ವಾಹನ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಆಶ್ರಿತರಿಗೆ 1.35 ಕೋಟಿ ರೂಪಾಯಿ ಪರಿಹಾರ ನೀಡಲು ವಿಮಾ ಕಂಪನಿಗೆ ಆದೇಶಿಸಿ ಮಂಗಳೂರಿನ ಒಂದನೇ ಹೆಚ್ಚುವರಿ ಸೀನಿಯರ್ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಲಕ್ಷ್ಮೀ ಜೆ.ಎಂ ತೀರ್ಪು ನೀಡಿದ್ದಾರೆ.
ಪಣಂಬೂರಿನ ಎಂಸಿಎಫ್ ಸಂಸ್ಥೆಯಲ್ಲಿ ಉದ್ಯೋಗಿ ಯಾಗಿದ್ದು, 2018 ರ ಮೇ 18 ರಂದು ಮಹೇಶ್ ಭಟ್ ಎಂಬವರು ಬೈಕ್ ನಲ್ಲಿ ಕರ್ತವ್ಯಕ್ಕೆ ಹೋಗುತ್ತಿದ್ದಾಗ ಮಂಗಳೂರಿನ ಕೊಟ್ಟಾರ ಚೌಕಿ ಬಳಿ ರಾಜಸ್ಥಾನ ನೋಂದಣಿಯ ಲಾರಿಯೊಂದು ಡಿಕ್ಕಿ ಹೊಡೆದಿದ್ದು, ಮಹೇಶ್ ಭಟ್ ಮೃತಪಟ್ಟಿದ್ದರು.
ಮಂಗಳೂರಿನ 1ನೇ ಹೆಚ್ಚುವರಿ ಸೀನಿಯರ್ ಸಿವಿಲ್ ಜಡ್ಜ್ ನ್ಯಾಯಾಲಯದಲ್ಲಿ ಮೋಟಾರು ವಾಹನ ಅಪಘಾತ ಪರಿಹಾರ ಕಾಯಿದೆಯಡಿ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಲಾಗಿತ್ತು. ಪ್ರತಿವಾದಿ ವಿಮಾ ಸಂಸ್ಥೆ ಯುನಿವರ್ಸಲ್ ಸೊಂಪೋ ಜನರಲ್ ಇನ್ಸೂರೆನ್ಸ್ ಕಂಪೆನಿ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಬಹಳಷ್ಟು ವಾದಗಳನ್ನು ಮಾಡಿತ್ತು. ಕೊನೆಗೆ ನ್ಯಾಯಾಲಯವು ಅರ್ಜಿದಾರರು ಹಾಜರುಪಡಿಸಿದ ದಾಖಲಾತಿಗಳು ಹಾಗೂ ಮಂಡಿಸಿದ ವಾದ ವಿವಾದಗಳನ್ನು ಪರಿಗಣಿಸಿ 1.06 ಕೋಟಿ ರೂಪಾಯಿ ಪರಿಹಾರವನ್ನು ಶೇಕಡಾ 6 ರಷ್ಟು ಬಡ್ಡಿಯೊಂದಿಗೆ ಸೇರಿಸಿ ಒಟ್ಟು 1.35 ಕೋಟಿ ರೂಪಾಯಿ ಪರಿಹಾರವನ್ನು ಅರ್ಜಿದಾರರಿಗೆ ನೀಡಬೇಕು. ಪರಿಹಾರ ಧನ ಪಡೆಯಲು ಮೃತರ ಪತ್ನಿ, ಅವರ ಪುತ್ರ ಹಾಗೂ ಮೃತರ ಹೆತ್ತವರು ಅರ್ಹರಾಗಿದ್ದಾರೆ ಎಂದು ನ್ಯಾಯಾಲಯವು ಮಹತ್ವದ ಆದೇಶ ನೀಡಿದೆ.
ಅರ್ಜಿದಾರರ ಪರವಾಗಿ ವಕೀಲರಾದ ಎ. ದಿನೇಶ್ ಭಂಡಾರಿ, ಕೆ.ಎಸ್.ಎನ್ ಅಡಿಗ, ಪ್ರೀತಿಕಾ ಕೆ.ಎಂ ಹಾಗೂ ತೃಪ್ತಿ ವಾದಿಸಿದ್ದರು.
