ಸೋಶಿಯಲ್ ಮೀಡಿಯಾದಲ್ಲಿ ಹೀರೋ ಆಗಿರದ ಪಿ. ಬಿ ಡೇಸಾ ಹಲವರ ಎವರ್ ಗ್ರೀನ್ ಹೀರೋ: ನವೀನ್ ಸೂರಿಂಜೆ

ಕರಾವಳಿ

ಕರಾವಳಿಯಲ್ಲಿ ಒಂದು ಕಾಲವಿತ್ತು. ಆರ್ ಎಸ್ ಎಸ್ ನ ಹಿಂದುತ್ವ, ಪೊಲೀಸರ ಕ್ರೌರ್ಯಗಳು ಮಿತಿಮೀರಿದ ಸಮಯವದು. ಈಗಿನಂತೆ ಸೋಶಿಯಲ್ ಮೀಡಿಯಾದ ಕಾಲ ಅದಲ್ಲ. ಅಂತಹ ಸಂದರ್ಭದಲ್ಲಿ ಕರಾವಳಿಯ ಸ್ವಾಸ್ಥ್ಯ ಕಾಪಾಡಿದ್ದು ಪಿ ಬಿ ಡೇಸಾ ನೇತೃತ್ವದ ಪಿಯುಸಿಎಲ್. ಕೋಮುವಾದ, ಮಾನವ ಹಕ್ಕು ಉಲ್ಲಂಘನೆಯನ್ನು ವಿರೋಧಿಸಿ ಇವರು ಒಬ್ಬರಾದರೆ ಒಬ್ಬರು, ನಾಲ್ವರಾದರೆ ನಾಲ್ವರು, ಹತ್ತು ಜನವಾದರೆ ಹತ್ತೇ ಜನ ಡಿಸಿ ಆಫೀಸ್ ಎದುರು ಪ್ರತಿಭಟಿಸಿದ್ದೂ ಇದೆ. ಸಾವಿರಾರು ಜನ ಸೇರಿಸಿ ನೂರಾರು ಪ್ರತಿಭಟನೆಗಳನ್ನು ಮುನ್ನಡೆಸಿದ್ದೂ ಇದೆ. ಇಡೀ ಜನಸಮುದಾಯವೇ ದೌರ್ಜನ್ಯಕ್ಕೆ ಒಳಗಾದ ವ್ಯಕ್ತಿಯೊಬ್ಬನ ವಿರುದ್ದ ನಿಂತರೂ ಪಿ ಬಿ ಡೇಸಾ ಅವರು ದೌರ್ಜನ್ಯಕ್ಕೆ ಒಳಗಾದ ವ್ಯಕ್ತಿ ಪರ ನಿಂತು ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದರು.

ಕೋಮುಗಲಭೆ, ಪೊಲೀಸ್ ಲಾಠಿ ಪ್ರಹಾರ, ಭಯೋತ್ಪಾದಕರ ಹೆಸರಲ್ಲಿ ಬಂಧನ, ನಕ್ಸಲ್ ಹೆಸರಿನಲ್ಲಿ ಆದಿವಾಸಿಗಳ ಮೇಲೆ ನಡೆಯುವ ದೌರ್ಜನ್ಯ, ದಲಿತರು, ಮುಸ್ಲೀಮರ ಮೇಲೆ ಎಲ್ಲೇ ದೌರ್ಜನ್ಯ ನಡೆದರೂ ಕೇವಲ ಪ್ರತಿಭಟನೆ ನಡೆಸಿ ಸುಮ್ಮನಾಗದೇ ತಂಡ ಕಟ್ಟಿ ಸತ್ಯಶೋಧನೆ ನಡೆಸುತ್ತಿದ್ದವರು ಪಿ ಬಿ ಡೇಸಾ. ಇವರ ನೇತೃತ್ವದಲ್ಲಿ ಪಿಯುಸಿಎಲ್ ಕೊಟ್ಟ ಸತ್ಯಶೋಧನಾ ವರದಿ ಆಧಾರದ ಮೇಲೆ ಹಲವು ಪೊಲೀಸರ ವಿರುದ್ದ ಕ್ರಮಗಳಾಗಿವೆ ಮತ್ತು ಪ್ರಕರಣ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಹೀರೋ ಆಗಿರದ ಪಿ ಬಿ ಡೇಸಾ ಅವರು ನನ್ನಂತೆ ಹಲವರ ಎವರ್ ಗ್ರೀನ್ ಹೀರೋ. ಹೋಗಿ ಬನ್ನಿ ಸರ್