ಪತ್ನಿಯೇ ಹಂತಕಿ.! ಗೌಡನಿಗೆ ಪೊಲೀಸ್ ಡ್ರಿಲ್
ಹದಿನೆಂಟರ ಮಗಳು ಕೊಟ್ಟಳು ‘ಕಹಾನಿ’ ಗೆ ಟ್ವಿಸ್ಟ್.!
ರಿಯಲ್ ಎಸ್ಟೇಟ್ ಉದ್ಯಮಿ ಕಂ ಸಾಮಾಜಿಕ ಕಾರ್ಯಕರ್ತ ಸಂತೋಷ್ ದುಂಡಪ್ಪ ಪದ್ಮಣ್ಣನರ ಅನುಮಾನಾಸ್ಪದ ಸಾವಿಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಅಕ್ಟೋಬರ್ 9 ರಂದು ಬೆಳಗಾವಿ ಮೂಲದ ಉದ್ಯಮಿ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಪತ್ನಿ ಉಮಾ ಹೇಳಿಕೆ ನೀಡಿದ್ದರು.
ಆದರೆ ಮಗಳು ಇದೊಂದು ಸಹಜ ಸಾವಲ್ಲ, ಕೊಲೆ ಎಂದು ಅನುಮಾನ ವ್ಯಕ್ತಪಡಿಸಿದ ಕಾರಣ ಪೊಲೀಸರು ಪ್ರಕರಣ ದಾಖಲಿಸಿ ಮೃತದೇಹವನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಿದ್ದರು. ಪೊಲೀಸರು ಇದೀಗ ತನಿಖೆಗೆ ಇಳಿಯುತ್ತಿದ್ದಂತೆ ಉದ್ಯಮಿಯದ್ದು ಕೊಲೆ ಎಂಬುದಾಗಿ ದೃಡಪಟ್ಟಿದ್ದು, ಈ ಸಂಬಂಧ ಉದ್ಯಮಿಯ ಪತ್ನಿ ಉಮಾ ಹಾಗೂ ಆಕೆಯ ಗೆಳೆಯ ಮಂಗಳೂರು ಮೂಲದ ಶೋಭಿತ್ ಗೌಡ ಎಂಬುವರನ್ನು ತೀವ್ರ ವಿಚಾರಣೆಗೆ ಕರೆದೊಯ್ದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಮುಚ್ಚಿ ಹೋಗಲಿದ್ದ ಪ್ರಕರಣ ಕ್ಕೆ ಟ್ವಿಸ್ಟ್ ಕೊಟ್ಟ ಮಗಳು!
ರಿಯಲ್ ಎಸ್ಟೇಟ್ ಉದ್ಯಮಿ ಸಂತೋಷ್ ಪದ್ಮಣ್ಣನರ ಮಗಳು ಸಂಜನಾ ಬೆಂಗಳೂರಿನಲ್ಲಿದ್ದು, ತನ್ನ ತಂದೆಯ ಕೊನೆಯ ಕ್ಷಣಗಳನ್ನು ನೋಡಲು ಮನೆಗೆ ಬಂದಿದ್ದರು. ಆ ಬಳಿಕ ಸಿಸಿ ಕ್ಯಾಮೆರಾ ಪರಿಶೀಲಿಸಲು ಮುಂದಾಗಿದ್ದಳು. ಆದರೆ ತಾಯಿ ಉಮಾ ಈಗ ಬೇಡ, ಮತ್ತೆ ನೋಡೋಣ ಎಂದು ಸಾಗ ಹಾಕಿದ್ದಳು. ನಂತರ ತನ್ನ ಇಬ್ಬರು ಪುತ್ರರನ್ನು ಕರೆದು ಕೊಲೆ ನಡೆದ ಸಮಯದ ದೃಶ್ಯಾವಳಿಗಳನ್ನು ಡಿಲೀಟ್ ಮಾಡಿಸಿದ್ದಳು. ಈ ವಿಚಾರವನ್ನು ತಮ್ಮಂದಿರು ಅಕ್ಕ ಸಂಜನಾ ಳಿಗೆ ತಿಳಿಸಿದ್ದರು. ಇದರಿಂದ ಅನುಮಾನಗೊಂಡ ಮಗಳು ಸಂಜನಾ ಈ ಬಗ್ಗೆ ಬೆಳಗಾವಿಯ ಮಾಳ ಮಾರುತಿ ಪೊಲೀಸ್ ಠಾಣೆಯಲ್ಲಿ ಅಕ್ಟೋಬರ್ 15 ರಂದು ದೂರು ನೀಡಿದ್ದಳು.

ಪೊಲೀಸರು ಪ್ರಕರಣ ದಾಖಲಿಸಿ ಇದರ ಹಿಂದಿನ ನಿಗೂಢತೆಯನ್ನು ಬಯಲಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಸ್ವತಃ ಪತ್ನಿಯೇ ಗಂಡನನ್ನು ಕೊಲೆ ಮಾಡಲು ತನ್ನ ಗೆಳೆಯ ಮಂಗಳೂರು ಮೂಲದ ಶೋಭಿತ್ ಗೌಡ ನಿಗೆ ಹೇಳಿದ್ದು, ಗೌಡ ಇನ್ನಿಬ್ಬರನ್ನು ಕರೆದುಕೊಂಡು ಬಂದು ಮನೆಯಲ್ಲಿದ್ದ ಉದ್ಯಮಿಯನ್ನು ಕೊಲೆಗೈದು ಪರಾರಿಯಾಗಿದ್ದರು. ಪತ್ನಿ ಹೃದಯಾಘಾತ ಎಂದು ಕಥೆ ಕಟ್ಟಿ ಬಚಾವಾಗಲು ಪ್ರಯತ್ನಿಸಿದ್ದಳು. ಇದೀಗ ತನ್ನ ಹದಿನೆಂಟರ ಮಗಳಿಂದಲೇ ಕಹಾನಿ ಗೆ ಬ್ರೇಕ್ ಬಿದ್ದಿದ್ದು, ಮಂಗಳೂರು ಮೂಲದ ಶೋಭಿತ್ ಗೌಡ, ಮತ್ತೊಬ್ಬನನ್ನು ಪೊಲೀಸರು ಹುಬ್ಬಳ್ಳಿಯಿಂದ ವಶ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪತ್ನಿ ಉಮಾ ಳನ್ನು ಪೊಲೀಸರು ಬಂಧಿಸಿದ್ದಾರೆ.
