ಕಾಂಗ್ರೆಸ್ ನಲ್ಲಿ ನಾಯಕತ್ವದ ಬದಲಾವಣೆ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಬಿಜೆಪಿಯಲ್ಲೂ ವಿಪಕ್ಷ ನಾಯಕನ ಬದಲಾವಣೆಗೆ ತೆರೆಮರೆಯಲ್ಲೇ ಕಸರತ್ತು.!

ರಾಜ್ಯ

ಡಿ.ಕೆ. ಶಿವಕುಮಾರ್‌ ಅವರಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕಿತ್ತುಕೊಳ್ಳಬೇಕೆಂಬ ಕಾರಣಕ್ಕೆ ಸಮುದಾಯವಾರು ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಸಬೇಕೆಂಬ ಕೂಗು ಎಬ್ಬಿಸಲಾಗಿದೆ ಎಂಬ ಚರ್ಚೆ ಕಾಂಗ್ರೆಸ್‌ನಲ್ಲಿ ಬಲವಾಗುತ್ತಿದೆ.
‘ಒಬ್ಬರಿಗೆ ಒಂದೇ ಹುದ್ದೆ’ ಎಂಬುದು ಕಾಂಗ್ರೆಸ್‌ ನೀತಿ. ಆದರೆ, ರಾಜ್ಯದಲ್ಲಿ ಪಕ್ಷದ ಹೊಣೆಗಾರಿಕೆ ಹೊತ್ತಿರುವವರೇ ಈ ನೀತಿಯನ್ನು ಒಡೆದು ಆಳುತ್ತಿದ್ದಾರೆ. ಇದು ಸರಿಯಲ್ಲ. ಹೀಗಾಗಿ, ಡಿ.ಕೆ. ಶಿವಕುಮಾರ್‌ ಅವರು ಉಪ ಮುಖ್ಯಮಂತ್ರಿ ಹುದ್ದೆ ಇಲ್ಲವೇ ಪಕ್ಷದ ಅಧ್ಯಕ್ಷರ ಹುದ್ದೆ ಯಾವುದಾದರು ಒಂದರಲ್ಲಿ ಮಾತ್ರ ಮುಂದುವರಿಯಬೇಕು ಎನ್ನುವುದು ಸಿದ್ದರಾಮಯ್ಯ ಆಪ್ತ ಬಣದ ಸಚಿವರು, ಶಾಸಕರ ಪ್ರತಿಪಾದನೆ. ಈ ಪೈಕಿ ಕೆಲವರು, ಹೈಕಮಾಂಡ್‌ ನಾಯಕರ ಮೇಲೆ ಒತ್ತಡವನ್ನೂ ಹೇರುತ್ತಿದ್ದಾರೆ ಎನ್ನಲಾಗಿದೆ. ಉಪ ಮುಖ್ಯಮಂತ್ರಿ ಹುದ್ದೆಗೆ ಬೇಡಿಕೆ ಇಡುತ್ತಿರುವ ವರ್ಗ, ಕೆಪಿಸಿಸಿ ಅಧ್ಯಕ್ಷ ಹುದ್ದೆ ಮೇಲೆ ಕಣ್ಣಿಟ್ಟಿರುವುದೇ ಕಾರಣ ಎಂಬ ಊಹಾಪೋಹಗಳೂ ಇವೆ.

ಲೋಕಸಭೆ ಚುನಾವಣೆಗೆ ಮೊದಲೇ ಮೂರು ಉಪ ಮುಖ್ಯಮಂತ್ರಿ ಹುದ್ದೆಯನ್ನು ಸೃಷ್ಟಿಸ ಬೇಕೆಂದು ಪಟ್ಟು ಹಿಡಿದಿದ್ದ ಸಹಕಾರ ಸಚಿವ ಕೆ.ಎನ್‌. ರಾಜಣ್ಣ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮಾಡಬೇಕು ಎಂದು ಪರೋಕ್ಷವಾಗಿ ಆಗ್ರಹಿಸಿದ್ದಾರೆ. ಅಲ್ಲದೆ, ‘ಕೆಪಿಸಿಸಿ ಅಧ್ಯಕ್ಷರನ್ನು ಬದಲಾವಣೆ ಮಾಡುವುದಾದರೆ ನಾನೂ ಕೂಡ ಆಕಾಂಕ್ಷಿ. ಅದಕ್ಕಾಗಿ ಸಚಿವ ಸ್ಥಾನ ಬಿಟ್ಟು ಕೆಲಸ ಮಾಡಲು ಸಿದ್ಧ’ ಎಂದಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೂಲಕ ರಾಜ್ಯ ಕಾಂಗ್ರೆಸ್‌ನ್ನು ಹಿಡಿದಲ್ಲಿಟ್ಟುಕೊಂಡಿರುವ ಡಿ.ಕೆ ಶಿವಕುಮಾರ್, ಮುಖ್ಯಮಂತ್ರಿ ಗಾದಿ ಮೇಲೆ ಕಣ್ಣಿಟ್ಟಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿದರಷ್ಟೆ ‘ಅಧಿಕಾರ ಹಂಚಿಕೆ’ ಸೂತ್ರದಡಿ ಆ ಗಾದಿಗೇರಲು ಸಾಧ್ಯ ಎನ್ನುವುದು ಅವರಿಗೂ ಗೊತ್ತಿದೆ. ಅದಕ್ಕೆ ಪೂರಕವಾಗಿ ಧ್ವನಿ ಎತ್ತಿರುವ ಚನ್ನಗಿರಿ ಶಾಸಕ ಬಸವರಾಜ್ ಶಿವಗಂಗಾ, ‘ಡಿ.ಕೆ. ಶಿವಕುಮಾರ್‌ ಅವರನ್ನು ಮುಖ್ಯಮಂತ್ರಿ ಮಾಡಿ, ನಂತರ ಒಂದು ಡಜನ್ ಉಪ ಮುಖ್ಯಮಂತ್ರಿ ಮಾಡಲಿ. ಕೆಪಿಸಿಸಿ ಅಧ್ಯಕ್ಷರನ್ನು ಮುಖ್ಯಮಂತ್ರಿ ಮಾಡುವುದು ಪದ್ಧತಿ’ ಎಂದಿದ್ದಾರೆ.

