವ ಆರೋಪಿ ಸಿದ್ದಪ್ಪ ನಿರ್ದೋಷಿ; ನ್ಯಾಯಾಲಯದಿಂದ ತೀರ್ಪು

ಕರಾವಳಿ

ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಗಾಂಧಿನಗರದ ಮಲ್ಲಿ ಲೇ ಔಟ್ ನಲ್ಲಿ ಆರು ವರ್ಷಗಳ ಹಿಂದೆ ನಡೆದಿದ್ದ ಕೊಲೆ ಪ್ರಕರಣದ ಸಂಬಂಧ ಇಬ್ಬರು ಆರೋಪಿಗಳ ಪೈಕಿ ಓರ್ವನ ಕೃತ್ಯ ಸಾಬೀತಾಗಿದ್ದು, ನ್ಯಾಯಾಲಯವು ಶಿಕ್ಷೆ ವಿಧಿಸಿದ್ದು, ಮತ್ತೋರ್ವ ಆರೋಪಿ ನಿರ್ದೋಷಿಯೆಂದು ನ್ಯಾಯಾಲಯ ತೀರ್ಪು ನೀಡಿದೆ.

2020 ರ ನವೆಂಬರ್ 3 ರಂದು ಸುರೇಂದ್ರನ್ ಎಂಬಾತನ ಮನೆಯಲ್ಲಿ ಮೊದಲನೇ ಆರೋಪಿ ಸಂತು ಯಾನೆ ಸಂತೋಷ್ ಎಂಬುವವನಿಗೆ ಕೆಲಸ ಮಾಡಿದ ಹಣ ಕೊಡಲಿಲ್ಲವೆಂದು ಎರಡನೇ ಆರೋಪಿಯಾದ ಸಿದ್ದು ಆಲಿಯಾಸ್ ಸಿದ್ದಪ್ಪನ ಜೊತೆಗೂಡಿ ಹಣ ಕೇಳಲೆಂದು ಸುರೇಂದ್ರನ್ ರವರ ಮನೆಗೆ ಹೋಗಿದ್ದು ಅಲ್ಲಿ ಮಾತಿಗೆ ಮಾತು ಬೆಳೆದು ಸಂತೋಷ್ ಎಂಬಾತ ಪೇಪರ್ ಕಟ್ ಮಾಡುವ ಬ್ಲೇಡಿನಿಂದ ಸುರೇಂದ್ರನ್ ನ ಕುತ್ತಿಗೆಗೆ, ಮುಖಕ್ಕೆ, ತಲೆಯ ಬಾಗಕ್ಕೆ ಕೊಯ್ದು, ರಾಡ್ ನಿಂದ ತಲೆಯ ಭಾಗಕ್ಕೆ ಹೊಡೆದು ಕೊಲೆ ಮಾಡಿರುತ್ತಾನೆ. ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ: 88/2020 ಕಲಂ: 302, 392, 201, 114 ಜೊತೆಗೆ 34 ಐ.ಪಿ.ಸಿ ಯಂತೆ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆ ಕೈಗೊಂಡ ಆಗಿನ ಕಾವೂರು ಪೊಲೀಸ್ ಠಾಣೆಯ ನಿರೀಕ್ಷಕರಾಗಿದ್ದ ರಾಘವ್ ಪಡೀಲ್ ರವರು ಆರೋಪಿಗಳನ್ನು ಬಂಧಿಸಿ ಸಂತು ಯಾನೆ ಸಂತೋಷ್ ಮತ್ತು ಸಿದ್ದು ಯಾನೆ ಸಿದ್ದಪ್ಪ ಎಂಬುವವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಪ್ರಕರಣದ ತನಿಖೆಯನ್ನು ನಡೆಸಿ ಆರೋಪಿತರ ವಿರುದ್ದ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಸಾಕ್ಷೀದಾರರ ವಿಚಾರಣೆ ನಡೆಸಿದ ಮಂಗಳೂರಿನ 2 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಜಗಧೀಶ್ ವಿ.ಎನ್ ರವರು ಒಂದನೇ ನ ಆರೋಪಿ ಸಂತು ಯಾನೆ ಸಂತೋಷ್ ಎಂಬಾತನನ್ನು ದೋಷಿ ಎಂದು ತೀರ್ಮಾನಿಸಿ ಜೀವಾವಧಿ ಶಿಕ್ಷೆ ಘೋಷಿಸಿದೆ. 25 ಸಾವಿರ ದಂಡ ಪಾವತಿಸುವಂತೆ ತೀರ್ಪು ವಿಧಿಸಿದೆ. ಇದೇ ಸಂದರ್ಭದಲ್ಲಿ ಎರಡನೇ ಆರೋಪಿ ಸಿದ್ದು ಯಾನೆ ಸಿದ್ದಪ್ಪ ನಿರ್ದೋಷಿಯೆಂದು ತೀರ್ಪು ನೀಡಿದೆ.

ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಶ್ರೀಮತಿ ಜ್ಯೋತಿ ಪ್ರಮೋದ್ ನಾಯಕ್ ರವರು ವಾದ ಮಂಡಿಸಿದ್ದರು…