ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಮತ್ತೊಂದು ಟಿ.ಡಿ.ಆರ್ ಹಗರಣದ ವಾಸನೆ

ಕರಾವಳಿ

‘ಭೂ’ದಂಧೆಕೋರರು, ರಿಯಲ್ ಎಸ್ಟೇಟ್, ಬಿಲ್ಡರ್ ಲಾಬಿಗಳು, ಭ್ರಷ್ಟ ರಾಜಕಾರಣಿಗಳು, ಆಧಿಕಾರಿಗಳ ಪಾಲಿಗೆ ಸಮೃದ್ದ ಹುಲ್ಲುಗಾವಲಾಗಿ ಮಾರ್ಪಟ್ಟಿದೆ: ಮುನೀರ್ ಕಾಟಿಪಳ್ಳ

ಮಂಗಳೂರು ನಗರದಲ್ಲಿ ಖಾಸಗಿ ಜಮೀನು ಸ್ವಾಧೀನಕ್ಕೆ ಪ್ರತಿಯಾಗಿ ನಗರಪಾಲಿಕೆ ಟಿ‌.ಡಿ.ಆರ್ ನೀಡುವುದು ದೊಡ್ಡ ದಂಧೆಯಾಗಿ ಬದಲಾಗಿದೆ. ರಸ್ತೆ ಅಗಲೀಕರಣ, ತುರ್ತು ಅಗತ್ಯದ ಜಮೀನುಗಳ ಸ್ವಾಧೀನಕ್ಕೆ ಹಣದ ಬದಲಿಗೆ ನಗರ ಪಾಲಿಕೆಗಳು ಟಿ.ಡಿ.ಆರ್ ನೀಡುವುದು ಸರಕಾರದ ಒಂದು ಪ್ರಾಯೋಗಿಕ ಕ್ರಮ. ಮಂಗಳೂರಿನಲ್ಲಿ ಅದು ಭೂ ದಂಧೆಕೋರರು, ರಿಯಲ್ ಎಸ್ಟೇಟ್, ಬಿಲ್ಡರ್ ಲಾಬಿಗಳು, ಭ್ರಷ್ಟ ರಾಜಕಾರಣಿಗಳು, ಆಧಿಕಾರಿಗಳ ಪಾಲಿಗೆ ಸಮೃದ್ದ ಹುಲ್ಲುಗಾವಲಾಗಿ ಮಾರ್ಪಟ್ಟಿದೆ. ನಗರ ಪಾಲಿಕೆಗೆ ಸೇರಬೇಕಾದ ಸಂಪತ್ತು ಬಲಾಢ್ಯ ಲಾಬಿಗಳ ಪಾಲಾಗುತ್ತಿವೆ.

ತಿಂಗಳುಗಳ ಹಿಂದೆ ಮಂಗಳೂರು ಅಭಿವೃದ್ದಿ ಪ್ರಾಧಿಕಾರದ ಕಮೀಷನರ್ ಇದೇ ಟಿಡಿಆರ್ ಪ್ರಕರಣವೊಂದರಲ್ಲಿ ಲಂಚ ಪಡೆದ ಆರೋಪದಲ್ಲಿ ಜೈಲು ಸೇರಿದಾಗ ಈ ವಾಸನೆ ಅರಿತ ನಾವು ಆ 11 ಎಕರೆ ನಿರುಪಯೋಗಿ ಜಮೀನಿಗೆ ನೂರು ಕೋಟಿ ಮೌಲ್ಯದ ಟಿ.ಡಿ.ಆರ್ ನೀಡುವ ಹಗರಣ ಬಯಲಿಗೆಳೆದು ಟಿ.ಡಿ.ಆರ್ ಫೈಲ್ ಗೆ ತಡೆ ನೀಡಿಸುವಲ್ಲಿ ಯಶಸ್ವಿಯಾಗಿದ್ದೆವು.

