ನೆಹರೂ ಮೈದಾನದ ಇಂದಿರಾ ಕ್ಯಾಂಟೀನ್ ಬಳಿ ಖಾಸಗಿ ಬಸ್ ಕಂಡಕ್ಟರ್ ಶವ ಪತ್ತೆ.

ಕರಾವಳಿ

ಕಲ್ಲು ಎತ್ತಿ ಹಾಕಿ ಕೊಲೆಗೈದ ಪಾತಕಿಗಳು.

ಮಂಗಳೂರು ನೆಹರೂ ಮೈದಾನದ ಇಂದಿರಾ ಕ್ಯಾಂಟೀನ್ ಪರಿಸರದಲ್ಲಿ ಖಾಸಗಿ ಬಸ್ ನಿರ್ವಾಹಕನೊಬ್ಬನ ಶವ ಪತ್ತೆಯಾಗಿದೆ. ಮಂಗಳೂರು-ವಿಟ್ಲ ಮಧ್ಯೆ ಸಂಚರಿಸುತ್ತಿದ್ದ ಫಲ್ಗುಣಿ, ಸೆಲಿನಾ ಬಸ್ಸುಗಳಲ್ಲಿ ನಿರ್ವಾಹಕನಾಗಿ ದುಡಿಯುತ್ತಿದ್ದ ರಾಜೇಶ್(30)ಎಂಬಾತ ಮೃತ ದುರ್ದೈವಿ.

ಪ್ರತಿ ವರ್ಷವೂ ಶಬರಿಮಲೆ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಮಾಲೆ ಧರಿಸಿ ಹೋಗುತ್ತಿದ್ದ ರಾಜೇಶ್ ಸರಳ ಸ್ವಭಾವದವನಾಗಿದ್ದು ಎಲ್ಲರೊಂದಿಗೂ ಆತ್ಮೀಯವಾಗಿ ಬೆರೆಯುತ್ತಿದ್ದನೆಂದು ಸಹೋದ್ಯೋಗಿ ಮಿತ್ರರು ತಿಳಿಸಿದ್ದಾರೆ. ಆದರೆ ಈವರೆಗೂ ರಾಜೇಶ್ ಎಲ್ಲಿಯವನೆಂಬ ಬಗ್ಗೆಯಾಗಲೀ, ಆತನ ಪೋಷಕರು, ಸಂಬಂಧಿಕರು ಯಾರೆಂಬ ಬಗ್ಗೆ ಸಹೋದ್ಯೋಗಿಗಳಿಗೆ, ಮಿತ್ರರಿಗೆ ತಿಳಿದಿಲ್ಲವಾಗಿದೆ.

ಸೋಮವಾರ ಬೆಳಗ್ಗೆ ಇಂದಿರಾ ಕ್ಯಾಂಟೀನ್ ಪರಿಸರದಲ್ಲಿ ಅನಾಥ ಸ್ಥಿತಿಯಲ್ಲಿ ಕಂಡಕ್ಟರ್ ರಾಜೇಶನ ಜರ್ಜರಿತವಾದ ಮೃತದೇಹ ಪತ್ತೆಯಾಗಿತ್ತು. ಸ್ಥಳಕ್ಕಾಗಮಿಸಿದ ಪಾಂಡೇಶ್ವರ ಠಾಣಾ ಪೊಲೀಸರು ಮೃತದೇಹವನ್ನು ವಾರೀಸುದಾರರು ಯಾರೂ ಬಂದಿಲ್ಲದ ಕಾರಣ ವೆನ್ ಲಾಕ್ ಶವಾಗಾರದಲ್ಲಿ ಇರಿಸಿದ್ದಾರೆ.
ಮನೆಯವರು, ಸಂಬಂಧಿಕರು ಯಾರು, ಎಲ್ಲಿಯವರೆಂಬ ಬಗ್ಗೆ ಈವರೆಗೂ ಮಾಹಿತಿ ಲಭ್ಯವಾಗಿಲ್ಲ. ಆದರೆ ಮಂಗಳೂರು ನಗರದೊಳಗೆ ಇಂತಹ ದುಷ್ಕೃತ್ಯ ಎಸಗಿದ ಆರೋಪಿಗಳನ್ನು ಪೊಲೀಸರು ಪತ್ತೆ ಹಚ್ಚಿ ರಾಜೇಶ್ ಸಾವಿನ ಹಿನ್ನೆಲೆಯನ್ನು ಬೇಧಿಸಬೇಕಾಗಿದೆ.