ದಲಿತ ವಿರೋಧಿ ನೀತಿ ಅನುಸರಿಸುತ್ತಿರುವ ಬಿಜೆಪಿ ನಡೆಗೆ ಸಾಮಾನ್ಯ ಸಭೆಯಲ್ಲಿ ಕಾಂಗ್ರೆಸ್ಸಿಗರಿಂದ ಧಿಕ್ಕಾರ
ಮಂಗಳೂರು ತಾಲೂಕಿನ ಕಂದಾವರ ಗ್ರಾಮ ಪಂಚಾಯತ್ ಬಿಜೆಪಿಯ ಹಿಡಿತದಲ್ಲಿದೆ. ಪಂಚಾಯತ್ ಆಡಳಿತದ ವೈಫಲ್ಯ ಹಾಗೂ ದಲಿತ ವಿರೋಧಿ ನೀತಿ ಅನುಸರಿಸುತ್ತಿರುವ ಬಗ್ಗೆ ವಿರೋಧ ಪಕ್ಷವಾದ ಕಾಂಗ್ರೆಸ್ ಸಾಮಾನ್ಯ ಸಭೆಯಲ್ಲಿ ಸಿಡಿದೆಡ್ಡಿದೆ. ಅಧ್ಯಕ್ಷರಿಗೆ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದೆ. ಮಾಜಿ ಪಂಚಾಯತ್ ಅಧ್ಯಕ್ಷೆ ಹಾಲಿ ಸದಸ್ಯರಾದ ವಿಜಯಾ ಸುವರ್ಣ ಪಂಚಾಯತ್ ನಲ್ಲಿ ಬಿಜೆಪಿಯ ಗೂಂಡಾ ಸಂಸ್ಕೃತಿ ಬಗ್ಗೆ ಆಕ್ರೋಶವನ್ನು ಹೊರ ಹಾಕಿದ್ದಾರೆ.

ಬಿಜೆಪಿ ಅಧಿಕಾರದಲ್ಲಿರುವ ಕಂದಾವರ ಗ್ರಾಮ ಪಂಚಾಯತ್ ಇತ್ತೀಚೆಗೆ ಏಕಾಏಕಿ ಮೂವರು ದಲಿತ ಪಂಪ್ ಆಪರೇಟರ್ ಗಳನ್ನು ಕೆಲಸದಿಂದ ಕಿತ್ತು ಹಾಕಿತ್ತು . ಪಂಚಾಯತ್ ನ ಈ ನಡೆಯ ಬಗ್ಗೆ ಕಾಂಗ್ರೆಸ್ ಬೆಂಬಲಿತ ಸದಸ್ಯರು ಕಿಡಿಕಾರಿದ್ದಾರೆ. ಕಂದಾವರ ಗ್ರಾಮ ಪಂಚಾಯತ್ ಸರ್ವಾಧಿಕಾರಿ ಧೋರಣೆ ತಾಳುತ್ತಿದೆ, ದಲಿತರಿಗೆ ಅನ್ಯಾಯ ಮಾಡುತ್ತಿದೆ. ಬಿಜೆಪಿ ಅಧಿಕಾರದ ಪಂಚಾಯತ್ ನಲ್ಲಿ ನ್ಯಾಯ ಎಲ್ಲಿದೆ? ಎಂದು ಸಾಮಾನ್ಯ ಸಭೆಯಲ್ಲಿ ಆಡಳಿತ ಪಕ್ಷದ ಬೆವರಿಳಿಸಿತ್ತು.
ವಿರೋಧ ಪಕ್ಷದ ಸದಸ್ಯರಾದ ವಿಜಯಾ ಸುವರ್ಣ ಕಳೆದ ಮೂರುವರೆ ವರ್ಷಗಳಿಂದ ಪಂಚಾಯತ್ ದಲಿತ ವಿರೋಧಿ ನೀತಿ ಅನುಸರಿಸುತ್ತಿದೆ, ದಲಿತರ ವಿಷಯವನ್ನು ಸಭೆಯಲ್ಲಿ ಚರ್ಚಿಸದಂತೆ ತಡೆಯೊಡ್ಡಲಾಗುತ್ತಿದೆ. ಇದೆಂತಹ ನ್ಯಾಯ? ಸುದರ್ಶನ್ ಅನ್ನುವ ಬಿಜೆಪಿ ಬೆಂಬಲಿತ ಸದಸ್ಯ ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಹೀನಾಯವಾಗಿ ಚಿತ್ರಿಸುತ್ತಿದ್ದು, ನಾನೂ ಇನ್ನು ಹಾಕುತ್ತೇನೆ, ನನ್ನನ್ನು ತಡೆಯುವವರ್ಯಾರು ಎಂದು ದರ್ಪದಿಂದಲೇ ಮಾತನಾಡುತ್ತಿರುವುದು ಇದು ಒಳ್ಳೆಯ ಬೆಳವಣಿಗೆಯಲ್ಲ. ಪಂಚಾಯತ್ ನಲ್ಲಿ ರಾಜಕೀಯ ಇರಬಾರದು. ಆದರೆ ತಪ್ಪು ಮಾಡಿರುವ ಸುದರ್ಶನ್ ಪರವೇ ಆಡಳಿತ ಪಕ್ಷ ನಿಂತಿರುವುದು, ಆತ ಕ್ಷಮೆ ಕೇಳುವವರೆಗೆ ನಾವು ಹೋರಾಟ ನಿಲ್ಲಿಸಲ್ಲ ಎಂದಿದ್ದಾರೆ.

ಬಿಜೆಪಿ ಬೆಂಬಲಿತ ಸದಸ್ಯ ಸುದರ್ಶನ್ ಹಾಗೂ ಇತರ ನಾಲ್ವರು ಸದಸ್ಯರು ಎರಡು ವರ್ಷಗಳ ಹಿಂದೆ ಪಿಡಿಒ ಯಶವಂತ್ ಅವರನ್ನು ಪಂಚಾಯತ್ ನಲ್ಲಿ ಕೂಡಿ ಹಾಕಿ ಬೀಗ ಹಾಕಿ ಗೂಂಡಾಗಿರಿ ಮೆರೆದಿದ್ದು, ಈ ಬಗ್ಗೆ ಪೊಲೀಸ್ ಠಾಣೆಯಲ್ಲೂ ಎಫ್ ಐ ಆರ್ ದಾಖಲಾಗಿದೆ. ಕಂದಾವರ ಗ್ರಾಮ ಪಂಚಾಯತ್ ನಲ್ಲಿ ಆಡಳಿತ ಪಕ್ಷ ಗೂಂಡಾಗಳನ್ನು ಸಾಕುವ ಕೆಲಸ ಮಾಡುತ್ತಿದೆ. ಇದನ್ನು ಇನ್ನು ಸಹಿಸಲು ಸಾಧ್ಯವಿಲ್ಲ. ಈ ಬಗ್ಗೆ ನಾವು ತಾಲೂಕು, ಜಿಲ್ಲಾ ಮಟ್ಟದಲ್ಲೂ ಹೋರಾಟ ಮಾಡುವುದಾಗಿ ವಿಜಯಾ ಸುವರ್ಣ ಸಿಡಿದೆದ್ದಿದ್ದಾರೆ.
ಜನರ ಸಮಸ್ಯೆಗಳಿಗೆ ಧ್ವನಿಯಾಗಬೇಕಾಗಿದ್ದ ಸ್ಥಳೀಯಾಡಳಿತ ರಾಜಕೀಯ ಆಡುಂಬೋಲದ ತಾಣವಾಗಿ ಪರಿವರ್ತನೆಗೊಂಡಿರುವುದು ದುರದೃಷ್ಟಕರ. ಇಂತಹವರ ಬಗ್ಗೆ ಜನಸಾಮಾನ್ಯರು ಇನ್ನಾದರೂ ಎಚ್ಚೆತ್ತುಕೊಂಡರೆ ಗ್ರಾಮಕ್ಕೆ ಒಳಿತು.