ಈಗ ಮತ್ತೊಂದು ಅಂತಹದ್ದೇ ಟಿ.ಡಿ.ಆರ್ ಹಗರಣಕ್ಕೆ ಪಾಲಿಕೆಯಲ್ಲಿ ವೇದಿಕೆ ಸಿದ್ದಗೊಂಡಿದೆ ಎಂಬ ಮಾಹಿತಿ ಹೊರಬಿದ್ದಿದೆ. ನಗರದ ಹೊರವಲಯ ಕುಂಜತ್ತಬೈಲ್ ಹಾಗೂ ಪದವು ಗ್ರಾಮದಲ್ಲಿ ಒಟ್ಟು ಎಂಟು ಎಕರೆ ಹೊಂಡ ಗುಂಡಿಗಳಿಂದ ಕೂಡಿದ ಬಲಾಢ್ಯ ಬಿಲ್ಡರ್ ಗಳಿಗೆ ಸೇರಿದ ಜಮೀನಿಗೆ ಟಿ.ಡಿ.ಆರ್ ನೀಡುವ ಫೈಲ್ ನಾಳೆ ನಡೆಯಲಿರುವ ನಗರ ಪಾಲಿಕೆಯ ಸಾಮಾನ್ಯ ಸಭೆಯ ಅಜೆಂಡಾಗೆ ಸೇರಿದೆ ಎಂದು ವರದಿಯಾಗಿದೆ. ಈ ಫೈಲ್ ಗೆ ಅತ್ಯಂತ ತುರ್ತು ಪ್ರಕರಣಗಳಲ್ಲಿ ನೀಡುವ ರೀತಿ ಪೂರ್ವಭಾವಿ ಅನುಮತಿ ನೀಡಿ ಈಗ ಕಾಟಾಚಾರದ ಅನುಮೋದನೆಗಾಗಿ ಪಾಲಿಕೆಯ ಸಾಮಾನ್ಯ ಸಭೆಗೆ ತರಲಾಗುತ್ತಿದೆ ಎಂಬ ಆರೋಪವಿದೆ.

ಅಷ್ಟಕ್ಕೂ ಬಿಜೆಪಿ ಆಡಳಿತದ ನಗರ ಪಾಲಿಕೆ ಈ ಜಮೀನು ಟಿ.ಡಿ.ಆರ್ ಅಡಿ ಖರೀದಿಸುತ್ತಿರುವುದು ಬಡವರಿಗೆ ವಸತಿ ಯೋಜನೆ ರೂಪಿಸಲಿಕ್ಕಂತೆ.

ಅಬ್ಬಬ್ಬಾ.. ಬಡವರ ಮೇಲೆ ಇವರಿಗೆಲ್ಲಾ ಎಂತಹಾ ಕಾಳಜಿ.! ಇಡ್ಯಾ ಗ್ರಾಮದಲ್ಲಿ ಏಳೆಂಟು ವರ್ಷಗಳಿಂದ ಕುಂಟುತ್ತಿರುವ ವಸತಿ ಯೋಜನೆ ಪೂರ್ಣಗೊಳಿಸುವ ಯೋಗ್ಯತೆ ಬಿಜೆಪಿ ಪಾಲಿಕೆಗೆ ಇಲ್ಲ. ಈಗ, ಮನೆ ರಹಿತರಿಗೆ ವಸತಿ ಒದಗಿಸುವ ಯಾವ ಯೋಜನೆಯೂ ಇಲ್ಲದೆ, ಯಾವ ಶತಮಾನದಲ್ಲಿ ಬಡವರಿಗೆ ಮನೆ ನಿರ್ಮಿಸಿಕೊಡುವುದು ಎಂಬ ಅಜೆಂಡಾವೂ ಇಲ್ಲದೆ ತೀರಾ ತುರ್ತು ಎಂಬಂತೆ ಪೂರ್ವ ಭಾವಿ ಅನುಮತಿಯೊಂದಿಗೆ ಟಿ.ಡಿ.ಆರ್ ನೀಡಲು ಮುಂದಾಗಿದ್ದಾರೆ.

ಅಷ್ಟಕ್ಕೂ, ಈ ಜಮೀನು ವಸತಿ ಯೋಜನೆಗೆ ಉತ್ತಮವಾಗಿದ್ದರೆ, ಇದರ ಮಾಲಕರಾದ ಪ್ರಖ್ಯಾತ ಬಿಲ್ಡರ್ ಗಳು ತಾವೇ ಸ್ವತಹ ವಸತಿ ಸಂಕೀರ್ಣ ನಿರ್ಮಿಸದೆ ಅದನ್ನು ಪಾಲಿಕೆಗೆ ಟಿ.ಡಿ.ಆರ್ ಅಡಿ ನೀಡುವ ಉದಾರತೆ ಯಾಕೆ ತೋರುತ್ತಿದ್ದರು ?

