ಚನ್ನಪಟ್ಟಣ: ಸಟ್ಟಾ ಬಜಾರ್ ನಲ್ಲಿ ಯಾರ ‘ಕೈ’ ಮೇಲು..? ‘ಸಿಂಪತಿ’ ಮತ ಚಕ್ರವ್ಯೂಹ ಭೇದಿಸುತ್ತಾ..? ಮುಸ್ಲಿಂ ಏರಿಯಾಗಳಲ್ಲಿ ರೆಕಾರ್ಡ್ ಓಟಿಂಗ್.!

ರಾಜ್ಯ

ಕರ್ನಾಟಕದ ಮೂರು ವಿಧಾನಸಭಾ ಉಪ ಚುನಾವಣೆಗಳ ಪೈಕಿ ಜಿದ್ದಾಜಿದ್ದಿನ ಹಣಾಹಣಿಗೆ ಕಾರಣವಾಗಿದ್ದ ಚನ್ನಪಟ್ಟಣದಲ್ಲಿ ಯಾರು ಗೆಲ್ಲುತ್ತಾರೆ ಅನ್ನುವ ಬಗ್ಗೆ ಬೆಟ್ಟಿಂಗ್ ದಂಧೆ ಬಲು ಜೋರಾಗಿದೆ. ಕಾಂಗ್ರೆಸ್, ಜೆಡಿಎಸ್ ಪಕ್ಷಕ್ಕಿಂತ ಇಲ್ಲಿ ಡಿಕೆಶಿ ಬ್ರದರ್ಸ್ ವರ್ಸಸ್ ಕುಮಾರಸ್ವಾಮಿ ಫ್ಯಾಮಿಲಿ ನಡುವಿನ ಪ್ರತಿಷ್ಠೆಯ ಕಣವಾಗಿ ಪರಿವರ್ತನೆಯಾಗಿತ್ತು. ಇದೀಗ ಚುನಾವಣೆ ಮುಗಿದಿದೆ. ನವೆಂಬರ್ 23 ಕ್ಕೆ ಫಲಿತಾಂಶ ಹೊರಬೀಳಲಿದೆ. ಈ ನಡುವೆಯೇ ಕ್ಷೇತ್ರದಲ್ಲಿ ಸೋಲು ಗೆಲುವಿನ ಬಗ್ಗೆ ಲೆಕ್ಕಾಚಾರಗಳು ರಣೋತ್ಸಾಹ ಮೂಡಿಸಿದೆ.

ಕರ್ನಾಟಕ, ತಮಿಳುನಾಡು, ಆಂಧ್ರ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಆರಾಧನಾ ರಾಜಕಾರಣ ಹೆಚ್ಚು ಪವರ್ ಫುಲ್. ನಾಯಕರನ್ನು ಅನುಸರಿಸುವ ಕಾರ್ಯಕರ್ತರ ಅಂಧಾಭಿಮಾನ ಚುನಾವಣೆಯಲ್ಲಿ ಏರುಪೇರಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಈ ಮಧ್ಯೆ ಸೋಲು -ಗೆಲುವಿನ ವಿಚಾರದಲ್ಲಿ ಕೋಟಿ ಕೋಟಿ ಬೆಟ್ಟಿಂಗ್ ದಂಧೆ ಸಟ್ಟಾ ಬಜಾರ್ ನಲ್ಲಿ ನಡೆಯುತ್ತಿದೆ. ಚುನಾವಣೆಗೆ ಎರಡು ದಿನ ಬಾಕಿ ಇರುವಾಗಲೇ ಅಸಂಬದ್ಧ ಸ್ಟೇಟ್ ಮೆಂಟ್ ಗಳು ಚುನಾವಣೆಯ ದಿಕ್ಕನ್ನು ಬದಲಾಯಿಸಿರುವುದು ಸುಳ್ಳಲ್ಲ. ಚನ್ನಪಟ್ಟಣದಲ್ಲಿ ರೆಕಾರ್ಡ್ ಬ್ರೇಕಿಂಗ್ ಮತದಾನವಾಗಿದೆ. ಹೆಚ್ಚು ಮತದಾನ ಯಾರಿಗೆ ಲಾಭ ತರಬಹುದು ಅನ್ನುವುದೇ ಈಗಿರುವ ಇಂಟರೆಸ್ಟಿಂಗ್.

ಕುಮಾರಸ್ವಾಮಿ ಫ್ಯಾಮಿಲಿ ವಿರುದ್ಧ ಸಚಿವ ಜಮೀರ್ ಅಹಮ್ಮದ್ ಖಾನ್ ರ ಕರಿಯ ಲೂಸ್ ಟಾಕ್ ಕಾಂಗ್ರೆಸ್ ಗೆ ದೊಡ್ಡ ಹಿನ್ನಡೆ ತಂದಿರುವುದಂತೂ ಸುಳ್ಳಲ್ಲ. ಜಮೀರ್ ಸ್ಟೇಟ್ ಮೆಂಟ್ ಕಾಂಗ್ರೆಸ್ ಗೆಲುವನ್ನು ಕಸಿದಿದೆ ಅನ್ನುವ ಬಗ್ಗೆ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ. ಆದರೆ ಈ ಒಂದು ಕಾರಣದಿಂದಲೇ ಚುನಾವಣೆಯ ಸೋಲು ಗೆಲುವನ್ನು ನಿರ್ಧರಿಸುವುದು ಅಸಾಧ್ಯ. ಚನ್ನಪಟ್ಟಣದ ಮುಸ್ಲಿಂ ಏರಿಯಾಗಳಲ್ಲಿ ಅತೀ ಹೆಚ್ಚಿನ ಮತದಾನವಾಗಿರುವುದು, ಇತ್ತ ಒಕ್ಕಲಿಗ ಸಮುದಾಯ ಕೂಡ ಹೆಚ್ಚಿನ ಪ್ರಮಾಣದಲ್ಲಿ ಮತದಾನದಲ್ಲಿ ಭಾಗವಹಿಸಿರುವುದು ಫಲಿತಾಂಶದ ದಿಕ್ಕನ್ನೇ ಬದಲಾಯಿಸುವ ಸಾಧ್ಯತೆ ಇದೆ. ಒಂದಂತೂ ಸ್ಪಷ್ಟ. ಪೋಟೋ ಫಿನಿಷಿಂಗ್ ಆಗಿದೆ ಇಲ್ಲಿನ ಮತದಾನ. ಯಾರೇ ಗೆದ್ದರೂ ಅಲ್ಪ ಮತಗಳ ಮುನ್ನಡೆ ಮಾತ್ರ.

