ಹೈಕೋರ್ಟಿನ ನ್ಯಾಯಮೂರ್ತಿಗಳಾದ ವಿ. ಶ್ರೀಶಾನಂದ ಅವರು ನ್ಯಾಯಾಲಯದ ಕಲಾಪದ ವೇಳೆ ನಿರ್ದಿಷ್ಟ ಸಮುದಾಯ ಮತ್ತು ಮಹಿಳಾ ವಕೀಲರನ್ನು ಉದ್ದೇಶಿಸಿ ಮಾಡಿರುವ ಹೇಳಿಕೆಗಳಿಗೆ ವಿವಾದದ ಕಿಡಿ ಹೊತ್ತಿಕೊಂಡಿದೆ. ಈಗಾಗಲೇ ಈ ಬಗ್ಗೆ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿಗಳ ನೇತೃತ್ವದ ಪೀಠ ಸ್ವಯಂಪ್ರೇರಿತ ವಿಚಾರಣೆಗೆ ಚಾಲನೆ ನೀಡಿದೆ. ಈ ನಡುವೆ ʼಜಾಗೃತ ನಾಗರಿಕರು ಕರ್ನಾಟಕʼ ಸಂಘಟನೆ ಹಾಗೂ ರಾಜ್ಯ ವಕೀಲರ ಸಂಘಗಳು ನ್ಯಾಯಮೂರ್ತಿಗಳ ಹೇಳಿಕೆಗೆ ಆತಂಕ ವ್ಯಕ್ತಪಡಿಸಿವೆ.
ಪ್ರಕರಣವೊಂದರ ವಿಚಾರಣೆಯ ಸಂದರ್ಭದಲ್ಲಿ ನಗರದ ಮುಸ್ಲಿಂ ಸಮುದಾಯ ಹೆಚ್ಚಾಗಿ ಇರುವ ಸ್ಥಳವನ್ನು ಭಾರತವಲ್ಲ ಪಾಕಿಸ್ತಾನ ಎಂದು ಹೈಕೋರ್ಟ್ ನ್ಯಾಯಮೂರ್ತಿಯವರು ಹೇಳಿದ್ದಾರೆ ಎಂದು ವರದಿಯಾಗಿರುವುದು ಆಘಾತ ಉಂಟುಮಾಡಿದೆ ಎಂದು ‘ಜಾಗೃತ ನಾಗರಿಕರು ಕರ್ನಾಟಕ’ ಹೇಳಿದೆ. ಸರ್ವ ಧರ್ಮ ಸಮಭಾವದ ಸಂವಿಧಾನವನ್ನು ಒಪ್ಪಿಕೊಂಡಿರುವ ದೇಶ ನಮ್ಮದು. ಈಗಾಗಲೇ ವಿವಿಧ ರೀತಿಯಲ್ಲಿ ಧಾರ್ಮಿಕ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯವನ್ನೇ ಗುರಿಯಾಗಿಸಿ ನಡೆಸುವ ಹಲವು ದೌರ್ಜನ್ಯಗಳಿಗೆ ದೇಶ ಸಾಕ್ಷಿಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ನ್ಯಾಯಪೀಠದಿಂದ ಬರುವ ಇಂತಹ ಅಭಿಪ್ರಾಯಗಳು ಜನರ ಮಧ್ಯೆ ಸಾಮರಸ್ಯವನ್ನು ಹದಗೆಡಿಸಲು ಕಾರಣವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರು ನ್ಯಾಯಾಲಯದ ತೆರೆದ ಕಲಾಪದಲ್ಲಿ ಕಿರಿಯ ವಕೀಲರನ್ನು ನಿರುತ್ಸಾಹಗೊಳಿಸುವ ಮತ್ತು ಮಹಿಳಾ ವಕೀಲರನ್ನು ಮುಜುಗರಕ್ಕೆ ಈಡು ಮಾಡಿದ ಪ್ರಸಂಗಗಳ ಬಗ್ಗೆ ದೂರುಗಳು ಬರುತ್ತಿವೆ ಎಂದು ಬೆಂಗಳೂರು ವಕೀಲರ ಸಂಘ ಆತಂಕ ವ್ಯಕ್ತಪಡಿಸಿದೆ. ಈ ಕುರಿತು ಮುಖ್ಯ ನ್ಯಾಯಮೂರ್ತಿ (ಸಿಜೆ) ಎನ್.