ಕೈಕಂಬ ಪೇಟೆಯಲ್ಲಿ ಡ್ರಗ್ಸ್ ಸದ್ದು.! ದುಷ್ಟ ಕೂಟಕ್ಕೆ ಬಲಿಯಾಗುತ್ತಿದೆ ಸುಶಿಕ್ಷಿತ ಯುವಕರ ಗುಂಪು

ಕರಾವಳಿ

ನಿರ್ಲಕ್ಷ್ಯವಹಿಸಿದರೆ ಅನಾಹುತಕ್ಕೆ ಕಾರಣವಾಗಬಹುದು.

ಮಂಗಳೂರು ತಾಲೂಕು ವ್ಯಾಪ್ತಿಯ ಗುರುಪುರ ಕೈಕಂಬ ಪ್ರದೇಶ ಅಭಿವೃದ್ಧಿಯ ನಾಗಾಲೋಟಕ್ಕೆ ಮೈಯೊಡ್ಡಿದೆ. ನಗರ ಪ್ರದೇಶಕ್ಕೆ ಸಮಾನವಾಗಿ ಅಭಿವೃದ್ಧಿಗೆ ಪೈಪೋಟಿ ನೀಡುತ್ತಿದೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಭರದಿಂದ ಸಾಗುತ್ತಿದೆ. ವಿದ್ಯಾಸಂಸ್ಥೆಗಳು, ಮೆಡಿಕಲ್ ಕಾಲೇಜು, ವಸತಿ ಸಮುಚ್ಚಯಗಳು ತಲೆ ಎತ್ತುತ್ತಿದ್ದು ಸಹಜವಾಗಿ ಜನವಸತಿ ಕೂಡ ಹೆಚ್ಚಾಗುತ್ತಿದೆ. ಆಸುಪಾಸಿನ ಗ್ರಾಮೀಣ ಭಾಗದ ಜನರು ತಮ್ಮ ಅನುಕೂಲಕ್ಕಾಗಿ ಇಲ್ಲಿ ಬಾಡಿಗೆ ಮನೆ, ನಿವೇಶನ ಖರೀದಿಸಿ ನೆಲೆಸುತ್ತಿದ್ದಾರೆ. ಸುಶಿಕ್ಷಿತ ಕುಟುಂಬಗಳು, ಒಳ್ಳೆಯ ಕೌಟುಂಬಿಕ ಹಿನ್ನೆಲೆಯ ಯುವಕರು ಕೈಕಂಬ ಪೇಟೆಯತ್ತ ಆಕರ್ಷಿತರಾಗುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವು ದಾರಿ ತಪ್ಪಿದ ಸೊಂಭೇರಿ ಯುವಕರ ದಂಡು ಉತ್ತಮ ನಡತೆಯ ಯುವಕರನ್ನು ಆಪೋಶನ ತೆಗೆದುಕೊಳ್ಳುತ್ತಿದ್ದಾರೆ. ಮಕ್ಕಳಿಗೆ ಒಳ್ಳೆಯ ಭವಿಷ್ಯ ರೂಪಿಸಲು ಇಲ್ಲಿಗೆ ಬಂದ ಕೆಲವು ಕುಟುಂಬಗಳು ತಮ್ಮ ಮಕ್ಕಳು ದಾರಿ ತಪ್ಪುತ್ತಿರುವುದನ್ನು ಕಂಡು ಆಕಾಶವೇ ಮೈ ಮೇಲೆ ಬಿದ್ದಂತ ಸನ್ನಿವೇಶ ಸೃಷ್ಟಿಯಾಗಿದೆ. ಇದಕ್ಕೆಲ್ಲ ಕಾರಣ ಗುರುಪುರ ಕೈಕಂಬ ಪೇಟೆಯಲ್ಲಿ ಡ್ರಗ್ಸ್ ಸಪ್ಲೈ ಮಾಡುವ ದುಷ್ಟ ಕೂಟ.!

