ಮಂಗಳೂರು ಮಹಾನಗರ ಪಾಲಿಕೆ ಕಟ್ಟಡ ನಿಯಮಾವಳಿಯಲ್ಲಿ ಮಹತ್ವದ ಬದಲಾವಣೆ ತರುವ “ಬಿಲ್ಡಿಂಗ್ ಬೈಲಾ’ದ ಉಪವಿಧಿಗಳ ಪರಿಷ್ಕೃತ ಅನುಮೋದನೆಗೆ ಸಿದ್ದತೆ ಅಂತಿಮಗೊಂಡಿದೆ. ಸರಕಾರದಿಂದ ಬಂದಿರುವ ಕರಡು ಉಪವಿಧಿಗಳನ್ನು ಪಾಲಿಕೆ ಪರಿಶೀಲಿಸಿ, ಅದನ್ನು ಸರಕಾರಕ್ಕೆ ಸಲ್ಲಿಸಿ ಅನುಮೋದನೆ ಪಡೆಯುವ ಮೂಲಕ ಪರಿಷ್ಕೃತ ಬೈಲಾ ಅನುಷ್ಠಾನವಾಗಲಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಈಗಾಗಲೇ “ಬಿಲ್ಡಿಂಗ್ ಬೈಲಾ’ ಅನುಷ್ಠಾನದಲ್ಲಿದೆ. ಆದರೆ, ಅದು ಹಳೆಯ ಕಾಲದ್ದಾಗಿರುವುದರಿಂದ ಈಗ ಕೆಲವೊಂದಿಷ್ಟು ಹೊಸತನ, ಜನಸ್ನೇಹಿ ನಿಯಮಗಳನ್ನು ಕಟ್ಟಡ ನಿರ್ಮಾಣ ಸಂದರ್ಭ ಪಾಲಿಸಬೇಕಾದ ಕಾರಣದಿಂದ ಹೊಸ ಉಪವಿಧಿಗಳ ಅನುಷ್ಠಾನಕ್ಕೆ ಸರಕಾರ ಈ ಹಿಂದೆಯೇ ತೀರ್ಮಾನಿಸಿತ್ತು. ಅದರಂತೆ ಪರಿಷ್ಕ್ರತ ಬೈಲಾವು ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಚರ್ಚೆಗೆ ಬರುವ ಸಾಧ್ಯತೆ ಇದೆ.
ಕಟ್ಟಡ ನಿರ್ಮಿಸುವ ಸಂದರ್ಭದಲ್ಲಿ ವಲಯ ನಿಯಮಾವಳಿ ಪ್ರಕಾರ ಎತ್ತರ, ಸೆಟ್ಬ್ಯಾಕ್, ಕವರೇಜ್ ಇರುತ್ತದೆ. ಅಗ್ನಿದುರಂತ, ಆವಘಡ ಸಂಭವಿಸದಂತೆ ಕ್ರಮ, ಸಿಸಿ ಕೆಮರಾ, ಮೂಲಸೌಕರ್ಯ ವ್ಯವಸ್ಥೆ ಕಡ್ಡಾಯ ಜಾರಿ, ಕಟ್ಟಡದಲ್ಲಿಯೇ ಘನತ್ಯಾಜ್ಯ ನಿರ್ವಹಣೆ ಅನುಷ್ಠಾನ, ಮಳೆ ನೀರು ಕೊಯ್ಲು ಹೀಗೆ ಎಲ್ಲ ಅಂಶಗಳನ್ನು ಒಳಗೊಂಡ ಸಂಪೂರ್ಣ ವಿವರ ಇನ್ನು ಮುಂದಕ್ಕೆ ಬೈಲಾದಲ್ಲಿ ಅಡಕವಾಗಿರುತ್ತದೆ.

ಮಕ್ಕಳ ಸುರಕ್ಷತೆ, ಅಂಗವಿಕಲರಿಗೆ ಸೌಲಭ್ಯ, ಸೌರಶಕ್ತಿ ಕಡ್ಡಾಯವಾಗಿ ಅಳವಡಿಕೆ, ತುರ್ತು ನಿರ್ಗಮನ ಹಾದಿ ಇತ್ಯಾದಿ ಅಂಶಗಳನ್ನು ಅಳವಡಿಸಬೇಕಾಗಿದೆ. ಈಗ ಇವೆಲ್ಲವೂ ಇದ್ದರೂ ಕೂಡ ಅದು ಬೇರೆ ಬೇರೆ ಪ್ರಕಾರದಲ್ಲಿ ಸಿಗುತ್ತಿದ್ದು ಅಲ್ಲಿ ಕಡ್ಡಾಯ ಪರಿಶೀಲನೆ ಆಗುತ್ತಿಲ್ಲ. ಒಂದೇ ಕಡೆ ಬೈಲಾದಲ್ಲಿ ಈ ವಿಷಯಗಳು ಇಲ್ಲ. ಬೈಲಾ ಆದರೆ ಎಲ್ಲವೂ ಸಾಮಾನ್ಯವಾಗಿ ಒಂದೇ ಸೂತ್ರದಲ್ಲಿ ದೊರೆಯಲಿದೆ ಎಂಬುದು ಅಧಿಕಾರಿಗಳ ಅಭಿಪ್ರಾಯ.

ಏಕಗವಾಕ್ಷಿ ವ್ಯವಸ್ಥೆಗೆ ಅವಕಾಶ
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಂತಿಮಗೊಳಿಸಲಾಗಿರುವ ಬೈಲಾ ತಿದ್ದುಪಡಿ ಬಗ್ಗೆ ಈಗಾಗಲೇ ಹಲವು ಸುತ್ತಿನ ಮಾತುಕತೆ- ಚರ್ಚೆ ನಡೆದಿದೆ. ಪಾಲಿಕೆ ವ್ಯಾಪ್ತಿಯಲ್ಲಿ ನಿರ್ಮಿಸಬಹುದಾದ ಕಟ್ಟಡಗಳ ಎತ್ತರ, ರಸ್ತೆಯ ಅಗಲ, ಪಾರ್ಕಿಂಗ್ ಶುಲ್ಕ ಸೇರಿದಂತೆ ಇತರೆ ವಿಷಯ ಕುರಿತು ಸಮಾಲೋಚಿಸಿ ಬೈಲಾ ಅಂತಿಮ ಹಂತಕ್ಕೆ ಬಂದಿದೆ. ಯಾವುದೇ ಉಲ್ಲಂಘನೆ ಇಲ್ಲದಿದ್ದರೂ, ಪರವಾನಗಿ ಪಡೆಯದೆ ಕಟ್ಟಡ ಕಟ್ಟಿರುವ ಪ್ರಕರಣಗಳಲ್ಲಿ ಅನುಸರಿಸಬೇಕಾದ ಕ್ರಮಗಳು, ಎಲ್ಲಾ ಎನ್ಒಸಿಗಳನ್ನು ಮಹಾನಗರ ಪಾಲಿಕೆಯಲ್ಲೇ ಏಕಗವಾಕ್ಷಿ ಮೂಲಕ ಒದಗಿಸಲು ವ್ಯವಸ್ಥೆ, ನಿರ್ಮಾಣ ಹಂತದಲ್ಲಿ ಯಾವುದೇ ಬದಲಾವಣೆಗೆ ಅವಕಾಶಗಳು ಇತ್ಯಾದಿ ಅಂಶಗಳ ಬಗ್ಗೆ ಬೈಲಾದಲ್ಲಿ ಉಲ್ಲೇಖವಾಗಲಿದೆ.