ವಿ. ಅಂಜಾರಿಯಾ ಅವರಿಗೆ ಶುಕ್ರವಾರ ಪತ್ರ ಬರೆದಿರುವ ವಕಾಲರ ಸಂಘ ಕೆಲವು ದಿನಗಳವರೆಗೆ ಹೈಕೋರ್ಟ್ ಲೈವ್ ಸ್ಟ್ರೀಮಿಂಗ್ ಅನ್ನು ನಿರ್ಬಂಧಿಸಬೇಕು ಎಂದು ಕೋರಿದ್ದಾರೆ. ನ್ಯಾಯಮೂರ್ತಿ ಶ್ರೀಶಾನಂದ ಅವರು ವ್ಯಕ್ತಪಡಿಸಿರುವ ಅಭಿಪ್ರಾಯಗಳು ಗಂಭೀರ ವಿವಾದ ಸೃಷ್ಟಿಸಿವೆ. ಅವರ ಹೇಳಿಕೆಗಳು ವೈರಲ್ ಆಗಿವೆ. ಇದರಿಂದ ವಕೀಲಿ ವೃತ್ತಿಯನ್ನು ಪರಿಶುದ್ಧ ಎಂದು ಪರಿಗಣಿಸಿರುವ ಎಲ್ಲಾ ವಕೀಲರ ಭಾವನೆಗಳಿಗೆ ನೋವುಂಟಾಗಿದೆ ಎಂಬ ಅಂಶವನ್ನು ಪತ್ರದಲ್ಲಿ ಬರೆಯಲಾಗಿದೆ.

ನ್ಯಾಯಮೂರ್ತಿ ಶ್ರೀಶಾನಂದ ಅವರು ಕೆಲವು ಸಂದರ್ಭಗಳಲ್ಲಿ ಆ ಕ್ಷಣಕ್ಕೆ ವ್ಯಕ್ತಪಡಿಸಿರುವ ಅಭಿಪ್ರಾಯ ಮತ್ತು ಮೂದಲಿಕೆಗಳು ಅಪ್ರಸ್ತುತವಾಗಿವೆ. ಆದರೆ, ಅವರು ಪ್ರಾಮಾಣಿಕತೆಗೆ ಹೆಸರಾಗಿದ್ದಾರೆ. ಉತ್ತಮ ತೀರ್ಪುಗಳನ್ನು ನೀಡಿದ್ದಾರೆ. ಆಕ್ಷೇಪಾರ್ಹ ಹೇಳಿಕೆಗಳಿಂದ ಅವರು ಮಾಡಿರುವ ಉತ್ತಮ ಕೆಲಸಗಳಿಗೆ ಅಪಚಾರ ಉಂಟಾಗುತ್ತಿದೆ’ ಎಂದು ವಿವರಿಸಲಾಗಿದೆ. ನ್ಯಾಯಾಲಯಗಳ ಲೈವ್ ಸ್ಟ್ರೀಮಿಂಗ್ ಅನ್ನು ಸಂಪೂರ್ಣ ನಿರ್ಬಂಧಿಸದೇ ಹೋದರೆ ಪರಿಸ್ಥಿತಿ ಕೈಮೀರಲಿದೆ. ಸಾರ್ವಜನಿಕರ ಮನಸ್ಸಿನಲ್ಲಿ ನ್ಯಾಯಾಲಯಗಳ ವರ್ಚಸ್ಸಿಗೆ ಧಕ್ಕೆಯಾಗಲಿದೆ. ಈ ಕುರಿತು ತಾವು ತುರ್ತು ಕ್ರಮ ಕೈಗೊಳ್ಳುತ್ತೀರಿ ಎಂಬ ಆಶಾಭಾವನೆ ಹೊಂದಿದ್ದೇವೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