ಮಂಗಳೂರು ನಗರದಲ್ಲಿ ರಾತ್ರಿ ಒಂಭತ್ತು- ಹತ್ತು ಗಂಟೆಯಾದರೆ ಸಾಕು.. ಅಂಗಡಿ ಮುಂಗಟ್ಟುಗಳು ಪೂರ್ತಿ ಬಂದ್.. ಜನರ ಸುಳಿವೆಯೇ ಇರಲ್ಲ. ಆದರೆ ನಗರದ ಹತ್ತಾರು ಕಿಲೋಮೀಟರ್ ದೂರದಲ್ಲಿರುವ ಕೈಕಂಬ ಪೇಟೆಯ ಸ್ಥಿತಿ ಇದಕ್ಕಿಂತ ಭಿನ್ನ. ಜನರು ಮಲಗಿದರೂ ಕೈಕಂಬ ಪೇಟೆ ಮಲಗುವುದಿಲ್ಲ. ಮಧ್ಯ ರಾತ್ರಿ ಕಳೆದರೂ ಇಲ್ಲಿ ಕೆಲವು ಗೂಡಂಗಡಿ, ನವ ಮೊಡಲಿನ ಹೊಟೇಲು ರಾಜಾರೋಷವಾಗಿ ತೆರೆದಿರುತ್ತದೆ. ಇವರಿಗೆ ಟೈಮಿಂಗ್ಸ್ ಎಂಬುದೇ ಇಲ್ಲ.! ಕಾರಣ ಸಂಬಂಧ ಪಟ್ಟವರಿಗೆ ಏನೋ ಸಂಥಿಂಗ್.! ಇದನ್ನೇ ಲಾಭ ಮಾಡಿಕೊಂಡಿರುವ ಕೆಲವು ಅಡ್ಡ ಕಸುಬಿಗಳು ತಮ್ಮ ವ್ಯವಹಾರಕ್ಕೆ ಸೇಫೆಸ್ಟ್ ಜಾಗ ಅಂದುಕೊಂಡು ದೂರದ ಊರಿನ ದಾರಿ ತಪ್ಪಿದ ಯುವಕರ ದಂಡು ಇಲ್ಲಿ ಬೀಡು ಬಿಟ್ಟು ತಮ್ಮ ವ್ಯವಹಾರವನ್ನು ಸಲೀಸಾಗಿ ನಡೆಸುತ್ತಿದೆ. ಮನೆಯವರೆಲ್ಲ ಮಲಗಿದರೂ ಇಲ್ಲಿನ ಕೆಲವು ಯುವಕರು ಬೈಕ್, ಸ್ಕೂಟರ್ ಮೂಲಕ ಪೇಟೆಯಲ್ಲೆ ಗಿರ್ಗೀಟ್ ಹೊಡೆಯುತ್ತಾರೆ. ಇವತ್ತಿನ ಜೆನ್ ಝೀ ಗಳಿಗೆ ರಾತ್ರಿ ಹೊತ್ತು ಸುತ್ತಾಡುವುದು ಕೂಡ ಒಂದು ತರದ ಟ್ರೆಂಡ್ ಆಗಿ ಬಿಟ್ಟಿದೆ. ಮಿಕ ತನ್ನಿಂತಾನೇ ಬಲೆಗೆ ಬೀಳುತ್ತದೆ ಅಂದುಕೊಂಡು ಕೆಲವು ದುಷ್ಟ ಕೂಟಗಳು ಅಂತಹವರನ್ನು ಪರಿಚಯ ಮಾಡಿಕೊಂಡು ಒಳ್ಳೆಯವರಂತೆ ನಟಿಸಿ, ವಿವಿಧ ಆಮಿಷ ತೋರಿಸಿ, ಸುಶಿಕ್ಷಿತ ಯುವಕರ ಗುಂಪನ್ನು ತನ್ನೆಡೆಗೆ ಸೆಳೆಯುತ್ತದೆ. ಒಮ್ಮೆ ಇವರ ಸಹವಾಸಕ್ಕೆ ಬಿದ್ದರಂತೂ ಮುಗಿಯಿತು ಕಥೆ. ನಶೆಯ ಚಟವೇ ಅಂತಹದ್ದು. ಒಮ್ಮೆ ನಶೆಗೆ ಬಿದ್ದರೆ ಆ ಚಟದಿಂದ ಬೇಗನೇ ಹೊರಬರಲು ಅಸಾಧ್ಯ. ಅಪ್ಪನಿಗೆ ಊರಿನಲ್ಲಿ ಒಳ್ಳೆಯ ಸ್ಥಾನಮಾನ ಇದ್ದರೂ ಮಗ ದುಷ್ಟ ಕೂಟಕ್ಕೆ ಬಿದ್ದು ತಮ್ಮ ಕುಟುಂಬಿಕರ ಮಾನ ಮರ್ಯಾದೆ ಬೀದಿಗೆ ಹಾಕುತ್ತಾನೆ. ಇದೀಗ ಗುರುಪುರ ಕೈಕಂಬ ಪೇಟೆಯ ಆಸುಪಾಸಿನ ಕೆಲವು ಅಡ್ಡೆಗಳಲ್ಲಿ ನಡೆಯುತ್ತಿರುವುದು ಇದೇ. ಒಳ್ಳೆಯ ಕುಟುಂಬದ ಹಿನ್ನೆಲೆ ಹೊಂದಿರುವ ಯುವಕರು ಡ್ರಗ್ಸ್ ನಶೆಗೆ ಸಿಲುಕಿ ಬಲಿಪಶು ಆಗುತ್ತಿದ್ದಾರೆ. ಪೊಳಲಿ ದ್ವಾರದ ಬಳಿ, ಕೈಕಂಬ ಜಂಕ್ಷನ್, ಕೈಕಂಬ ಪೇಟೆಯ ಹತ್ತಿರದ ಮೊಡೆಲ್ ರೆಸ್ಟೋರೆಂಟ್ ಬಳಿ ಇಂತಹ ಕೆಲವು ದುಷ್ಟ ಕೂಟಗಳ ಸದಸ್ಯರು ಠಳಾಯಿಸುತ್ತಿದ್ದಾರೆ. ಸಂಬಂಧ ಪಟ್ಟ ಇಲಾಖೆಯ ಭಯ ಇಲ್ಲದೇ ಇರುವುದರಿಂದ ತಮ್ಮ ವ್ಯವಹಾರವನ್ನು ಸುಲಭವಾಗಿ ನಡೆಸುತ್ತಿದ್ದಾರೆ. ಕೆಲವೊಂದು ವೈಟ್ ಕಾಲರ್ ಎಣಿಸಿಕೊಂಡಿರುವ ಇಲ್ಲಿನ ವ್ಯಕ್ತಿಗಳು ಇಂತಹ ದುಷ್ಟ ಕೂಟಕ್ಕೆ ಸಾಥ್ ಕೊಡುತ್ತಿದ್ದಾರೆ ಅನ್ನುವ ಆತಂಕಕಾರಿ ವಿಚಾರಗಳು ಹೊರಬೀಳುತ್ತಿದೆ. ಅಕ್ಷರಶಃ ಕೈಕಂಬ ಪೇಟೆ ಡ್ರಗ್ಸ್ ಪೆಡ್ಲರ್ ಗಳ ಅಡ್ಡೆಯಾಗಿ ಬದಲಾಗುವ ಮುಂಚೆ ಸಂಬಂಧ ಪಟ್ಟವರು ಎಚ್ಚೆತ್ತುಕೊಳ್ಳಬೇಕಾಗಿದೆ. ಇಲ್ಲಿನ ನಾಗರೀಕರು ಇದು ಪೊಲೀಸರ ಕೆಲಸ ಅಂದುಕೊಂಡು ಸೋಮಾರಿತನ ತೋರಿದರೆ ಅಪಾಯ ಕಟ್ಟಿಟ್ಟ ಬುತ್ತಿ. ತಮ್ಮ ಮಕ್ಕಳ ಭವಿಷ್ಯ ಗೋವಿಂದ. ನಾಗರೀಕರು ಎಚ್ಚೆತ್ತುಕೊಳ್ಳಬೇಕು.

