ಧರ್ಮಸ್ಥಳದಲ್ಲಿ ನಡೆದಿದ್ದ ವಿದ್ಯಾರ್ಥಿನಿ ಸೌಜನ್ಯಾ ಅತ್ಯಾಚಾರ ಪ್ರಕರಣ ರಾಜ್ಯ ಹಾಗೂ ದೇಶದ ಮಟ್ಟದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿತ್ತು. ಪ್ರಭಾವೀ ಗಳ ಹೆಸರು ರೇಪ್ ಆಂಡ್ ಮರ್ಡರ್ ಪ್ರಕರಣದಲ್ಲಿ ತಳುಕು ಹಾಕಿಕೊಂಡಿತ್ತು. ಸ್ಥಳೀಯವಾಗಿ ಕೆಲವೊಂದು ಪ್ರಭಾವಿಗಳ ಹೆಸರು ಹರಿದಾಡುತ್ತಿದ್ದರೂ ಕೊನೆಗೆ ಪೊಲೀಸರು ಒತ್ತಡಕ್ಕೆ ಮಣಿದು ಮಾನಸಿಕ ಅಸ್ವಸ್ಥ ಸಂತೋಷ ರಾವ್ ರನ್ನು ಆರೋಪಿಯನ್ನಾಗಿ ಫಿಕ್ಸ್ ಮಾಡಿದ್ದರು. ಇದೀಗ ಆರೋಪಿ ಸಂತೋಷ್ ರಾವ್ ರನ್ನು ನಿರ್ದೋಷಿ ಎಂದು ಸಿಬಿಐ ನ್ಯಾಯಾಲಯ ತೀರ್ಪು ನೀಡಿದ್ದು, ಈಗ ನಿಜವಾದ ಆರೋಪಿ ಯಾರೆನ್ನುವ ಪ್ರಶ್ನೆ ಮತ್ತೆ ಎದುರಾಗಿದೆ.
ಹೀಗಿರುವಾಗ ? ಇದರ ಹಿಂದಿನ ನಿಗೂಢತೆಯನ್ನು ಬಯಲಿಗೆಳೆಯುವಂತೆ ಆಗ್ರಹಿಸಿ ಪ್ರಕರಣದ ಮರುತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳುವಂತೆ ‘ನೈಜ ಹೋರಾಟಗಾರರ ವೇದಿಕೆ’ ಮನವಿ ಮಾಡಿದೆ.
“ಸೌಜನ್ಯಾಳ ಮೇಲೆ ಅತ್ಯಾಚಾರ ಆಗಿ ಹತ್ಯೆ ಆಗಿರುವುದಂತೂ ಸತ್ಯ. ಸ್ಥಳೀಯ ಹಾಗೂ ಪೊಲೀಸ್ ಅಧಿಕಾರಿಗಳು ಮತ್ತು ಸಿಒಡಿ ತಂಡದವರು ಪ್ರಾಥಮಿಕ ಹಂತದಲ್ಲಿಯೇ ಕರ್ತವ್ಯಲೋಪ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಸಿಬಿಐ ಕೂಡ ಸಮಗ್ರವಾದ ತನಿಖೆ ನಡೆಸಿಲ್ಲ ಹಾಗೂ ಸಾಕ್ಷಿಗಳನ್ನು ನ್ಯಾಯಾಲಯದ ಮುಂದೆ ಹಾಜರುವಡಿಸಲಿಲ್ಲವೆಂಬುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಕರ್ನಾಟಕ ರಾಜ್ಯದ ಪೊಲೀಸರು ಯಾವುದೇ ಪ್ರಕರಣಗಳನ್ನು ಅತ್ಯಂತ ಚಾಣಾಕ್ಷತನದಿಂದ ತನಿಖೆ ನಡೆಸಿ ಆರೋಪಿಗಳು ಎಲ್ಲಿ ಅಡಗಿದ್ದರೂ ಅವನನ್ನು ಹೊರಗೆ ತಂದು ಕಾನೂನು ಕ್ರಮ ಕೈಗೊಂಡು ಜೈಲಿಗೆ ಕಳಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆನ್ನುವುದು ನಮ್ಮೆಲ್ಲರ ನಂಬಿಕೆ. ಆದರೆ, ಈ ಪ್ರಕರಣದಲ್ಲಿ ಪ್ರಭಾವಿಗಳ ಒತ್ತಡಕ್ಕೆ ಮಣಿದಿರುವ ಬಗ್ಗೆ ನಮಗೆಲ್ಲ ಸಂಶಯವಿದೆ” ಎಂದು ಮನವಿಯಲ್ಲಿ ತಿಳಿಸಲಾಗಿದೆ.

“ಸೌಜನ್ಯಾ ಅತ್ಯಾಚಾರ, ಹತ್ಯೆ ಪ್ರಕರಣದಲ್ಲಿ ಕರ್ನಾಟಕ ಪೊಲೀಸರು ಪ್ರಾಥಮಿಕ ಹಂತದಲ್ಲಿಯೇ ಪ್ರಕರಣವನ್ನು ಭೇದಿಸಲು ವಿಫಲರಾಗಿದ್ದಾರೆ. ಈ ಪ್ರಕರಣದ ಹಿಂದೆ ಕಾಣದ ಕೈಗಳು ಹೇಗೆ ಕೆಲಸ ಮಾಡಿರಬಹುದು. ಅಮಾಯಕ ಸಂತೋಷ್ ಅವರ ಜೀವನದಲ್ಲಿ ಅಸಂತೋಷ ಮೂಡಿಸಿ ಅವನ ಜೀವನಕ್ಕೆ ಕಲ್ಲು ಹಾಕಿದವರು ಯಾರು? ಇಂತಹ ಹಲವಾರು ಪ್ರಶ್ನೆಗಳು ಸಾರ್ವಜನಿಕರಲ್ಲಿ ಉತ್ತರ ಸಿಗದಿರುವುದು ವಿಪರ್ಯಾಸ” ಎಂದು ಹೇಳಲಾಗಿದೆ.
ʼಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಡಾ ಜಿ. ಪರಮೇಶ್ವರ್ ಅವರು ಈ ಕುರಿತು ಕೂಲಂಕುಶವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆʼ ಎಂದು ನೈಜ ಹೋರಾಟಗಾರರ ವೇದಿಕೆಯ ಹಿರಿಯ ಸಾಮಾಜಿಕ ಹೋರಾಟಗಾರ ಹೆಚ್ಎಂ ವೆಂಕಟೇಶ್ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.