ಇದೇ ಜಮೀನು ಮೂರ್ನಾಲ್ಕು ವರ್ಷಗಳ ಹಿಂದೆ “ಐಟಿ ಪಾರ್ಕ್” ನಿರ್ಮಾಣದ ಹೆಸರಿನಲ್ಲಿ ಟಿ.ಡಿ.ಆರ್ ಡೀಲ್ ಗೆ ಬಂದಿತ್ತು. ಆಗ ನಾಗರಿಕ ಸಮಾಜ ಬಲವಾದ ಧ್ವನಿ ಎತ್ತಿದ ಕಾರಣ ಆ ಪ್ರಸ್ತಾಪ ಕೈ ಬಿಡಲಾಯಿತು. ಪಾಲಿಕೆಯ ಸಂಪತ್ತು ಉಳಿದಿತ್ತು.

ಈಗ ಬಡವರಿಗೆ ವಸತಿ ಯೋಜನೆಯಡಿ ಮತ್ತೆ ಅದು ಟಿ.ಡಿ.ಆರ್ ಗಾಗಿ ಎದ್ದು ನಿಂತಿದೆ ಎನ್ನಲಾಗಿದೆ. ತುರ್ತು ಯೋಜನೆ ಎಂಬಂತೆ ಪಾಲಿಕೆ ಸಭೆಗೂ ಮುಂಚಿತವಾಗಿ ಪೂರ್ವಭಾವಿ ಅನುಮತಿಯನ್ನೂ ಪಡೆದುಕೊಂಡಿದೆ ಅಂದರೆ ಡೀಲ್ ದೊಡ್ಡದೇ ಇರಬೇಕು. ಪೂರ್ವಭಾವಿ ಅನುಮತಿ ಪಡೆಯಬೇಕಾದರೆ ಆಡಳಿತ ಬಿಜೆಪಿಯ ಜೊತೆಗೆ ವಿಪಕ್ಷ ಕಾಂಗ್ರೆಸ್ಸೂ ಕೈ ಜೋಡಿಸಿರಬೇಕು. ಹಾಗಲ್ಲದಿದ್ದರೆ ಪೂರ್ವಭಾವಿ ಅನುಮತಿ ಸಿಗುವುದು ಅಸಾಧ್ಯ.

ಯಾವುದಕ್ಕೂ ನಾಳೆ ಪಾಲಿಕೆ ಸಭೆಯಲ್ಲಿ ಎಲ್ಲವೂ ಸ್ಪಷ್ಟವಾಗಲಿದೆ. ವಿಪಕ್ಷ ಕಾಂಗ್ರೆಸ್ಸು ಬಿಜೆಪಿಯ ಈ ಜನವಿರೋಧಿ “ಡೀಲ್” ಅನ್ನು ಬಲವಾಗಿ ವಿರೋಧಿಸುತ್ತದೆ ಎಂಬುದು ನಮ್ಮ ನಿರೀಕ್ಷೆ. ಹಾಗಾಗದಿದ್ದಲ್ಲಿ ಹೋರಾಟ ಖಚಿತ. ದೆಹಲಿಯಲ್ಲಿ, ಪಾರ್ಲಿಮೆಂಟ್ ನಲ್ಲಿ ಕಾಂಗ್ರೆಸ್, ಬಿಜೆಪಿ ಗುದ್ದಾಡುತ್ತಿರುವಾಗ, ಮಂಗಳೂರು ಪಾಲಿಕೆಯಲ್ಲಿ ಪರಸ್ಪರ ಮುದ್ದಾಡಲಾರರು ಎಂದು ನಾವೆಲ್ಲರೂ ಆಶಿಸುವ, ಟಿ.ಡಿ.ಆರ್ ದಂಧೆಯ ವಿರುದ್ಧ ಒಂದಾಗಿ ಧ್ವನಿ ಎತ್ತುವ.