ಮಂಗಳೂರು ಕಮೀಷನರ್ ಸಾಹೇಬ್ರು, ಪಣಂಬೂರು ಉಪ-ವಿಭಾಗದ ಎಸಿಪಿ ಸಾಹೇಬ್ರು ದಕ್ಷರು, ಪ್ರಾಮಾಣಿಕರು. ಅವರು ಜಿಲ್ಲೆಗೆ ಎಂಟ್ರಿ ಕೊಡುತ್ತಿದ್ದಂತೆ ಡ್ರಗ್ಸ್ ಪೆಡ್ಲರ್ ಗಳನ್ನು, ಡ್ರಗ್ಸ್ ದಂಧೆಕೋರರನ್ನು ಮಟ್ಟ ಹಾಕಿದ್ದಾರೆ. ಡ್ರಗ್ಸ್ ದಂಧೆಕೋರರು ನಗರ ಪ್ರದೇಶಗಳನ್ನು ಬಿಟ್ಟು ಸೇಫ್ ಜಾಗ ನೋಡಿಕೊಳ್ಳುತ್ತಿದ್ದಾರೆ. ಆದರೆ ಕೆಲವರು ಇಲ್ಲಿ ಸೇರಿಕೊಂಡಿದ್ದಾರೆ. ಈ ಹಿಂದೆ ಗುರುಪುರ ಕೈಕಂಬ ಪೇಟೆಯಲ್ಲಿ ಪೊಲೀಸ್ ಔಟ್ ಪೋಸ್ಟ್ ಎಂಬುದೊಂದು ಇತ್ತು. ಆದರೆ ಈಗ ಅದು ನಾಪತ್ತೆಯಾಗಿದೆ. ಇಲ್ಲಿ ಮದ್ಯರಾತ್ರಿಯಾದರೂ ಬಂದ್ ಮಾಡದ ಹೋಟೆಲುಗಳಿವೆ. ಇವರಿಗೆ ಇಲಾಖೆಯ ಕಾನೂನು ಅನ್ವಯವಿಲ್ಲದಂತೆ ತೋರುತ್ತಿದೆ.

ದಾರಿ ತಪ್ಪಿದ ಕೆಲವು ಯುವಕರು ರಾತ್ರಿ ಹೊತ್ತಲ್ಲಿ ಗುಂಪು ಸೇರಿ, ಸಮಾಜ ಬಾಹಿರ ಚಟುವಟಿಕೆ ನಿರ್ವಹಿಸುವ ಮುನ್ನ ಸಂಬಂಧ ಪಟ್ಟವರು ಎಚ್ಚೆತ್ತುಕೊಳ್ಳಬೇಕು. ಕೈಕಂಬ ಪರಿಸರದಲ್ಲಿ ರಾತ್ರಿಹೊತ್ತು ಪೊಲೀಸರು ಗಸ್ತು ತಿರುಗುವ ಕೆಲಸ ಮಾಡಬೇಕು. ಇಲ್ಲದಿದ್ದಲ್ಲಿ ಇದನ್ನೇ ಎನ್ ಕ್ಯಾಶ್ ಮಾಡಿಕೊಂಡಿರುವ ಪರವೂರಿನ ಕೆಲವು ಡ್ರಗ್ಸ್ ಪೆಡ್ಲರ್ ಗಳು ಇಲ್ಲಿ ಬೀಡು ಬಿಟ್ಟು, ಇಲ್ಲಿನ ಯುವಕರಿಗೆ ಆಮಿಷ ತೋರಿಸಿ ತಮ್ಮ ದಂಧೆಯನ್ನು ನಿರಂತರವಾಗಿ ನಡೆಸುವ ಕೆಲಸ ಮಾಡುತ್ತಾರೆ. ಕೆಲವು ದಿನಗಳ ಹಿಂದೆಯಷ್ಟೇ ಮಂಜೇಶ್ವರ ಭಾಗದಲ್ಲಿ ಡ್ರಗ್ಸ್ ಪೆಡ್ಲರ್ ಗಳನ್ನು ಪೊಲೀಸರು ಬಂಧಿಸಿದಾಗ ಆ ದಂಧೆಯಲ್ಲಿ ಈ ಭಾಗದ ಯುವಕರು ಭಾಗಿಯಾಗಿ ಸಿಕ್ಕಿಬಿದ್ದಿರುವುದು, ಗಂಜಿಮಠ ಪರಿಸರದಲ್ಲಿ ಗಾಂಜಾದೊಂದಿಗೆ ಅನ್ಯ ರಾಜ್ಯದ ಯುವಕನನ್ನು ಪೊಲೀಸರು ಬಂಧಿಸಿರುವುದು ಕೂಡ ಕಂಡುಬಂದಿದೆ. ಇದು ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ. ಮೇಲಾಧಿಕಾರಿಗಳು ದಕ್ಷರಾದರೂ ಅವರ ಕೈಕೆಳಗಿನ ಅಧಿಕಾರಿಗಳು, ಸಿಬ್ಬಂದಿಗಳು ಕೂಡ ದಕ್ಷರಿದ್ದರೆ ಮಾತ್ರ ಇಂತಹ ದಂಧೆಗೆ ಕಡಿವಾಣ ಹಾಕಬಹುದು. ಆದರೆ ಗುರುಪುರ ಕೈಕಂಬ ವ್ಯಾಪ್ತಿಯಲ್ಲಿ ಪೊಲೀಸರ ನಿರ್ಲಕ್ಷ ಡ್ರಗ್ಸ್ ಪೆಡ್ಲರ್ ಗಳು ರಾತ್ರಿಯಾಗುತ್ತಿದ್ದಂತೆ ಯಾರ ಭಯವೂ ಇಲ್ಲದೆ ತಮ್ಮ ದಂಧೆಯನ್ನು ಸಲೀಸಾಗಿ ನಡೆಸಲು ಸಹಕಾರಿಯಾಗಿದೆ.

ಗುರುಪುರ ಕೈಕಂಬ ಪ್ರದೇಶದ ಹಿನ್ನೆಲೆ ಭಯಾನಕವಾದುದು. ಈ ಹಿಂದೆ ಮತೀಯ ವಿಚಾರಕ್ಕೆ ಹಲವರ ನೆತ್ತರು ಹರಿದಿದೆ. ಫಲ್ಗುಣಿ ತೀರದ ರಕ್ತ ಚರಿತ್ರೆಯೇ ಭೀಭತ್ಸವಾದುದು. ಮಂಗಳೂರು ನಗರಕ್ಕೆ ಕೋಮು ಗಲಭೆಯ ಕಳಂಕಿತ ಪಟ್ಟ ಅಂಟಲು ಗುರುಪುರ ಕೈಕಂಬ ಪ್ರದೇಶದ ಕೊಡುಗೆ ಏನೂ ಸಾದಾರಣವಲ್ಲ. ಪ್ರೇಮ ಪ್ರಕರಣದ ಹಿನ್ನೆಲೆಯಲ್ಲಿ ಇಪ್ಪತ್ತೈದು ವರ್ಷಗಳ ಹಿಂದೆ ಇಲ್ಲಿ ರಿಕ್ಷಾ ಚಾಲಕನ ಹೆಣ ಉರುಳಿತ್ತು. ಪೊಳಲಿ ದ್ವಾರದ ಸಮೀಪ ಜಾತ್ರೆಗೆಂದು ತೆರಳಿದ್ದ ಮಲ್ಲೂರು ಹಮೀದ್ ನನ್ನು ಹತ್ಯೆ ಮಾಡಲಾಗಿತ್ತು. ರಾಜ್ಯದಾದ್ಯಂತ ಸಂಚಲನ ಸೃಷ್ಟಿಸಿದ್ದ ತಾ.