ಕಳೆದ ಎರಡು ಚುನಾವಣೆಗಳಲ್ಲಿ ನಿಖಿಲ್ ಸೋತಿರುವುದು ಕ್ಷೇತ್ರದಲ್ಲಿ ಸಿಂಪತಿ ಉಂಟು ಮಾಡಿದೆ. ಇದು ಅವರ ಗೆಲುವನ್ನು ಸುಲಭವಾಗಿಸುತ್ತಾ ಕಾದು ನೋಡಬೇಕಿದೆ. ರಾಜ್ಯದ ಕಾಂಗ್ರೆಸ್ ಸರಕಾರವೇ ಚನ್ನಪಟ್ಟಣದಲ್ಲಿ ಬೀಡು ಬಿಟ್ಟಿತ್ತು. ಹತ್ತಕ್ಕಿಂತಲೂ ಅಧಿಕ ಸಚಿವರು ಚುನಾವಣೆಯಲ್ಲಿ ಕೆಲಸ ಮಾಡಿದ್ದಾರೆ. ಡಿಕೆಶಿ ಬ್ರದರ್ಸ್ ರಣತಂತ್ರ ಯೋಗೇಶ್ವರ್ ಗೆ ವರದಾನವಾಗುತ್ತಾ?

ಚುನಾವಣೆಯಲ್ಲಿ ಒಂದೊಂದು ಸ್ಟೇಟ್ ಮೆಂಟ್ ಪ್ರಾಮುಖ್ಯತೆ ಪಡೆದಿರುತ್ತದೆ. ಲೆಕ್ಕಾಚಾರವನ್ನು ಅದಲು ಬದಲು ಮಾಡುತ್ತೆ. ಇದಕ್ಕೆ ಚನ್ನಪಟ್ಟಣ ಬೆಸ್ಟ್ ಎಕ್ಸಾಂಪಲ್. ಜಮೀರ್ ರ ಕರಿಯ ಕುಮಾರಸ್ವಾಮಿ ಹೇಳಿಕೆ ಕಾಂಗ್ರೆಸ್ ಗೆ ಡ್ಯಾಮೇಜ್ ತಂದುಕೊಟ್ಟಿದೆ. ಈ ಮಧ್ಯೆ ಮುಸ್ಲಿಂ ಏರಿಯಾಗಳಲ್ಲಿ ಅತೀ ಹೆಚ್ಚಿನ ಮತದಾನವಾಗಿರುವುದು ಇನ್ನೊಂದು ಕಡೆ ಕಾಂಗ್ರೆಸ್ ಗೆ ಹುರುಪನ್ನು ಹೆಚ್ಚಿಸಿದೆ. ಒಕ್ಕಲಿಗರು ಕೂಡ ಮತದಾನ ಪ್ರಕ್ರಿಯೆಯಲ್ಲಿ ಪೂರ್ಣವಾಗಿ ಭಾಗವಹಿಸಿರುವುದು ಕಾಂಗ್ರೆಸ್ಸಿಗೆ ಸಾಂಪ್ರದಾಯಿಕವಾಗಿ ಬೀಳುತ್ತಿದ್ದ ಆ ಸಮುದಾಯದ ಮತಗಳು ಕಾಂಗ್ರೆಸ್ ನ್ನು ಕೈ ಬಿಡದೇ ಇದ್ದರೆ ಯೋಗೇಶ್ವರ್ ಗೆಲುವು ಸಲೀಸು. ಇಲ್ಲವಾದರೆ ನಿಖಿಲ್ ಈ ಬಾರಿ ಚಕ್ರವ್ಯೂಹ ಭೇದಿಸುವುದು ಫಿಕ್ಸ್. ಬಹುತೇಕ ಮಾಧ್ಯಮಗಳು, ವರದಿಗಳು ನಿಖಿಲ್ ಪರವಾಗಿ 51%, ಯೋಗೇಶ್ವರ್ ಪರವಾಗಿ 49% ಗೆಲುವಿನ ಸಾಧ್ಯತೆಯನ್ನು ಹೇಳುತ್ತಿದೆ. ಆದರೆ ಇಲ್ಲಿ ಯಾರಿಗೂ ನಾವೇ ಗೆಲ್ಲುತ್ತೇವೆ ಎಂದು ಎದೆ ತಟ್ಟಿ ಹೇಳುವ ಧೈರ್ಯವಂತೂ ಇಲ್ಲ. ಪೋಟೋ ಫಿನಿಷಿಂಗ್ ಆಗಿರುವ ಚನ್ನಪಟ್ಟಣದ ರಿಸಲ್ಟ್ ಎಲ್ಲರನ್ನೂ ಒಂಟಿ ಕಾಲಲ್ಲಿ ನಿಲ್ಲಿಸಿದೆ. ಯಾವುದಕ್ಕೂ ನವೆಂಬರ್ 23 ರವರೆಗೆ ಕಾಯಲೇಬೇಕಿದೆ.