ಜನನ, ಮರಣದ ನೋಂದಣಿಯನ್ನು ಇನ್ನು ಮುಂದೆ ಗ್ರಾಮಪಂಚಾಯತಿಯಲ್ಲೇ ಆರಂಭಿಸುವ ಪ್ರಕ್ರಿಯೆ ಇಂದಿನಿಂದ (ಜುಲೈ 1) ಜಾರಿಗೆ ಬರಲಿದೆ. ಗ್ರಾಮೀಣ ಪ್ರದೇಶದಲ್ಲಿ ಜನನ, ಮರಣ ನೋಂದಣಿ ವ್ಯವಸ್ಥೆಗೆ ಬಲ ತುಂಬುವ ಜತೆಗೆ 30 ದಿನದೊಳಗೆ ನೋಂದಾಯಿಸಲು ಅನುಕೂಲವಾಗುವಂತೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳನ್ನು ಜನನ, ಮರಣ ಉಪ ನೋಂದಣಾಧಿಕಾರಿಗಳನ್ನಾಗಿ ನೇಮಿಸಲಾಗಿದ್ದು ಜುಲೈ 1 ರಿಂದ ಆ ಜವಾಬ್ದಾರಿಯನ್ನು ನಿಭಾಯಿಸಲಿದ್ದಾರೆ. ಪೂರ್ವಭಾವಿಯಾಗಿ ಎಲ್ಲಾ ಜಿಲ್ಲಾ ಪಂಚಾಯಿತಿಗಳಲ್ಲಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು, ಜನನ/ಮರಣ ಉಪನೋಂದಣಾಧಿಕಾರಿಗಳು, ಗ್ರಾಮ ಪಂಚಾಯಿತಿ ಡೇಟಾ ಎಂಟ್ರಿ ಆಪರೇಟರ್ ಗಳಿಗೆ ಇ-ಜನ್ಮ ತಂತ್ರಾಶದ ಬಗ್ಗೆ ತರಬೇತಿ ನೀಡಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

21 ದಿನಗಳೊಳಗೆ ನೋಂದಾಯಿಸಿದರೆ ಪ್ರಮಾಣ ಪತ್ರ ಉಚಿತ ವಿತರಣೆ. 21 ದಿನಗಳ ಬಳಿಕ 30 ದಿನದೊಳಗೆ ನೋಂದಾಯಿಸಿದರೆ 2 ರೂಪಾಯಿ ಶುಲ್ಕ. 30 ದಿನಗಳ ಬಳಿಕ ಒಂದು ವರ್ಷದೊಳಗಾದರೆ ತಹಶೀಲ್ದಾರರ ಪತ್ರ ಲಗತ್ತಿನ ಜತೆ 5 ರೂಪಾಯಿ ಶುಲ್ಕ. ಒಂದು ವರ್ಷ ನಂತರವಾದರೆ ಮೊದಲನೇ ವರ್ಗದ ದಂಡಾಧಿಕಾರಿ ಅಥವಾ ಮಹಾ ಪ್ರಾಂತ ದಂಡಾಧಿಕಾರಿ ಆದೇಶ ಪತ್ರ ಲಗತ್ತು 10 ರೂಪಾಯಿ ಶುಲ್ಕ.