ಪಂ ಅಧ್ಯಕ್ಷ ಜಬ್ಬಾರ್ ಮಲ್ಲೂರು ಹತ್ಯೆಗೆ ಮುಹೂರ್ತ ಫಿಕ್ಸ್ ಆಗಿದ್ದೇ ಗುರುಪುರ ಕೈಕಂಬದಲ್ಲಿ. ಆದೇ ರೀತಿ ಜಬ್ಬಾರ್ ಹತ್ಯೆಗೆ ರಿವೇಂಜಾಗಿ ಪೊಳಲಿ ಅನಂತು ಹೆಣ ಬಿದ್ದಿದ್ದು ಕೈಕಂಬ ಪೊಳಲಿ ದ್ವಾರದ ಬಳಿ. ಅದೇ ರೀತಿ ಕಬೀರ್, ಕ್ಯಾಂಡಲ್ ಸಂತು ಹೀಗೆ ಪಟ್ಟಿ ಉದ್ದ ಸಾಗುತ್ತದೆ. ರಿಕ್ಷಾ ಚಾಲಕ ರವೀಂದ್ರ ಹತ್ಯಾಯತ್ನ ಪ್ರಕರಣ ಕೂಡ ಇದೇ ಭಾಗದಲ್ಲಿ ನಡೆದಿರುವುದು. ಇಂದು ಕೈಕಂಬ ಶಾಂತವಾಗಿದೆ. ಕೈಕಂಬದ ಜನತೆ ಶಾಂತಿ ಬಯಸುತ್ತಿದ್ದಾರೆ. ಸಂಬಂಧ ಪಟ್ಟವರು ಮುಂಜಾಗ್ರತೆ ವಹಿಸದಿದ್ದಲ್ಲಿ ಯಾವಾಗ ಸ್ಪೋಟಗೊಳ್ಳುತ್ತದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ. ಸಮಾಜ ವಿರೋಧಿ ಕೃತ್ಯದಲ್ಲಿ ಭಾಗಿಯಾಗುವವರಿಗೆ ಪೊಲೀಸ್ ಇಲಾಖೆ ಭಯ ಮೂಡಿಸದೇ ಇದ್ದರೆ ಇನ್ನಷ್ಟು ಸಮಾಜ ಬಾಹಿರ ಕೃತ್ಯದಲ್ಲಿ ಭಾಗಿಯಾಗಲು ಧೈರ್ಯ ಪ್ರದರ್ಶಿಸುತ್ತಾರೆ. ಈ ಭಾಗದ ಮತೀಯ ರಕ್ತ ಚರಿತ್ರೆಯ ಹಿಂದೆ ಗಾಂಜಾ ದ ಪ್ರಭಾವವೂ ಇತ್ತು. ಇಲಾಖೆ ನಿರ್ಲಕ್ಷ್ಯ ವಹಿಸಿದರೆ ಅನಾಹುತಕ್ಕೆ ಕಾರಣವಾಗಬಹುದು. ಇನ್ನಾದರೂ ಪೊಲೀಸ್ ಇಲಾಖೆ ಇಲ್ಲಿ ಬೀಡು ಬಿಟ್ಟಿರುವ ಡ್ರಗ್ಸ್ ದಂಧೆಕೋರರನ್ನು ಮಟ್ಟ ಹಾಕುವ ಕೆಲಸ ಮಾಡಬೇಕಾಗಿದೆ. ರಾತ್ರಿ ಹೊತ್ತು ಅನಾವಶ್ಯಕವಾಗಿ ತಿರುಗಾಡುವ ಯುವಕರಿಗೆ ಪೊಲೀಸ್ ಇಲಾಖೆ ಟ್ರೀಟ್ ಮೆಂಟ್ ನೀಡುವ ಕೆಲಸ ಮಾಡಬೇಕಾಗಿದೆ. ಇಲ್ಲವಾದರೆ ಗುರುಪುರ ಕೈಕಂಬ ಪೇಟೆ ಡ್ರಗ್ಸ್ ಸಿಟಿ ಆದರೂ ಅಚ್ಚರಿಯಿಲ್ಲ. ರಕ್ತಪಾತ ಮತ್ತೆ ವಿಜೃಂಭಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.