ಮೂಡಬಿದ್ರೆ ಸರಣಿ ಕಳ್ಳತನ ಪ್ರಕರಣ: ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಸಿಂಗಂ ಸಂದೇಶ್ ಟೀಮ್ ಯಶಸ್ವಿ; ನಟೋರಿಯಸ್ ಹಬ್ಬಿ ಅಂದರ್!

ಕರಾವಳಿ

ಮೂಡಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಸರಣಿ ಕಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ಸಿಂಗಂ ಸಂದೇಶ್ ನೇತೃತ್ವದ ತಂಡ ಯಶಸ್ವಿಯಾಗಿದೆ.

ದಿನಾಂಕ 15-08-2024 ರಂದು ಮಾರ್ಪಾಡಿ ಗ್ರಾಮದ ವಿವೇಕಾನಂದ ನಗರದಲ್ಲಿ ಬಳಿ 70 ವರ್ಷ ಪ್ರಾಯದ ನಿರ್ಮಾಲ ಪಂಡಿತ್ ಎಂಬವರ ಕುತ್ತಿಗೆಯಿಂದ ಸುಮಾರು 24 ಗ್ರಾಂ ಮೌಲ್ಯದ ಚಿನ್ನದ ಸರವನ್ನು ಕಸಿದಿದ್ದರು . ಅದೇ ರೀತಿ ದಿನಾಂಕ 02-09-2024 ರಂದು ಮೂಡು ಮಾರ್ನಾಡು ಗ್ರಾಮದ ಬಸದಿ ಬಳಿಯ 82 ವರ್ಷ ಪ್ರಾಯದ ಪ್ರೇಮಾ ಎಂಬವರ ಕುತ್ತಿಗೆಯಿಂದ ಸುಮಾರು 3 ಪವನ್ ತೂಕದ ಚಿನ್ನದ ಸರವನ್ನು ಸ್ಕೂಟರ್ ನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಕಸಿದುಕೊಂಡು ಪರಾರಿಯಾಗಿದ್ದರು. ಮೂಡಬಿದ್ರೆಯಲ್ಲಿ ನಡೆಯುತ್ತಿದ್ದ ಸರಣಿ ಕಳ್ಳತನದ ಬಗ್ಗೆ ಜನರು ಆತಂಕಿತರಾಗಿದ್ದರು.

ಪ್ರಕರಣದ ಜಾಡು ಹಿಡಿದು ಆರೋಪಿಗಳ ಪತ್ತೆ ಕಾರ್ಯಕ್ಕಿಳಿದ ಪೊಲೀಸರು ಅಂತರ್ ಜಿಲ್ಲಾ ಪೊಲೀಸ್ ಠಾಣೆಗಳಲ್ಲಿ ಹಲವಾರು ದರೋಡೆ, ಕಳ್ಳತನ, ಸುಲಿಗೆ ಪ್ರಕರಣದಲ್ಲಿ ಭಾಗಿಯಾಗಿರುವ ಹಬೀಬ್ ಹಸನ್ ಯಾನೆ ಹಬ್ಬಿ ಚೆಂಬುಗುಡ್ಡೆ, ಮಂಗಳೂರು ತಾಲೂಕು ಮತ್ತು ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಈ ಮೊದಲು ಕೊಲೆ ಯತ್ನ ಪ್ರಕರಣದಲ್ಲಿ ಭಾಗಿಯಾಗಿದ್ದ ಪರ್ಲಿಯಾ ನಿವಾಸಿ ಉಮ್ಮರ ಸಿಯಾಫ್ ಯಾನೆ ಚಿಯಾ ಎಂಬವರನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.

ಆರೋಪಿಗಳು ಪ್ರಕರಣಗಳ ಕೃತ್ಯಕ್ಕೆ ಬಳಸಿದ TVS ಸ್ಕೂಟರ್ ಮಂಗಳೂರು ನಗರದ ಕದ್ರಿ ಪೊಲೀಸ್ ಠಾಣೆಯಲ್ಲಿ ಕಳವು ಆಗಿರುವ ಸ್ಕೂಟರ್ ಆಗಿರುತ್ತದೆ.
ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಸ್ಕೂಟರ್ ಹಾಗೂ ಚಿನ್ನಾಭರಣಗಳನ್ನು ಸ್ವಾಧೀನ ಪಡಿಸಿಕೊಂಡಿದ್ದು, ಆರೋಪಿಗಳಿಂದ ಸ್ವಾಧೀನ ಪಡಿಸಿಕೊಂಡ ಸೊತ್ತುಗಳ ಅಂದಾಜು ಮೌಲ್ಯ 2,50,000/- ಆಗಿರುತ್ತದೆ. ಪ್ರಕರಣದಲ್ಲಿ ದಸ್ತಗಿರಿಯಾಗಿರುವ 1 ನೇ ಆರೋಪಿ ಹಬೀಬ್ ಹಸನ್, ಯಾನೆ ಹಬ್ಬಿ ಯಾನೆ ಚೆಂಬುಗುಡ್ಡೆ ಹಬ್ಬಿ ವಿರುದ್ಧ ವಿವಿಧ ಠಾಣೆಗಳಲ್ಲಿ 42 ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಈ ವರೆಗೆ ಈತನ ವಿರುದ್ದ ಸುಮಾರು 42 ಕಳ್ಳತನ ಪ್ರಕರಣಗಳು ದಾಖಲಾಗಿರುತ್ತದೆ.

ಅರೋಪಿ ಹಬೀಬ್ ಹಸನ್ ಯಾನೆ ಅಬ್ಬು ಎಂಬಾತನ ಮೇಲೆ ಬಜ್ಪೆ ಪೊಲೀಸ್ ಠಾಣೆಯಲ್ಲಿ 3 ಪ್ರಕರಣ, ಮಂಗಳೂರು ಉಳ್ಳಾಲ ಪೊಲೀಸ್ ಠಾಣೆಯಲ್ಲಿ 9 ಪ್ರಕರಣ, ಸುರತ್ಕಲ್ ಪೊಲೀಸ್ ಠಾಣೆಯಲ್ಲಿ 3 ಪ್ರಕರಣ, ಬರ್ಕೆ ಪೊಲೀಸ್ ಠಾಣೆಯಲ್ಲಿ 1, ಮೂಲ್ಕಿ ಪೊಲೀಸ್ ಠಾಣೆಯಲ್ಲಿ 1, ಮಂಗಳೂರು ಕೊಣಾಜೆ ಪೊಲೀಸ್ ಠಾಣೆಯಲ್ಲಿ 3, ಮಣಿಪಾಲ ಪೊಲೀಸ್ ಠಾಣೆಯಲ್ಲಿ 4, ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 3, ಮಲ್ಪೆ ಪೊಲೀಸ್ ಠಾಣೆಯಲ್ಲಿ 2, ಶಿರ್ವಾ ಪೊಲೀಸ್ ಠಾಣೆಯಲ್ಲಿ 1, ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ 5, ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ 2, ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 1, ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ 2, ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ 1, ಹಾಗೂ
ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿರುತ್ತದೆ. ಈತನು 42 ಪ್ರಕರಣಗಲ್ಲಿ ಆರೋಪಿಯಾಗಿದ್ದು, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ಒಟ್ಟು 15 ಪ್ರಕರಣಗಳಲ್ಲಿ ತಲೆ ಮರೆಸಿ ಕೊಂಡಿದ್ದ. ಮಾನ್ಯ ನ್ಯಾಯಾಲಯವು ಈತನಿಗೆ 15 ಪ್ರಕರಣಗಳಲ್ಲಿ ವಾರಂಟ್ ಜಾರಿಗೊಳಿಸಿತ್ತು.

ಮಂಗಳೂರು ನಗರದ ಪೊಲೀಸ್ ಆಯುಕ್ತರಾದ ಅನುಪಮ್ ಅಗರ್ವಾಲ್, IPS ರವರ ಮಾರ್ಗದರ್ಶನದಂತೆ, ಮಾನ್ಯ DCP ಯವರಾದ ಸಿದ್ಧಾರ್ಥ ಗೊಯಲ್ (ಕಾ&ಸು), ದಿನೇಶ್ ಕುಮಾರ್ DCP (ಅ & ಸಂ) ಮತ್ತು ಮಂಗಳೂರು ಉತ್ತರ ಉಪ ವಿಭಾಗದ ACP ಶ್ರೀಕಾಂತ್. ಕೆ ರವರ ನಿರ್ದೇಶನದಂತೆ, ಮೂಡಬಿದ್ರೆ ಠಾಣಾ ಪೊಲೀಸ್ ನಿರೀಕ್ಷಕರಾದ ಶ್ರೀ ಸಂದೇಶ್ ಪಿ.ಜಿ ರವರ ನೇತೃತ್ವದಲ್ಲಿ ಪ್ರಶಾಂತ್ ಎ.ಎಸ್.ಐ, ಶ್ರೀ ಮೋಹನ್ ದಾಸ್ ಕೋಟ್ಯಾನ್ ಎ.ಎಸ್.ಐ ಮತ್ತು ಠಾಣಾ ಅಪರಾಧ ವಿಭಾಗದ ಸಿಬ್ಬಂಧಿಯವರಾದ ಮೊಹಮ್ಮದ್ ಇಕ್ಬಾಲ್ , ಮೊಹಮ್ಮದ್ ಹುಸೇನ್, ಅಕೀಲ್ ಅಹಮ್ಮದ್, ನಾಗರಾಜ್, ವೆಂಕಟೇಶ್ ರವರುಗಳು ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.

ಮೂಡಬಿದ್ರೆ ಪೊಲೀಸ್ ಠಾಣೆಗೆ ಸಿಂಗಂ ಸಂದೇಶ್ ಇನ್ಸ್ ಪೆಕ್ಟರ್ ಆಗಿ ಅಧಿಕಾರ ವಹಿಸಿಕೊಂಡ ನಂತರ ಅಪರಾಧ ಪ್ರಕರಣಗಳಲ್ಲಿ ಭಾರೀ ಇಳಿಕೆಯಾಗಿದೆ. ದುಷ್ಕೃತ್ಯ ಎಲ್ಲಿ ನಡೆದರೂ ಆರೋಪಿಗಳನ್ನು ಶ್ರೀಘ್ರ ಹೆಡೆಮುರಿ ಕಟ್ಟುವಲ್ಲಿ ಸಿಂಗಂ ಸಂದೇಶ್ ಯಶಸ್ವಿಯಾಗಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಸಂದೇಶ್ ನೀಡಿರುವ ದಕ್ಷ ಸೇವೆಯನ್ನು ಪರಿಗಣಿಸಿ ಇತ್ತೀಚೆಗೆ ಮುಖ್ಯಮಂತ್ರಿ ಚಿನ್ನದ ಪದಕಕ್ಕೂ ಪಾತ್ರರಾಗಿದ್ದಾರೆ. ಎಂತಹ ಕ್ಲಿಷ್ಟಕರ ಪ್ರಕರಣಗಳನ್ನು ಭೇದಿಸುವಲ್ಲಿ ಸಂದೇಶ್ ಎತ್ತಿದ ಕೈ ಆಗಿದ್ದಾರೆ.