ಡಿ.ಕೆ. ಶಿವಕುಮಾರ್‌ ಅವರನ್ನು ಬದಲಿಸುವುದಾದರೆ, ಆ ಸ್ಥಾನವನ್ನು ತಮ್ಮ ಸಮುದಾಯಕ್ಕೆ ನೀಡಬೇಕೆಂಬ ದಾಳವನ್ನು ಲಿಂಗಾಯತ ನಾಯಕರು ಉರುಳಿಸಿದ್ದಾರೆ. ಸಚಿವರಾದ ಈಶ್ವರ ಖಂಡ್ರೆ, ಎಂ.ಬಿ. ಪಾಟೀಲ ಅವರ ಹೆಸರನ್ನೂ ಮುನ್ನಲೆಗೆ ಬಿಟ್ಟಿದ್ದಾರೆ.

ಕಾಂಗ್ರೆಸ್ ನಲ್ಲಿ ನಾಯಕತ್ವದ ಬದಲಾವಣೆ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಬಿಜೆಪಿಯಲ್ಲೂ ವಿಪಕ್ಷ ನಾಯಕನ ಬದಲಾವಣೆಗೆ ತೆರೆಮರೆಯಲ್ಲೇ ಕಸರತ್ತು ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಲೋಕಸಭಾ ಚುನಾವಣೆಯಲ್ಲಿ ಕಳಪೆ‌ ಸಾಧನೆ ತೋರಿದ್ದಾರೆ ಎಂಬ ಆರೋಪ ಮುಂದಿಟ್ಟು ಮತ್ತೆ ಬಿ.ಎಲ್ ಸಂತೋಷ್ ಬಣ ಸಕ್ರಿಯವಾಗಿದೆ ಎನ್ನಲಾಗುತ್ತಿದ್ದು, ವಿಜಯೇಂದ್ರ ಸ್ಥಾನಕ್ಕೂ ಕುತ್ತು ಬಂದಿದೆ ಎಂಬ ಚರ್ಚೆ ಶುರುವಾಗಿದೆ.ವಿಜಯೇಂದ್ರ ಸ್ಥಾನಕ್ಕೆ ಸಿ.ಟಿ ರವಿಯವರನ್ನು ಆಯ್ಕೆ ಮಾಡುವ ಸಾಧ್ಯತೆಗಳ ಬಗ್ಗೆ ಬಿಜೆಪಿ ವಲಯದಲ್ಲಿ ಮಾತುಗಳು ಶುರುವಾಗಿವೆ. ಸರ್ಕಾರದ ವಿರುದ್ಧ ಸಮರ್ಪಕವಾಗಿ ದನಿಯೆತ್ತದ ಕಾರಣದಿಂದ ಆರ್. ಅಶೋಕ್ ಸ್ಥಾನಕ್ಕೂ ಕಂಟಕ ಎದುರಾಗಿದೆ ಎಂದು ಹೇಳಲಾಗುತ್ತಿದ್ದು, ಅಶೋಕ್‌ ಬದಲು ಬಿಎಲ್ ಸಂತೋಷ್ ಬಣದಲ್ಲಿ ಗುರುತಿಸಿಕೊಂಡಿರುವ ಕಾರ್ಕಳ ಶಾಸಕ ಸುನೀಲ್ ಕುಮಾರ್‌ಗೆ ಅವಕಾಶ ನೀಡಲು ಪ್ರಯತ್ನ ನಡೆಸಲಾಗುತ್ತಿದೆ ಎನ್ನಲಾಗ್ತಿದೆ.

ಬಿಜೆಪಿಯಲ್ಲೂ ಆಂತರಿಕ ಭಿನ್ನಾಭಿಪ್ರಾಯಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಾಧ್ಯಕ್ಷ ವಿಜಯೇಂದ್ರ‌ಅವರನ್ನು ಕರೆದು‌ ಹೈಕಮಾಂಡ್ ಮಾಹಿತಿ ಪಡೆದುಕೊಂಡಿದೆ ಎಂದು ಮೂಲಗಳು ತಿಳಿಸಿವೆ.
ಅಧಿವೇಶನಕ್ಕೂ ಮೊದಲೇ ಈ ಎಲ್ಲಾ ಬದಲಾವಣೆ ಅದರೂ ಅಚ್ಚರಿಯಿಲ್ಲ ಎಂಬ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿಬರ್ತಿದೆ.