ಕರ್ನಾಟಕ ಬ್ಯಾರಿ ಅಭಿವೃದ್ಧಿ ನಿಗಮ ಸ್ಥಾಪನೆಗೆ ಹೆಚ್ಚಿದ ಬೇಡಿಕೆ

ರಾಜ್ಯ

ಬ್ಯಾರಿ ಸಮುದಾಯದ ನಾಯಕರಿಂದ ವಿಧಾನಸಭಾಧ್ಯಕ್ಷರಲ್ಲಿ ಒತ್ತಾಯ

ಕರ್ನಾಟಕ ರಾಜ್ಯದಾದ್ಯಂತ 25 ಲಕ್ಷಕ್ಕಿಂತಲೂ ಅಧಿಕ ಜನಸಂಖ್ಯೆ ಹೊಂದಿರುವ ಬ್ಯಾರಿ ಭಾಷಿತರ ಸಮಗ್ರ ಔದ್ಯೋಗಿಕ, ಸಾಂಸ್ಕೃತಿಕ, ಸಾಮಾಜಿಕ, ಸಮುದಾಯಿಕ, ಶೈಕ್ಷಣಿಕ ಶ್ರೇಯೋಭಿವೃದ್ಧಿಗೆ ಕರ್ನಾಟಕ ಬ್ಯಾರಿ ಅಭಿವೃದ್ಧಿ ನಿಗಮದ ಅವಶ್ಯಕತೆಯಿದ್ದು ಮಂಜೂರುಗೊಳಿಸುವಂತೆ ಆಗ್ರಹಿಸಿ ನಗರದ ಓಶಿಯನ್ ಪರ್ಲ್ ಹೋಟೆಲ್ ಸಭಾಂಗಣದಲ್ಲಿ ಅಖಿಲ ಭಾರತ ಬ್ಯಾರಿ ಮಹಾಸಭಾ ಮಂಗಳೂರು ವತಿಯಿಂದ ಗೌರವ ಸಲಹೆಗಾರರು ಹಾಗೂ ಅತಿಥಿಗಳ ಸಮಾಲೋಚನಾ ಸಭೆಯು ಜರುಗಿತು.

ರಾಜ್ಯದಲ್ಲಿ ಪ್ರತಿಯೊಂದು ಸಮುದಾಯಕ್ಕೂ ಒಂದೊಂದು ಅಭಿವೃದ್ಧಿ ನಿಗಮಗಳಿವೆ. ಆದರೆ ಬ್ಯಾರಿ ಸಮುದಾಯಕ್ಕೆ ಅಭಿವೃದ್ಧಿ ನಿಗಮ ಮರೀಚಿಕೆಯಾಗಿದ್ದು, ಶ್ರೀಘ್ರದಲ್ಲಿ ಕರ್ನಾಟಕ ರಾಜ್ಯ ಸರಕಾರ ಬ್ಯಾರಿ ಅಭಿವೃದ್ಧಿ ನಿಗಮ ಮಂಜೂರುಗೊಳಿಸುವ ಆಗ್ರಹ ಸಭೆಯಲ್ಲಿ ಭಾಗವಹಿಸಿದ ಬ್ಯಾರಿ ಪ್ರಮುಖ ನಾಯಕರಿಂದ ಬೇಡಿಕೆ ಕೇಳಿ ಬಂದವು. ಸಮಾಲೋಚನಾ ಸಭೆಯಲ್ಲಿ ಕರ್ನಾಟಕ ರಾಜ್ಯ ವಿಧಾನಸಭಾ ಸಭಾಧ್ಯಕ್ಷರಾದ ಯು.ಟಿ ಖಾದರ್, ನಿವೃತ್ತ ಪೊಲೀಸ್ ಅಧಿಕಾರಿ ಜಿ.ಎ ಬಾವಾ ಸೇರಿದಂತೆ ನಗರದ ಪ್ರಮುಖ ಬ್ಯಾರಿ ಸಮುದಾಯದ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಪ್ರಮುಖ ಉದ್ಯಮಿಗಳು, ಹೋರಾಟಗಾರರು, ಚಿಂತಕರು ಸೇರಿದಂತೆ ಪ್ರಮುಖ ಬ್ಯಾರಿ ನಾಯಕರು ಬ್ಯಾರಿ ಜನಾಂಗದ ಶ್ರೇಯೋಭಿವೃದ್ಧಿಗಾಗಿ ಕರ್ನಾಟಕ ಬ್ಯಾರಿ ಅಭಿವೃದ್ಧಿ ನಿಗಮ ಮಂಜೂರಾತಿಗಾಗಿ ವಿಧಾನಸಭಾಧ್ಯಕ್ಷರಾದ ಯು.ಟಿ ಖಾದರ್ ಅವರನ್ನು ಆಗ್ರಹಿಸಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಯು.ಟಿ ಖಾದರ್ ಈ ತಿಂಗಳಾಂತ್ಯದೊಳಗೆ ಅಖಿಲ ಭಾರತ ಬ್ಯಾರಿ ಮಹಾಸಭಾ ಪದಾಧಿಕಾರಿಗಳ ಜೊತೆ ಹಾಗೂ ವಿವಿಧ ಬ್ಯಾರಿ ಮುಖಂಡರ ಸಮ್ಮುಖದಲ್ಲಿ ಬೆಂಗಳೂರಿನಲ್ಲಿ ಅಲ್ಪಸಂಖ್ಯಾತ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿ ಅಂತಿಮ ರೂಪುರೇಷೆ ತಯಾರಿಸುವುದಾಗಿ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಹನೀಫ್ ಉಚ್ಚಿಲ್ ಸ್ವಾಗತಿಸಿದರು. ಅಖಿಲ ಭಾರತ ಬ್ಯಾರಿ ಮಹಾಸಭಾದ ಅಧ್ಯಕ್ಷರಾದ ಅಝೀಝ್ ಬೈಕಂಪಾಡಿ ಪ್ರಾಸ್ತಾವಿಕ ಭಾಷಣ ಮಾಡಿದರು. ಹಮೀದ್ ಕಿನ್ಯಾ ಧನ್ಯವಾದಗೈದರು.

ಈ ಹಿಂದೆ ಅಖಿಲ ಭಾರತ ಬ್ಯಾರಿ ಮಹಾಸಭಾ ಪದಾಧಿಕಾರಿಗಳು ಕರ್ನಾಟಕ ಬ್ಯಾರಿ ಅಭಿವೃದ್ಧಿ ನಿಗಮದ ಮಂಜೂರಾತಿಗಾಗಿ ಆಗ್ರಹಿಸಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಉಪಮುಖ್ಯಮಂತ್ರಿಗಳಾದ ಡಿ ಕೆ ಶಿವಕುಮಾರ್, ವಿಧಾನಸಭಾ ಸಭಾಧ್ಯಕ್ಷರಾದ ಯು.ಟಿ ಖಾದರ್ ರವರನ್ನು ಭೇಟಿಯಾಗಿ ಬೇಡಿಕೆಯನ್ನು ಸಲ್ಲಿಸಿದರು.